ಶೇ 40ರಷ್ಟು ಮಕ್ಕಳು ಶಾಲೆಯಿಂದ ಹೊರಗೆ

7

ಶೇ 40ರಷ್ಟು ಮಕ್ಕಳು ಶಾಲೆಯಿಂದ ಹೊರಗೆ

Published:
Updated:

ಬೆಂಗಳೂರು: `ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದೇಶದಲ್ಲಿ ಶೇ 40ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂಬ ಅಂಶವು ಮಹಾಲೇಖಪಾಲರ (ಸಿಎಜಿ) ವರದಿಯಿಂದ ಬಹಿರಂಗವಾಗಿದೆ~ ಎಂದು ಕ್ರೈನ್ ಸಂಸ್ಥೆಯ (ಚೈಲ್ಡ್ ರೈಟ್ಸ್ ಅಂಡ್ ಯು) ದಕ್ಷಿಣ ವಿಭಾಗದ ನಿರ್ದೇಶಕಿ ರೆಗಿನಾ ಥಾಮಸ್ ಹೇಳಿದರು.ದೇಶದಲ್ಲಿ ಮಕ್ಕಳ ಶಿಕ್ಷಣ ಕುರಿತ ಸಮೀಕ್ಷಾ ವರದಿಯನ್ನು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, `ಈ ಸಮೀಕ್ಷೆಯಲ್ಲಿ ಸಿಎಜಿ ವರದಿಯ ಜತೆಗೆ, ದೇಶದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಕುರಿತಾದ ಸಮಗ್ರ ಅಧ್ಯಯನವು ಒಳಗೊಂಡಿವೆ~ ಎಂದರು.`ದೇಶದಲ್ಲಿ 6ರಿಂದ 14 ವರ್ಷದೊಳಗಿನ 1.36 ಕೋಟಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಾಲೆಗೆ ಪ್ರವೇಶ ಪಡೆದ ಮಕ್ಕಳಲ್ಲಿ ಶೇ 39 ರಷ್ಟು ಮಕ್ಕಳು ಒಂದನೇ ತರಗತಿಯಲ್ಲೇ ಶಾಲೆ ಬಿಟ್ಟಿದ್ದಾರೆ. ನಗರ ಪ್ರದೇಶಗಳಲ್ಲಿ ಶೇ 80.3 ಗಂಡುಮಕ್ಕಳು ಶಿಕ್ಷಣ ಪಡೆಯುತ್ತಿದ್ದರೆ, ಶೇ 66.3 ಹೆಣ್ಣುಮಕ್ಕಳು ಮಾತ್ರ ಶಿಕ್ಷಣ ಹೊಂದುತ್ತಿರುವುದು ಶಿಕ್ಷಣದಲ್ಲಿನ ಲಿಂಗ ಅಸಮಾನತೆಯನ್ನು ಎತ್ತಿ ತೋರುತ್ತಿದೆ~ ಎಂದು ಅವರು ಕಳವಳ ವ್ಯಕ್ತಪಡಿಸಿದರು.`ಲಿಂಗ ತಾರತಮ್ಯದ ವಿಶ್ಲೇಷಣೆಯಲ್ಲಿ 2003-04 ರಲ್ಲಿ ಶೇ 4.8 ಮತ್ತು 2008-09 ರಲ್ಲಿ ಶೇ 3.23 ರಷ್ಟು ಹೆಣ್ಣುಮಕ್ಕಳು ಪ್ರಾಥಮಿಕ ಶಾಲೆಯಿಂದ ಹೊರಗುಳಿದಿದ್ದಾರೆ~ ಎಂದರು.`ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಕೆಲವು ರಾಜ್ಯಗಳಲ್ಲಿ 2009 ರಲ್ಲಿ ಶೇ 6.8 ಹಾಗೂ 2010 ರಲ್ಲಿ ಶೇ 5.9 ರಷ್ಟು 11ರಿಂದ 14 ವರ್ಷದ ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇನ್ನು ಕೆಲವು ರಾಜ್ಯಗಳಲ್ಲಿ ಈ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ರಾಜಸ್ತಾನದಲ್ಲಿ ಶೇ 12.1 ಮತ್ತು ಉತ್ತರ ಪ್ರದೇಶದಲ್ಲಿ ಶೇ 9.7 ರಷ್ಟು ಹೆಣ್ಣು ಮಕ್ಕಳು ಶಾಲೆ ತೊರೆದಿರುವುದು ಕಂಡುಬಂದಿದೆ~ ಎಂದು ಮಾಹಿತಿ ನೀಡಿದರು.`ದೇಶದಲ್ಲಿ ಒಟ್ಟಾರೆ ಇರುವ 49.65 ಕೋಟಿ ಅಕ್ಷರಸ್ಥರಲ್ಲಿ ಮಹಿಳಾ ಸಾಕ್ಷರರು ಶೇ 53.47 ಇದ್ದಾರೆ. ಶೇ 45 ರಷ್ಟು ಹೆಣ್ಣುಮಕ್ಕಳನ್ನು 18 ವರ್ಷದೊಳಗೆ ಮದುವೆಯನ್ನು ಮಾಡಲಾಗುತ್ತದೆ. ಶೇ 13 ರಷ್ಟು ಹೆಣ್ಣುಮಕ್ಕಳು 18 ವರ್ಷದೊಳಗಿಂತ ಮುಂಚೆಯೇ ತಾಯಿಯಾಗುತ್ತಿದ್ದಾರೆ. ಇದರಿಂದ ಹೆಣ್ಣು ಮಕ್ಕಳ ಶಿಕ್ಷಣದ ಹಿನ್ನಡೆಯಾಗುತ್ತಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ~ ಎಂದು ವಿವರಿಸಿದರು.`ಸಮೀಕ್ಷೆಯಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬೀರುವ ಕಾನೂನುಗಳು ಮತ್ತು ದೇಶದಲ್ಲಿ ಅವರು ಎದುರಿಸುತ್ತಿರುವ ವಾಸ್ತವ ಸಂಗತಿಗಳ ಬಗ್ಗೆ ವಿಶ್ಲೇಷಣೆ ನಡೆಸಲಾಗಿದೆ. ಇದಲ್ಲದೆ, ದೇಶದ ಐದು ಮಹಾನಗರಗಳ ಕೊಳೆಗೇರಿಗಳು, ಪುನರ್ವಸತಿ ಕೇಂದ್ರಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ~ ಎಂದು ವಿವರಿಸಿದರು. ಸಮೀಕ್ಷಾ ಸಮಿತಿಯ ಶಿಫಾರಸುಗಳು

ಶಾಲೆಗಳಲ್ಲಿ ಸಮರ್ಪಕ ಮೂಲಸೌಕರ್ಯಗಳನ್ನು ಒದಗಿಸಬೇಕು.

ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕವಾದ ಶೌಚಾಲಯ ವ್ಯವಸ್ಥೆ ಮಾಡಬೇಕು.

ತರಬೇತಿ ಹೊಂದಿದ ಶಿಕ್ಷಕಿಯರನ್ನು ನೇಮಿಸಿಕೊಳ್ಳಬೇಕು.

ಈಗಾಗಲೇ ಜಾರಿಯಾಗಿರುವ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು.

ಹೆಣ್ಣುಮಕ್ಕಳ ಬಗೆಗಿನ ಸಮಾಜದ ಕೀಳು ಧೋರಣೆಯನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕು.

ಆಘಾತಕಾರಿ ಬೆಳವಣಿಗೆ

`ದೇಶದಲ್ಲಿ ಮಕ್ಕಳು ಶಾಲೆಗಳಿಂದ ಹೊರಗುಳಿಯುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಸಮರ್ಪಕವಾದ ಶಿಕ್ಷಣ ದೊರೆ ಯದೇ ಇರುವುದು ಕಳವಳಕಾರಿ ಅಂಶವಾಗಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಾತಾ ವರಣ ಸೃಷ್ಟಿಸಲು ಸರ್ಕಾರ ಅಗತ್ಯ ಕ್ರಮ ಗಳನ್ನು ಕೈಗೊಳ್ಳಬೇಕು~

  -ರೆಗಿನಾ ಥಾಮಸ್,

ದಕ್ಷಿಣ ವಿಭಾಗದ ನಿರ್ದೇಶಕಿ,  ಕ್ರೈನ್ ಸಂಸ್ಥೆ

 

ಸಮೀಕ್ಷಾ ವರದಿಯ ಕೆಲವು ಅಂಶಗಳು

ಹೆಣ್ಣು ಮಕ್ಕಳು ಶಾಲೆಗೆ ಹೋಗುವ ಸಂದರ್ಭದಲ್ಲಿ ತಾರತಮ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಶಾಲೆಗಳಲ್ಲಿ ಹೆಣ್ಣುಮಕ್ಕಳು ಶೋಷಣೆಗೆ ಒಳಗಾಗುತ್ತಾರೆ.

ಹೆಣ್ಣು ಮಕ್ಕಳಿಗಾಗಿ ಇರುವ ಯೋಜನೆಗಳ ಬಗ್ಗೆ ಸಾಕಷ್ಟು ಜನರಿಗೆ ಅರಿವಿಲ್ಲ.

 

 

 

 

 

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry