ಶೇ .30 ಕಮಿಷನ್ ಅವ್ಯವಹಾರ ಬೆಳಕಿಗೆ!

7

ಶೇ .30 ಕಮಿಷನ್ ಅವ್ಯವಹಾರ ಬೆಳಕಿಗೆ!

Published:
Updated:

ಕೋಲಾರ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ನಡೆಸುವ ವಿದ್ಯಾರ್ಥಿನಿಲಯಗಳಿಗೆ ಆಹಾರಧಾನ್ಯ ಪೂರೈಸಲು ವಿಳಂಬ ಮಾಡಿರುವುದು, ನಿಗದಿಯಾದ ಹಣದಲ್ಲಿ ಶೇ 25-30ರಷ್ಟು ಹಣವನ್ನು ಕಡಿತ ಮಾಡಿ ವಾರ್ಡನ್‌ಗಳಿಗೆ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಪೂರೈಕೆ ಜವಾಬ್ದಾರಿ ಹೊತ್ತಿರುವ ಕೆಎಸ್‌ಸಿಸಿಎಫ್-  ಕರ್ನಾಟಕ ಸ್ಟೇಟ್ ಕನ್‌ಸೂಮರ್ ಕೋ ಅಪರೇಟಿವ್ ಫೆಡರೇಶನ್ ಮತ್ತು ಡಿಎಸ್‌ಎಂಎಸ್-ಡಿಸ್ಟ್ರಿಕ್ ಸಪ್ಲೈ ಅಂಡ್ ಮಾರ್ಕೆಂಟಿಂಗ್ ಸೊಸೈಟಿಗೆ ಕಾರಣ ಕೇಳಿ ಕಳೆದ ಜ,10ರಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ಸೋಜಿಗದ ಸಂಗತಿಯೆಂದರೆ ನೋಟಿಸ್ ಪಡೆದು 40 ದಿನವಾದರೂ ಈ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಉತ್ತರವನ್ನೇ ನೀಡಿಲ್ಲ.ಇದೇ ವೇಳೆ, ನಿಲಯಗಳಿಗೆ ಆಹಾರ ಪೂರೈಸುವ ಹಲವು ಗುತ್ತಿಗೆದಾರರು ಕಮಿಷನ್ ಕಡಿತ ಮಾಡಿಯೇ ಹಣ ನೀಡುತ್ತಾರೆ ಎಂದು ಇಲಾಖೆಗೆ ವಾರ್ಡನ್‌ಗಳು ಮಾಹಿತಿ ನೀಡಿರುವ ಸಂಗತಿಯೂ ಬೆಳಕಿಗೆ ಬಂದಿದೆ. ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಕೋಲಾರ ಮತ್ತು ಬಂಗಾರಪೇಟೆ ತಾಲ್ಲೂಕಿನ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಾರ್ಡನ್‌ಗಳೇ ಮಾಹಿತಿಯನ್ನು ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಶೇ 25ರಿಂದ 30ರಷ್ಟು ಹಣವನ್ನು ಕಡಿತ ಮಾಡಿ ನಿಲಯಗಳಿಗೆ ನೀಡಲಾಗಿದೆ ಎಂದು ತಿಳಿದುಬಂದಿರುವುದರಿಂದ, ಈ ಸಂಸ್ಥೆಗಳಿಗೆ ನೀಡಬೇಕಾದ ಹಣದಲ್ಲಿ ಅದನ್ನು ಏಕೆ ಕಡಿತಗೊಳಿಸಬಾರದು ಎಂಬುದಕ್ಕೆ ಕಾರಣವನ್ನೂ ನೋಟಿಸ್‌ನಲ್ಲಿ ಕೇಳಲಾಗಿದೆ ಎಂಬುದು ವಿಶೇಷ.ನಿಲಯಗಳಿಗೆ ಆಹಾರ ಪೂರೈಸಬೇಕಾದ ಗುತ್ತಿಗೆದಾರರು ಆಹಾರ ಪೂರೈಸುವ ಬದಲಿಗೆ ಪ್ರತಿ ವಿದ್ಯಾರ್ಥಿಗೆ ಇಲಾಖೆ ಮೀಸಲಿಸಿರಿದ ಹಣದಲ್ಲಿ ಶೇ.25ರಿಂದ 30ರಷ್ಟನ್ನು ಕಡಿತ ಮಾಡಿ ಹಣವನ್ನು ವಾರ್ಡನ್‌ಗಳಿಗೆ ನೀಡುತ್ತಿದ್ದಾರೆ. ವಾರ್ಡನ್‌ಗಳೇ ಆಹಾರವನ್ನು ಕೊಂಡು ತರುತ್ತಿದ್ದಾರೆ. ಹೀಗಾಗಿ ಆಹಾರ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದೆ ಎಂಬ ಆರೋಪಕ್ಕೆ ಈಗ ಬಲ ಬಂದಂತಾಗಿದೆ. ನೋಟಿಸ್‌ನ ಪ್ರತಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು ವಿವರ ಹೀಗಿದೆ.ಡಿಎಸ್‌ಎಂಎಸ್: ಕೋಲಾರ ತಾಲ್ಲೂಕಿನಲ್ಲಿರುವ ಮೆಟ್ರಿಕ್ ಪೂರ್ವ, ನಂತರದ ನಿಲಯಗಳು ಮತ್ತು ವಸತಿ ಶಾಲೆಗೆ ಕಳೆದ ಜೂನ್‌ನಿಂದ ಆಹಾರ ಸಾಮಗ್ರಿಗಳನ್ನು ಪೂರೈಸುತ್ತಿರುವ ಡಿಸ್ಟ್ರಿಕ್ ಸಪ್ಲೈ ಅಂಡ್ ಮಾರ್ಕೆಂಟಿಂಗ್ ಸೊಸೈಟಿಗೆ ಇಲಾಖೆಯು ನೀಡಿರುವ ನೋಟಿಸ್ ವಿವರ ಹೀಗಿದೆ.ನಿಲಯಗಳಿಗೆ ಆಹಾರ ಸಾಮಗ್ರಿಗಳನ್ನು ಸರಿಯಾದ ಸಮಯಕ್ಕೆ ಪೂರೈಸುತ್ತಿಲ್ಲವೇಕೆ? ಶೇ.30 ರಷ್ಟು ಹಣ ಕಡಿತಗೊಳಿಸಿ ಉಳಿಕೆ ಶೇ. 70 ರಷ್ಟು ಹಣ ಮಾತ್ರ ಗುತ್ತಿಗೆದಾರರು ನೀಡುತ್ತಿದ್ದಾರೆ. ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿಲ್ಲ ಎಂದು ನಿಲಯಕ್ಕೆ ಭೇಟಿ ನೀಡಿದ ಸಮಯದಲ್ಲಿ ಮೇಲ್ವಿಚಾರಕರು ತಿಳಿಸಿದ್ದಾರೆ. ಹಾಗೆ ಕಡಿತ ಮಾಡಲು ಕಾರಣವೇನು? ಕಳೆದ ನವೆಂಬರ್ ಕೊನೆವರೆಗೆ ಸಂಸ್ಥೆಗೆ ಇಲಾಖೆ ಪಾವತಿಸವಬೇಕಿರುವ ಆಹಾರ ಸಾಮಗ್ರಿ ಬಾಬ್ತು ಹಣದಲ್ಲಿ (ಮೆಟ್ರಿಕ್ ಪೂರ್ವ ನಿಲಯ- ರೂ. 38,69,061 ಮತ್ತು ಮೆಟ್ರಿಕ್ ನಂತರದ ನಿಲಯಗಳು ರೂ. 18,63,017 ) ಶೇ 30ರಷ್ಟನ್ನು ಕಡಿತಗೊಳಿಸಿ ಕ್ರಮವಾಗಿ ರೂ 27,08,343 ಮತ್ತು ರೂ 13,04,175 ಅನ್ನು ಯಾಕೆ ಪಾವತಿಸಬಾರದು? ಎಂಬ ಕಾರಣವನ್ನೂ ನೋಟಿಸ್‌ನಲ್ಲಿ ಕೇಳಲಾಗಿದೆ.ಕೆಎಸ್‌ಸಿಸಿಎಫ್: ಬಂಗಾರಪೇಟೆ ತಾಲ್ಲೂಕಿನ ಮೆಟ್ರಿಕ್ ಪೂರ್ವ/ ನಂತರದ ನಿಲಯಗಳು, ವಸತಿ ಶಾಲೆಗೆ ಕಳೆದ ಜೂನ್‌ನಿಂದ ಆಹಾರ ಸಾಮಗ್ರಿಗಳನ್ನು ಪೂರೈಸುತ್ತಿರುವ ಕೆಎಸ್‌ಸಿಸಿಎಫ್ ಕೂಡ ಸರಿಯಾದ ಸಮಯಕ್ಕೆ ಆಹಾರ ಪೂರೈಸುತ್ತಿಲ್ಲ. ಶೇ 25ರಷ್ಟು ಕಡಿತಗೊಳಿಸಿ ಹಣ ನೀಡುವ ಕುರಿತು ಅಧಿಕಾರಿಗೆ ವಾರ್ಡನ್‌ಗಳು ಮಾಹಿತಿ ನೀಡಿದ್ದಾರೆ. ಅದಕ್ಕೆ ನೋಟಿಸ್‌ನಲ್ಲಿ ಕಾರಣವನ್ನು ಕೇಳಲಾಗಿದೆ.ಹಣ ಕಡಿತ ಮಾಡಿರುವ ಮಾಹಿತಿ ಮೇರೆಗೆ, ಕಳೆದ ನವೆಂಬರ್ ಕೊನೆವರೆಗೆ ಸಂಸ್ಥೆಗೆ ಇಲಾಖೆ ಪಾವತಿಸವಬೇಕಿರುವ ಆಹಾರ ಸಾಮಗ್ರಿ ಬಾಬ್ತು ಹಣದಲ್ಲಿ (ಮೆಟ್ರಿಕ್ ಪೂರ್ವ ನಿಲಯಗಳು-ರೂ. 36,46,500, ಮೆಟ್ರಿಕ್ ನಂತರದ ನಿಲಯಗಳು -ರೂ. 11,92,500) ಶೇ. 25 ರಷ್ಟು ಕಡಿತಗೊಳಿಸಿ ಕ್ರಮವಾಗಿ ರೂ 27,34,875 ಮತ್ತು ರೂ. 8,94,375) ಯಾಕೆ ಪಾವತಿಸಬಾರದು ಎಂಬ ಕಾರಣವನ್ನು ಕೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry