ಶೇ 100 ಫಲಿತಾಂಶಕ್ಕಾಗಿ ಶಿಕ್ಷಕರಿಗೆ ಪಾಠ!

7

ಶೇ 100 ಫಲಿತಾಂಶಕ್ಕಾಗಿ ಶಿಕ್ಷಕರಿಗೆ ಪಾಠ!

Published:
Updated:

ಗದಗ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರಿಗೆ ವಿಶೇಷ ಪಾಠ ಹೇಳುವ ಯೋಜನೆ ರೂಪಿಸಿದೆ.ಶಿಕ್ಷಕರಿಗೆ ಪಾಠವೇ ಎಂದು ಅಚ್ಚರಿ ಪಡಬೇಡಿ. ಅನುದಾನಿತ ಮತ್ತು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರು ಮತ್ತು ಸಹಾಯಕ ಶಿಕ್ಷಕರಿಗೆ ಐದು ದಿನಗಳ ಕಾಲ ತರಬೇತಿ ಹಮ್ಮಿಕೊಳ್ಳಲಾಗಿದೆ. ತರಬೇತಿ ಅವಧಿಯಲ್ಲಿ ಮಕ್ಕಳಿಗೆ ವಿಷಯವನ್ನು ಹೇಗೆ ಅರ್ಥ ಮಾಡಿಸಬೇಕು, ಕ್ಲಿಷ್ಟ ವಿಷಯಗಳ ಸರಳ ಬೋಧನೆ ಹಾಗೂ ಕಲಿಕೆ ಕುರಿತು ತಜ್ಞರು ಪಾಠ ಹೇಳಲಿದ್ದಾರೆ.ಶೇ 100ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸನ್ಮಾನ, ಪ್ರಶಸ್ತಿಪತ್ರ ವಿತರಣೆ ಹಾಗೂ ಶೇ 75ರಷ್ಟು ಫಲಿತಾಂಶ ಪಡೆದ ಶಾಲೆಯ ಶಿಕ್ಷಕರನ್ನು ಸಮಾರಂಭದಲ್ಲಿ ಸನ್ಮಾನಿಸುವ ಮೂಲಕ ಉತ್ತೇಜಿಸುವ ಕಾರ್ಯಕ್ಕೆ ಇಲಾಖೆ ಮುಂದಾಗಿದೆ.ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ  2007 ಮತ್ತು 2008ರಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದ ಜಿಲ್ಲೆ 2010ರಲ್ಲಿ 33ನೇ ಸ್ಥಾನಕ್ಕೆ ಕುಸಿಯಿತು. 2011-12ರಲ್ಲಿ 22ನೇ ಸ್ಥಾನದಲ್ಲಿದ್ದು, ಪ್ರಸಕ್ತ ವರ್ಷ ಹತ್ತನೇ ಸ್ಥಾನದೊಳಗೆ ಬರಲು  ಶತಯಗತಾಯ ಪ್ರಯತ್ನಿಸಲಾಗುತ್ತಿದೆ. ರೋಣ ತಾಲ್ಲೂಕಿನ ಅನುದಾನರಹಿತ ಪ್ರೌಢಶಾಲೆಗೆ ಶೂನ್ಯ ಫಲಿತಾಂಶ ಬಂದಿದ್ದು, ಒಂಬತ್ತು ಶಾಲೆಗಳು ಶೇ 40ಕ್ಕಿಂತ ಕಡಿಮೆ ಫಲಿತಾಂಶ ಪಡೆದಿವೆ.ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕರನ್ನು ಮನವೊಲಿಸಿ ಸರದಿಯಂತೆ ತರಗತಿ ಆರಂಭಕ್ಕೂ ಮುನ್ನ ಹಾಗೂ ಶಾಲೆ ಮುಗಿದ ಬಳಿಕ ಒಂದು ಗಂಟೆ ಮಕ್ಕಳಿಗೆ ಗಣಿತ, ಇಂಗ್ಲಿಷ್ ವಿಷಯ ಬೋಧಿಸಲಾಗುತ್ತಿದೆ. ಆ ಶಾಲೆಗಳ ಮೌಲ್ಯಮಾಪನ ನಡೆಸಿ ತಜ್ಞರು ಕಾರಣವನ್ನು ಕಂಡುಕೊಂಡಿದ್ದಾರೆ.ಮಕ್ಕಳಲ್ಲಿ ಪರೀಕ್ಷೆ ಭಯ ಮತ್ತು ಆತಂಕ ನಿವಾರಣೆ ಮಾಡಲು ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಅವರಿಂದ ಆತ್ಮವಿಶ್ವಾಸ ತುಂಬಿಸಲು ನಿರ್ಧರಿಸಲಾಗಿದೆ.ಅಲ್ಲದೇ ಮಕ್ಕಳ ಕಲಿಕೆಗೆ ಪೂರಕವಾಗಿ ಸರ್ಕಾರಿ ಶಾಲೆಯ ಶಿಕ್ಷಕರು ಅನುದಾನರಹಿತ ಶಾಲೆಯಲ್ಲಿ ವಿಷಯ ಕುರಿತು ಬೋಧನೆ ಮಾಡುವ ಮೂಲಕ ತಮ್ಮ ಅನುಭವ ಹಂಚಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.ಬ್ಲಾಕ್ ಮಟ್ಟದಲ್ಲಿ ಮುಖ್ಯ ಶಿಕ್ಷಕರ ಸಭೆ ನಡೆಸಿ ಫಲಿತಾಂಶ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಸ್ಪರ್ಧೆ, ಸರಣಿ ಪರೀಕ್ಷೆ, ಹಿಂದುಳಿದ ವಿದ್ಯಾರ್ಥಿಗಳ ಮೇಲೆ ಗಮನ, ಮಾದರಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಸೂಚಿಸಲಾಗಿದೆ.ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲು ಡಿಡಿಪಿಐ ಮತ್ತು ಬಿಇಒ ನೇತೃತ್ವದಲ್ಲಿ 10 ತಂಡ ರಚಿಸಲಾಗಿದ್ದು, ತಂಡದ ಸದಸ್ಯರು ಶಾಲೆಯ ಶಿಕ್ಷಕರು ಮತ್ತು ಮಕ್ಕಳ ಪ್ರಗತಿ ಪರಿಶೀಲಿಸಿದ್ದಾರೆ. ಕಲಿಕೆಯಲ್ಲಿ ಹಿಂದುಳಿದಿರುವ ಶಾಲೆಯ ಹತ್ತು ವಿದ್ಯಾರ್ಥಿಗಳನ್ನು ಶಿಕ್ಷಕರೊಬ್ಬರು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವ ಸಲುವಾಗಿ ದತ್ತು ಯೋಜನೆ ರೂಪಿಸಲಾಗಿದೆ.

`ಡಿಸೆಂಬರ್ ಅಂತ್ಯಕ್ಕೆ ಪಠ್ಯ ಪೂರ್ಣ'

`ಡಿಸೆಂಬರ್ ಅಂತ್ಯಕ್ಕೆ ಪಠ್ಯ ಪೂರ್ಣಗೊಳಿಸಲು ಸೂಚಿಸಲಾಗಿದೆ'  ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜೀವ ನಾಯಕ `ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿದ್ದಾರೆ.`ಜನವರಿಯಲ್ಲಿ ಪುನಾರವರ್ತನೆ ಮಾಡಬೇಕು. ಈ ಬಾರಿ ಹತ್ತು ಸ್ಥಾನದೊಳಗೆ ಬರಲು ಹಲವು ಕಾರ್ಯಕ್ರಮ ರೂಪಿಸಲಾಗಿದೆ. ದೂರವಾಣಿ ಸಂಪರ್ಕ ಹೊಂದಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಕರೆ ಮಾಡಿ ಅರ್ಥವಾಗದ ವಿಷಯದ ಕುರಿತು ಬೆಳಿಗ್ಗೆ ಮತ್ತು ರಾತ್ರಿ ಚರ್ಚಿಸಲಿದ್ದಾರೆ. ಬಳ್ಳಾರಿಯಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೆ ತಂದ ಬಳಿಕ ಫಲಿತಾಂಶದಲ್ಲಿ ಸುಧಾರಣೆಯಾಗಿದೆ. ಜಿಲ್ಲೆಯ ನರಗುಂದ ಮತ್ತು ಶಿರಹಟ್ಟಿಯಲ್ಲಿ ಜಾರಿಗೆ ತರಲಾಗಿದೆ' ಎಂದರು.

ಕೆಡಿಪಿ ಸಭೆ ಮುಂದೂಡಿಕೆ

ಗದಗ:
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇದೇ 11 ರಂದು ಏರ್ಪಡಿಸಲಾಗಿದ್ದ  ಕೆಡಿಪಿ ಸಭೆಯನ್ನು 12ರ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry