ಸೋಮವಾರ, ಮೇ 23, 2022
22 °C

ಶೇ 7.5 ಮೀಸಲಿಗೆ ನಾಯಕ ಸಮಾಜ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಾಯಕ ಸಮಾಜಕ್ಕೆ ಶಿಕ್ಷಣ, ಉದ್ಯೋಗದಲ್ಲಿಯೂ ಶೇ. 7.5 ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಎಲ್.ಜಿ. ಹಾವನೂರು ನಾಯಕರ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯುತ್ತಿರುವ ಅನಿರ್ದಿಷ್ಟ ಅವಧಿ ಧರಣಿಯ ಮೂರನೇ ದಿನವಾದ ಬುಧವಾರ ಸಮಾಜದವರು ರಕ್ತದಲ್ಲಿ ಮನವಿ ಪತ್ರ ಬರೆದು ವಿನೂತನವಾಗಿ ಪ್ರತಿಭಟಿಸಿದರು.ಪ್ರತಿಭಟನಾ ಸ್ಥಳದಲ್ಲಿಯೇ ಸಮಾಜದ ಕೆಲ ಯುವಕರಿಂದ ಸಿರಂಜ್‌ನಲ್ಲಿ ರಕ್ತ ತೆಗೆದುಕೊಂಡು ಅಗಲವಾದ ಬಿಳಿಯ ಶೀಟ್ ಮೇಲೆ, `ನಾಯಕ ಸಮಾಜಕ್ಕೆ ಶೇ. 7.5 ಮೀಸಲಾತಿ ಕಲ್ಪಿಸಬೇಕು~, `ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಸರ್ಕಾರಿ ಕೆಲಸ ಪಡೆದುಕೊಂಡಿರುವವರನ್ನು ಕೂಡಲೇ ವಜಾಗೊಳಿಸಬೇಕು~ ಎಂದು ಧರಣಿ ನೇತೃತ್ವ ವಹಿಸಿದ್ದ ಹುಚ್ಚವನಹಳ್ಳಿ ಮಂಜುನಾಥ್ ಬರೆದರು.`ಬೇಕೇ ಬೇಕು ಮೀಸಲಾತಿ ಬೇಕು~. `ರಕ್ತವನ್ನು ಚೆಲ್ಲುತ್ತೇವೆ; ನ್ಯಾಯ ಮತ್ತು ಮೀಸಲಾತಿಯನ್ನು ಪಡೆಯುತ್ತೇವೆ~ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ನಂತರ ಈ ರಕ್ತಪತ್ರವನ್ನು ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಮುಖಂಡ ಹುಚ್ಚವನಹಳ್ಳಿ ಮಂಜುನಾಥ್, ನಾಯಕ ಸಮಾಜಕ್ಕೆ ರಾಜಕೀಯ ಕ್ಷೇತ್ರದಂತೆ ಶಿಕ್ಷಣ, ಉದ್ಯೋಗದಲ್ಲಿಯೂ ಶೇ. 7.5 ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕರ್ನಾಟಕದ ವಿವಿಧೆಡೆ ಪ್ರತಿಭಟನೆ ನಡೆಯುತ್ತಿದೆಯಾದರೂ ರಾಜ್ಯ ಸರ್ಕಾರ ಜಾಣಕುರುಡು ಪ್ರದರ್ಶಿಸುತ್ತಿದೆ. ಇದು ಖಂಡನೀಯ.ಹೀಗಾಗಿ, ಮುಖ್ಯಮಂತ್ರಿಗೆ ರಕ್ತಪತ್ರ ಸಲ್ಲಿಸಿದ್ದೇವೆ. ಇದು ತಲುಪುತ್ತಿದ್ದಂತೆಯೇ ಸರ್ಕಾರ ಕ್ರಮ ವಹಿಸಬೇಕು. ಶಿಕ್ಷಣ, ಉದ್ಯೋಗದಲ್ಲಿ ಶೇ. 3ರಷ್ಟು ಇರುವ ಮೀಸಲಾತಿಯನ್ನು ಕೇಂದ್ರ ಸರ್ಕಾರದ ಮಾದರಿಯಲ್ಲಿ ಶೇ. 7.5ಕ್ಕೆ ಹೆಚ್ಚಿಸಬೇಕು. ದೀಪಾವಳಿಯೊಳಗೆ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ರೈಲುತಡೆ, ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಅ. 20ರಂದು ಹರಿಹರ ತಾಲೂಕಿನಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ಡಿವೈಎಫ್‌ಐ ಜಿಲ್ಲಾ ಘಟಕ ಅಧ್ಯಕ್ಷ ಶ್ರೀನಿವಾಸ್, ಸಿಪಿಐ (ಎಂಎಲ್) ಪದಾಧಿಕಾರಿಗಳು ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ನಾಯಕ ಸಮಾಜದ ಹೋರಾಟಕ್ಕೆ ಬೆಂಬಲ ಸೂಚಿಸಿದರು.ಫಣಿಯಾಪುರ ಲಿಂಗರಾಜು, ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ಕರಿನಾಯಕನಹಳ್ಳಿ ಚಂದ್ರಪ್ಪ, ಗೋಶಾಲೆ ಬಸವರಾಜು, ಮಲ್ಲಶೆಟ್ಟಿಹಳ್ಳಿ ಹನುಮೇಶ್, ಕುರುಬರಹಳ್ಳಿ ಅಜಯ್, ಜಗದೀಶ್, ಕರಡಿದುರ್ಗ ಪ್ರಕಾಶ್, ಕೋಣನಕಟ್ಟೆ ಅಣ್ಣಪ್ಪ, ಉಚ್ಚಂಗಿಪುರದ ನಾಗೇಂದ್ರಪ್ಪ, ಚಂದ್ರು, ಸುರೇಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.