ಮಂಗಳವಾರ, ನವೆಂಬರ್ 19, 2019
25 °C

ಶೇ 3ರ ಬಡ್ಡಿಯನ್ನೇ ಆಕರಿಸಲು ಆಗ್ರಹ

Published:
Updated:

ಶಿರಸಿ: ರೈತರ ಹಾಗೂ ಸಹಕಾರಿ ಸಂಘಗಳ ಆರ್ಥಿಕ ಹಿತದೃಷ್ಟಿಯಿಂದ ಮಧ್ಯವರ್ತಿ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಅಲ್ಪಾವಧಿ, ಮಧ್ಯಮಾವಧಿ ಸಾಲಗಳಿಗೆ ಶೇ 3ರ ಬಡ್ಡಿಯನ್ನೇ ಆಕರಿಸುವಂತಾಗಬೇಕು ಹಾಗೂ ಸಹಕಾರಿ ಸಂಘಗಳಿಂದ ನೀಡಿದ ಸಾಲಗಳಿಗೆ ಶೇ 13ರ ಬಡ್ಡಿ ನೀಡಬೇಕೆಂಬ ಆದೇಶ ಹಿಂಪಡೆಯುವಂತೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ ಸರ್ಕಾರಕ್ಕೆ ಪತ್ರ ಬರೆದು ವಿನಂತಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರಿಗೆ ಶೇ 3ರ ಬಡ್ಡಿದರ ಯೋಜನೆ ಸಂಪೂರ್ಣ ಸಹಾಯ ಸಹಕಾರಿ ಸಂಘಕ್ಕೆ ಹಾಗೂ ರೈತರಿಗೆ ಸಿಗಬೇಕು. ರಾಜ್ಯ ಸರ್ಕಾರದ ಆದೇಶದ ಪ್ರಕಾರ ಅಲ್ಪಾವಧಿ, ಮಧ್ಯಾವಧಿ, ದೀರ್ಘಾವಧಿ ಕೃಷಿ ಸಾಲಗಳಿಗೆ ಶೇ 3ರ ಬಡ್ಡಿ ಈ ಹಿಂದೆಯೇ ಘೋಷಿಸಲಾಗಿತ್ತು. ಆದರೆ ಮಾರ್ಚ್ 20ರಂದು ಮಾಧ್ಯಮಿಕ ಕೃಷಿ ಸಾಲ ಬಡ್ಡಿ ಆಕರಣೆ ಕುರಿತಾಗಿ ಬ್ಯಾಂಕ್ ಆದೇಶ ಮಾಡಿದೆ. ಈಗಾಗಲೇ ರೈತರಿಂದ ಶೇ 3ರಂತೆ ಬಡ್ಡಿಯನ್ನು ಸಹಕಾರಿ ಸಂಘಗಳು ಭರಣ ಮಾಡಿಕೊಂಡಿವೆ. ಆದೇಶದನ್ವಯ ಈಗ ಶೇ 13ರಷ್ಟು ಬಡ್ಡಿಯನ್ನು ಮಧ್ಯವರ್ತಿ ಬ್ಯಾಂಕಿಗೆ ತುಂಬಲು ಬ್ಯಾಂಕ್ ಆದೇಶ ಮಾಡಿರುವುದು ಸಹಕಾರಿ ಸಂಘಗಳಿಗೆ ಆರ್ಥಿಕ ಪೆಟ್ಟು ನೀಡಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.ಮಧ್ಯವರ್ತಿ ಬ್ಯಾಂಕ್ ವ್ಯತ್ಯಾಸದ ಬಡ್ಡಿ ಹಣವನ್ನು ಸರ್ಕಾರದಿಂದ ಬಂದ ತಕ್ಷಣ ಅವರಿಂದ ಪಡೆದುಕೊಳ್ಳಬೇಕೆ ಹೊರತು ಸಂಪೂರ್ಣ ಬಡ್ಡಿ ಹಣವನ್ನು ಈಗಲೇ ತುಂಬಬೇಕು ಎನ್ನುವುದು ಸಹಕಾರಿ ಸಂಘಗಳಿಗೆ ಕಷ್ಟವಾಗುತ್ತದೆ. ಈ ವಿಷಯದಲ್ಲಿ ಸರ್ಕಾರ ಸ್ಪಷ್ಟ ಆದೇಶ ಮಾಡದೇ ಇರುವುದರಿಂದ ಮಧ್ಯವರ್ತಿ ಬ್ಯಾಂಕ್ ಸಂಪೂರ್ಣ ಸಾಲದ ಬಡ್ಡಿ ಹಣವನ್ನು ಭರಣ ಮಾಡಬೇಕೆಂದು ಸಹಕಾರಿ ಸಂಘಗಳಿಗೆ ತಿಳಿಸಿರುವುದಾಗಿ ಸರ್ಕಾರಿ ಆದೇಶದಲ್ಲಿಯೇ ತಿಳಿಸಲಾಗಿದ್ದು, ಆದರೆ ಸಹಕಾರಿ ಸಂಘಗಳು ಸಂಪೂರ್ಣ ಬಡ್ಡಿಯನ್ನು ತುಂಬಲು ಮುಂದಾದಲ್ಲಿ ಪರೋಕ್ಷವಾಗಿ ಅದನ್ನು ರೈತರೇ ಭರಿಸಿಕೊಳ್ಳಬೇಕಾಗಿರುವುದರಿಂದ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೆ ಉಂಟಾಗುತ್ತದೆ. ಕಾರಣ ಸರ್ಕಾರದಿಂದ ಈ ಕುರಿತಾಗಿ ಸ್ಪಷ್ಟವಾದ ನಿರ್ದೇಶನ ಹಾಗೂ ಶೇ 3ರ ಬಡ್ಡಿ ಆದೇಶದ ವಿವರಣೆ ನೀಡಿ ಸಹಕಾರಿ ಸಂಘಗಳಿಗೆ, ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿನಂತಿಸಲಾಗಿದೆ.

ಪ್ರತಿಕ್ರಿಯಿಸಿ (+)