ಶೇ 72ರಷ್ಟು ದಾಖಲೆ ಮತದಾನ

7

ಶೇ 72ರಷ್ಟು ದಾಖಲೆ ಮತದಾನ

Published:
Updated:
ಶೇ 72ರಷ್ಟು ದಾಖಲೆ ಮತದಾನ

ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನವು ಬುಧವಾರ  ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಯುತವಾಗಿ ನಡೆಯಿತು.ಮತದಾರರು ಬೆಳಿಗ್ಗೆಯಿಂದಲೇ ಉತ್ಸಾಹದಿಂದ ಮತಗಟ್ಟೆಗಳತ್ತ ಧಾವಿಸಿದರು. ಕೆಲವೆಡೆ ಸಂಜೆ 5 ಗಂಟೆ ಒಳಗೆ ಮತಗಟ್ಟೆಗೆ ಬಂದ ಮತದಾರರು ಸಂಜೆ 6.30ರವರೆಗೂ ತಮ್ಮ ಹಕ್ಕು ಚಲಾಯಿಸಿದರು.ಕಳೆದ ಬಾರಿಯ ಮತದಾನದ ಪ್ರಮಾಣಕ್ಕೆ ಹೋಲಿಸಿದರೆ, ಬುಧವಾರ ದಾಖಲೆಯ  ಶೇ 72ರಷ್ಟು ಮತದಾನವಾಗಿದೆ. 2008ರಲ್ಲಿ ಶೇ 55 ಹಾಗೂ 2009ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಶೇ59ರಷ್ಟು ಮತದಾರರು ಮತದಾನ ಮಾಡಿದ್ದರು.ಕೆಲವು ಗ್ರಾಮಗಳಲ್ಲಿ ಮಧ್ಯಾಹ್ನ 2ಕ್ಕೆ ಶೇ 60ರಷ್ಟು ಮತದಾನ ಪೂರ್ಣಗೊಂಡ ವರದಿಯಾಗಿದ್ದು, ಸಂಜೆಯ ವೇಳೆಗೆ ಯಾವುದೇ ಆತುರ ಕಂಡುಬರಲಿಲ್ಲ. ಬೆಳಿಗ್ಗೆ 8.30ಕ್ಕೆ ನಗರ ವ್ಯಾಪ್ತಿಯ ಮತಗಟ್ಟೆಯೊಂದರಲ್ಲಿ ವಿದ್ಯುನ್ಮಾನ ಮತಯಂತ್ರ ಕೆಟ್ಟು ಹೋಗಿ ಕೆಲ ಕಾಲ ಮತದಾನ ಸ್ಥಗಿತಗೊಂಡಿತು. 10 ನಿಮಿಷಗಳ ಅವಧಿಯಲ್ಲೇ ಬೇರೊಂದು ಯಂತ್ರ್ನ ಒದಗಿಸಿ ಮತದಾನ ಪ್ರಕ್ರಿಯೆ ಮುಂದುವರಿಯುವಂತೆ ನೋಡಿಕೊಳ್ಳಲಾಯಿತು.ಅಲ್ಲದೆ, ನಗರದ ಮತ್ತೊಂದು ಮತಗಟ್ಟೆಯಲ್ಲಿ ನಿಯುಕ್ತಿಗೊಂಡಿದ್ದ ಮತಗಟ್ಟೆ ಅಧಿಕಾರಿ ಅಮಾರೋಗ್ಯದಿಂದಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಬೇರೊಬ್ಬರನ್ನು ನಿಯೋಜಿಸಲಾಯಿತು.ಕಣದಲ್ಲಿರುವ ಮೂವರು ಪ್ರಮುಖ ಅಭ್ಯರ್ಥಿಗಳ ಪೈಕಿ ಕೇವಲ ಬಿಜೆಪಿಯ ಪಿ.ಗಾದಿಲಿಂಗಪ್ಪ ಅವರು ಮಾತ್ರ ಕ್ಷೇತ್ರವ್ಯಾಪ್ತಿಯ ನಿವಾಸಿಯಾಗಿದ್ದು, ಅವರು ಪರಮ ದೇವನಹಳ್ಳಿ ಗ್ರಾಮದಲ್ಲಿ ಬೆಳಿಗ್ಗೆ ಮತದಾನ ಮಾಡಿದರು.ಹಣ ವಶ:  ಅಭ್ಯರ್ಥಿಗಳ ಬೆಂಬಲಿಗರು ಕೆಲವೆಡೆ ಮತದಾನ ಪ್ರಕ್ರಿಯೆ ಆರಂಭವಾದ ನಂತರವೂ ಮತದಾರರಿಗೆ ಹಣ ಹಂಚುತ್ತಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಪರಮ ದೇವನಹಳ್ಳಿ ಗ್ರಾಮದಲ್ಲಿ 7,100 ರೂಪಾಯಿ ವಶಪಡಿಸಿಕೊಳ್ಳಲಾಗಿದೆ.ಜೀವ ಬೆದರಿಕೆ ಆರೋಪ:  ತಮಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್‌ಕುಮಾರ್ ಮೌಖಿಕವಾಗಿ ದೂರು ನೀಡಿದ್ದು, ಲಿಖಿತವಾಗಿ ದೂರು ನೀಡಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಎ.ಎ. ಬಿಸ್ವಾಸ್ ಸುದ್ದಿಗಾರರಿಗೆ ತಿಳಿಸಿದರು.ಶಾಸಕ ಸೋಮಶೇಖರ ರೆಡ್ಡಿ ತಮಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಕುರಿತು ಲಿಖಿತ ದೂರು ನೀಡುವ ಬಗ್ಗೆ ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಎಂದು ವಿನೋದ್‌ಕುಮಾರ್ ಹೇಳಿದ್ದಾರೆ.ಮಧ್ಯಾಹ್ನ ಕೌಲ್‌ಬಝಾರ್ ಪ್ರದೇಶದಲ್ಲಿ ತೆರಳುತ್ತಿದ್ದಾಗ ಎದುರಾದ ಸೋಮಶೇಖರರೆಡ್ಡಿ, `ನಮ್ಮಿಂದಲೇ ಬೆಳೆದು ಬಿಜೆಪಿ ಪರ ಪ್ರಚಾರ ಮಾಡ್ತೀಯಾ. ಚುನಾವಣೆ ಮುಗಿದ ನಂತರ ನಿನ್ನನ್ನು ನೋಡಿಕೊಳ್ಳುತ್ತೇನೆ~ ಎಂಬುದಾಗಿ ಬೆದರಿಸಿದ್ದಾರೆ ಎಂದು ಮಂಗಳವಾರ ಸಂಜೆಯಷ್ಟೇ ಬಿಜೆಪಿ ಕಚೇರಿ ಆವರಣದಲ್ಲಿ ಗುಂಡು ಸಿಡಿದ ಘಟನೆಯಲ್ಲಿ ಚಿಕ್ಕಪುಟ್ಟ ಗಾಯಗಳಿಗೆ ಒಳಗಾಗಿರುವ ವಿನೋದ್‌ಕುಮಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry