ಶೇ 3ರ ಬಡ್ಡಿ ದರ ನಿಗದಿಗೆ ಸಲಹೆ

7

ಶೇ 3ರ ಬಡ್ಡಿ ದರ ನಿಗದಿಗೆ ಸಲಹೆ

Published:
Updated:

ನವದೆಹಲಿ (ಪಿಟಿಐ): ಬೆಳೆ ಸಾಲವನ್ನು ಸಕಾಲಕ್ಕೆ  ಮರು ಪಾವತಿಸುವ ರೈತರಿಗೆ ಶೇ 3ರ ಬಡ್ಡಿ ದರದಲ್ಲಿ ಸಾಲ ನೀಡಲು ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳಬೇಕು  ಎಂದು ಕೃಷಿ ಸಚಿವಾಲಯವು ತನ್ನ ಬಜೆಟ್ ಪೂರ್ವ ಬೇಡಿಕೆಯಲ್ಲಿ ಒತ್ತಾಯಿಸಿದೆ. ಸದ್ಯಕ್ಕೆ ರೂ 3 ಲಕ್ಷದವರೆಗಿನ  ಅಲ್ಪಾವಧಿ ಬೆಳೆ ಸಾಲಕ್ಕೆ ಶೇ 4ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಸಕಾಲಕ್ಕೆ ಸಾಲ ಮರು ಪಾವತಿಸುವ ರೈತರಿಗೆ ಈ ಬಡ್ಡಿ ದರದಲ್ಲಿ ಇನ್ನೂ ಶೇ 1ರಷ್ಟು ಸಬ್ಸಿಡಿಯನ್ನು 2012-13ನೇ ಸಾಲಿನ ಮುಂಗಡ ಪತ್ರದಲ್ಲಿ ಘೋಷಿಸಬೇಕು ಎಂದು ಕೃಷಿ ಸಚಿವಾಲಯವು ಕೇಳಿಕೊಂಡಿದೆ.ಅಗ್ಗದ ಬೆಳೆ ಸಾಲವು ದೇಶದ ಆಹಾರ ಧಾನ್ಯ ಉತ್ಪಾದನೆ ಹೆಚ್ಚಳಕ್ಕೆ ಗಮನಾರ್ಹ ಕೊಡುಗೆ ನೀಡುತ್ತದೆ ಎಂದು ಕೃಷಿ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. 2011-12ನೇ ಬೆಳೆ ಸಾಲಿನಲ್ಲಿ 250.42 ದಶಲಕ್ಷ ಟನ್‌ಗಳಷ್ಟು ಆಹಾರ ಧಾನ್ಯ ಉತ್ಪಾದನೆಯಾಗಿದೆ.  3 ಲಕ್ಷವರೆಗಿನ ಅಲ್ಪಾವಧಿ ಬೆಳೆ ಸಾಲ ಪಡೆಯುವ ರೈತರಿಗೆ ಕೇಂದ್ರ ಸರ್ಕಾರವು 2006-07ರಿಂದ ಬಡ್ಡಿ ಸಬ್ಸಿಡಿಯನ್ನು ಎಲ್ಲ ಬ್ಯಾಂಕ್, ಪ್ರಾದೇಶಿಕ  ಗ್ರಾಮೀಣ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್‌ಗಳಿಗೆ ನೀಡುತ್ತಿದೆ.ಆರಂಭದಲ್ಲಿ ಶೇ 7ರಷ್ಟು ಬಡ್ಡಿ ದರಕ್ಕೆ ಈ ಸಾಲ ಮಂಜೂರು ಮಾಡಲಾಗುತ್ತಿತ್ತು. 2010-11ರಿಂದ ಹೆಚ್ಚುವರಿಯಾಗಿ ಶೇ 2ರಷ್ಟು ಬಡ್ಡಿ ಸಬ್ಸಿಡಿ ಘೋಷಿಸಲಾಗಿತ್ತು. ಹೀಗಾಗಿ 2010-11ರಿಂದ ರೈತರಿಗೆ ಶೇ 5ರ ಬಡ್ಡಿ ದರದಲ್ಲಿ ಸಾಲ ದೊರೆಯುತ್ತಿತ್ತು.  2011-12ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ಹೆಚ್ಚುವರಿಯಾಗಿ ಶೇ 1ರಷ್ಟು ಬಡ್ಡಿ ಸಬ್ಸಿಡಿ ಘೋಷಿಸಲಾಗಿದೆ. ಇದರಿಂದ ಸಕಾಲಕ್ಕೆ ಸಾಲ ಮರು ಪಾವತಿ ಮಾಡುವ ರೈತರು ಶೇ 4ರ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಿದ್ದಾರೆ. 2012-13ನೇ ಹಣಕಾಸು ವರ್ಷದಲ್ಲಿ, ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಕೃಷಿ ವಲಯಕ್ಕೆ ರೂ 4,75,000 ಕೋಟಿಗಳಷ್ಟು ಸಾಲ ಮಂಜೂರು ಮಾಡಬೇಕು ಎಂದೂ ಕೃಷಿ ಸಚಿವಾಲಯ ಸಲಹೆ ನೀಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry