ಶುಕ್ರವಾರ, ಮೇ 27, 2022
30 °C

ಶೇ 8-9 ಜಿಡಿಪಿ ಸಾಧಿಸಲು ಸಬ್ಸಿಡಿಗೆ ಕಡಿವಾಣ: ಪ್ರಧಾನಿ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಸ್ ಕೋಬಾಸ್ (ಪಿಟಿಐ): ಅರ್ಥ ವ್ಯವಸ್ಥೆ ಪುನಶ್ಚೇತನಕ್ಕಾಗಿ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಲು ಸಂಕಲ್ಪಿಸಿದೆ ಎಂದಿರುವ ಪ್ರಧಾನಿ ಮನಮೋಹನ್ ಸಿಂಗ್, ಬಜೆಟ್ ಕೊರತೆ ಸರಿದೂಗಿಸಲು ಸಬ್ಸಿಡಿ ನೀಡುವಿಕೆಯನ್ನು ನಿಯಂತ್ರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.ಆರ್ಥಿಕ ವೃದ್ಧಿ ದರದ (ಜಿಡಿಪಿ) ಪ್ರಗತಿಯನ್ನು ಶೇ 8-9ರ ಪ್ರಮಾಣದಲ್ಲಿ ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ಹೇಳಿದ್ದಾರೆ.ಇಲ್ಲಿ ನಡೆಯುತ್ತಿರುವ ಮುಂದುವರಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ `ಜಿ-20~ 7ನೇ ಶೃಂಗಸಭೆಯಲ್ಲಿ ಅವರು ಮಂಗಳವಾರ ಮಾತನಾಡಿದರು.ತಮ್ಮ ಭಾಷಣದಲ್ಲಿ ಆರ್ಥಿಕ ದುಃಸ್ಥಿತಿಗೆ ಕಾರಣವಾದ ಸೂಕ್ಷ್ಮ ಅಂಶಗಳನ್ನು ಪ್ರಸ್ತಾಪಿಸಿದ ಅವರು, `2008ರ ಜಾಗತಿಕ ಆರ್ಥಿಕ ತಲ್ಲಣದ ನಂತರ ವಿತ್ತೀಯ ಕೊರತೆ ನೀಗಿಸಲು ನಾವು ಒತ್ತು ನೀಡಿರಲಿಲ್ಲ. ಆದರೆ, ಈಗ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲೇಬೇಕಾಗಿದ್ದು, ಸಬ್ಸಿಡಿ ನೀಡಿಕೆ ನಿಯಂತ್ರಿಸಲು ನಿಶ್ಚಯಿಸಲಾಗಿದೆ~ ಎಂದು ಹೇಳಿದರು.`ಈ ನಿಟ್ಟಿನಲ್ಲಿ ನಾಗರಿಕರ ಜೈವಿಕ ಅಂಕಿ ಅಂಶ ಸಂಗ್ರಹಿಸಲು ವಿಶಿಷ್ಟ ಗುರುತಿನ ಸಂಖ್ಯೆ (ಆಧಾರ್) ಕಾರ್ಯಕ್ರಮ ಜಾರಿಯಲ್ಲಿದೆ~ ಎಂದರು.`ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಹಿನ್ನಡೆಯಿಂದ ಬಂಡವಾಳ ಸರಾಗವಾಗಿ ಹರಿದು ಬರುತ್ತಿಲ್ಲ. ರಾಷ್ಟ್ರದ ಆಂತರಿಕ ಇತಿಮಿತಿಗಳು ಆರ್ಥಿಕ ಹಿಂಜರಿತಕ್ಕೆ ಒಂದಲ್ಲಾ ಒಂದು ರೀತಿ ಕಾರಣವಾಗಿವೆ. ಈಗ ತೊಡಕುಗಳನ್ನು ಸರಿಪಡಿಸಲು ಸರ್ಕಾರ ಮುಂದಾಗಿದೆ~ ಎಂದು ಸಿಂಗ್ ಹೇಳಿದರು.`2010-11ರಲ್ಲಿ ಶೇ 8.4ರಷ್ಟಿದ್ದ ರಾಷ್ಟ್ರದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ) 2011-12ರಲ್ಲಿ ಶೇ 6.9ಕ್ಕೆ ಕುಸಿದಿದೆ. ವಿಶ್ವದ ಇತರ ರಾಷ್ಟ್ರಗಳ ಜಿಡಿಪಿಗೆ ಹೋಲಿಸಿದರೆ ಈ ಕುಸಿತ ಪ್ರಮಾಣ ತೀರಾ ಹೆಚ್ಚೇನೂ ಅಲ್ಲ~ ಎಂದು ಸಮರ್ಥಿಸಿಕೊಂಡರು.`ವಿದೇಶಿ ಮತ್ತು ಸ್ವದೇಶಿ ಬಂಡವಾಳ ಹೂಡಿಕೆದಾರರ ಹಿತಾಸಕ್ತಿ ಕಾಯಲು ಸರ್ಕಾರ ಬದ್ಧವಾಗಿದೆ. ಹೂಡಿಕೆದಾರರನ್ನು ಉತ್ತೇಜಿಸಲು ತಕ್ಕ ವಾತಾವರಣ ಕಲ್ಪಿಸುವ ಹಾಗೂ ಪಾರದರ್ಶಕ ನೀತಿ ನಿರೂಪಣೆಯ ಕಾರ್ಯಗಳು ನಡೆಯುತ್ತಿವೆ~ ಎಂದರು.`ಮೂಲ ಸೌಕರ‌್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಿಂತೆ ಬಹು ನಿರೀಕ್ಷೆ ಹೊಂದಿದ್ದೇವೆ~ ಎಂದೂ ಪ್ರಧಾನಿ ಸಿಂಗ್ ಹೇಳಿದರು.

ಐಎಂಎಫ್ ನಿಧಿಗೆ ಭಾರತದಿಂದ 1000 ಕೋಟಿ ಡಾಲರ್
ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಯೂರೊ ವಲಯದ 17 ರಾಷ್ಟ್ರಗಳ ನೆರವಿಗಾಗಿ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯು (ಐಎಂಎಫ್) ಸ್ಥಾಪಿಸಲಿರುವ  430 ಶತಕೋಟಿ  ಡಾಲರ್‌ನ ಸಂಕಷ್ಟ ನಿಧಿಗೆ ಭಾರತವು 1000 ಕೋಟಿ ಡಾಲರ್ (ಅಂದಾಜು 50,000 ಕೋಟಿ ರೂಪಾಯಿ) ಹೆಚ್ಚುವರಿ ವಂತಿಗೆ ನೀಡುವುದಾಗಿ ಪ್ರಕಟಿಸಿದೆ.ಭಾರತ ಒಳಗೊಂಡ ಐದು ರಾಷ್ಟ್ರಗಳ ಬ್ರಿಕ್ಸ್ ಗುಂಪು, ಐಎಂಎಫ್ ಸಂಕಷ್ಟ ನಿಧಿಗೆ 7500 ಕೋಟಿ ಡಾಲರ್ ದೇಣಿಗೆ ನೀಡಲು ನಿರ್ಧರಿಸಿದೆ.ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಬ್ರಿಕ್ಸ್ ರಾಷ್ಟ್ರಗಳ ಮುಖಂಡರು ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಅನೌಪಚಾರಿಕ ಸಭೆ ನಡೆಸಿ 75 ಶತಕೋಟಿ ಡಾಲರ್ ಕೊಡುಗೆ ನೀಡಲು ನಿರ್ಧರಿಸಿದ್ದಾರೆ.ಚೀನಾ 4300 ಕೋಟಿ ಡಾಲರ್, ರಷ್ಯಾ ಮತ್ತು ಬ್ರೆಜಿಲ್ ತಲಾ 1000 ಕೋಟಿ ಡಾಲರ್ ಮತ್ತು ದಕ್ಷಿಣ ಆಫ್ರಿಕಾ 200 ಕೋಟಿ ಡಾಲರ್ ದೇಣಿಗೆ ನೀಡಲು ಒಪ್ಪಿಕೊಂಡಿವೆ.ಯುರೊ ರಾಷ್ಟ್ರಗಳ ಆರ್ಥಿಕ ಬಿಕ್ಕಟ್ಟು ಇಡೀ ವಿಶ್ವದ ಮೇಲೆ ದುಷ್ಪರಿಣಾಮ ಬೀರಲಿರುವುದರಿಂದ, ಆ ರಾಷ್ಟ್ರಗಳನ್ನು ಸಂಕಷ್ಟದಿಂದ ಪಾರು ಮಾಡಲು ಸಂಘಟಿತ ಯತ್ನ ನಡೆಸಬೇಕು ಎಂದು ಬ್ರಿಕ್ಸ್ ರಾಷ್ಟ್ರಗಳ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.ಐಎಂಎಫ್ ಸಂಕಷ್ಟ ನಿಧಿಗೆ ಈಗಾಗಲೇ ನೀಡಿರುವ ವಂತಿಗೆ ಹಣವು ಖರ್ಚಾಗುವವರೆಗೆ ಹೊಸ ವಂತಿಗೆ ಹಣವನ್ನು ವ್ಯಯ ಮಾಡಬಾರದು ಎಂಬ ಷರತ್ತನ್ನು ಬ್ರಿಕ್ಸ್ ರಾಷ್ಟ್ರಗಳು ವಿಧಿಸಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.