ಶೇ 30ರಷ್ಟು ಇಲಾಖೆ ಬೆಳಗಾವಿಗೆ ವರ್ಗಾಯಿಸಿ

7

ಶೇ 30ರಷ್ಟು ಇಲಾಖೆ ಬೆಳಗಾವಿಗೆ ವರ್ಗಾಯಿಸಿ

Published:
Updated:

ಹುಬ್ಬಳ್ಳಿ: ರಾಜ್ಯ ಸಚಿವಾಲಯದ ಶೇ 30ರಷ್ಟು ಇಲಾಖೆಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ವರ್ಗಾಯಿಸುವಂತೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದರು.ಹಳೇ ಮೈಸೂರು ಭಾಗದಲ್ಲಿ ಬಹುತೇಕ ನೀರಾವರಿ ಯೋಜನೆಗಳು ಮುಕ್ತಾಯಗೊಂಡಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಕಳಸಾ-ಬಂಡೂರಿ, ಮಹದಾಯಿ, ಕೃಷ್ಣಾ ಯೋಜನೆಗಳು ಇನ್ನೂ ಪೂರ್ಣಗೊಳ್ಳಬೇಕಿವೆ. ಈ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಹಾಗೂ ನೀರಾವರಿ ಇಲಾಖೆಗಳನ್ನು ಬೆಳಗಾವಿಗೆ ವರ್ಗಾಯಿಸಲು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.ಪಶುಸಂಗೋಪನೆ, ಶಿಕ್ಷಣ, ಜವಳಿ, ತೋಟಗಾರಿಕೆ, ಹಿಂದುಳಿದ ವರ್ಗಗಳ ಇಲಾಖೆ ಸೇರಿದಂತೆ ಹಲವು ಇಲಾಖೆಗಳನ್ನು ಬೆಳಗಾವಿಗೆ ವರ್ಗಾಯಿಸಲಿ. ಸಂಬಂಧಿಸಿದ ಇಲಾಖೆಯ ಸಚಿವರು ವಾರಕ್ಕೆ 2 ಬಾರಿ ಸುವರ್ಣ ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಿ ಉತ್ತರ ಕರ್ನಾಟಕ ಭಾಗದ ಕಡತಗಳನ್ನು ವಿಲೇವಾರಿ ಮಾಡಲಿ ಎಂದು ಆಗ್ರಹಿಸಿದರು.400 ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಿರುವ ಸುವರ್ಣ ವಿಧಾನಸೌಧ ಉಪಯೋಗವಿಲ್ಲದಂತಾಗುತ್ತದೆ. ತಿಂಗಳಿಗೆ 10 ಕೋಟಿ ರೂಪಾಯಿಗೆ ಹೆಚ್ಚು ಹಣ  ಕೇವಲ ನಿರ್ವಹಣೆಗಾಗಿಯೇ ವೆಚ್ಚ ಮಾಡಬೇಕಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅನಗತ್ಯವಾಗಿ ಹೊರೆ ಬೀಳಲಿದೆ ಎಂದರು.ಮುಂಬೈ ಹಾಗೂ ನಾಗಪುರದ ಮಾದರಿಯಲ್ಲಿ ವಿಧಾನಸಭೆ ಅಧಿವೇಶನಗಳನ್ನು ಬೆಂಗಳೂರು ಹಾಗೂ ಬೆಳಗಾವಿ ಎರಡೂ ಕಡೆ ಆಯೋಜಿಸುವುದರಿಂದ ಆಯಾ ಭಾಗಗಳ ಸಮಸ್ಯೆಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಲು ಸಾಧ್ಯ ಎಂದರು. ಜೆಡಿಎಸ್ ಮುಖಂಡರಾದ ಎನ್.ಎಚ್. ಕೋನರಡ್ಡಿ, ರಾಜಣ್ಣಾ ಕೊರವಿ, ವಸಂತ ಹೊರಟ್ಟಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry