ಶೇ. 80ರಷ್ಟು ಎನ್‌ಜಿಒ ಬೋಗಸ್

7

ಶೇ. 80ರಷ್ಟು ಎನ್‌ಜಿಒ ಬೋಗಸ್

Published:
Updated:

ವಿಜಾಪುರ: ‘ರಾಜ್ಯದಲ್ಲಿ ಅಂಗವಿಕಲರ ಮತ್ತು ಮಕ್ಕಳ ಶ್ರೇಯೋಭಿವೃದ್ಧಿಯ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ 141 ಸ್ವಯಂ ಸೇವಾ ಸಂಸ್ಥೆಗಳಲ್ಲಿ ಶೇ. 80ರಷ್ಟು ಸಂಸ್ಥೆಗಳು ಸರ್ಕಾರದ ಹಣ ಲೂಟಿ ಮಾಡುತ್ತಿವೆ. ಇಲಾಖೆಯೂ ಇಂತಹ ಸಂಸ್ಥೆಗಳ ಕಪಿಮುಷ್ಠಿಯಲ್ಲಿಯೇ ಕೆಲಸ ಮಾಡುತ್ತಿದೆ’ ಎಂದು ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ರಾಜಣ್ಣ ಹೇಳಿದರು.ರಾಜ್ಯದಲ್ಲಿ ಒಟ್ಟು 141 ಸಂಘ-ಸಂಸ್ಥೆಗಳು ಮಕ್ಕಳ, ಅಂಗವಿಕಲರ ಮತ್ತು ಬುದ್ಧಿಮಾಂದ್ಯರ ಪುನಃಶ್ಚೇತನಕ್ಕಾಗಿ ಸೇವೆ ಸಲ್ಲಿಸುತ್ತಿವೆ. ಅವುಗಳಲ್ಲಿ ಶೇ. 80ರಷ್ಟು ಬೋಗಸ್ ಆಗಿದ್ದು, ಸರ್ಕಾರದ ಅನುದಾನ ಲೂಟಿ ಮಾಡುತ್ತಿವೆ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‘ಅಧಿಕಾರಿಗಳ ಮತ್ತು ಎನ್‌ಜಿಒಗಳ ಹೊಂದಾಣಿಕೆಯಿಂದ ಇದು ನಡೆಯುತ್ತಿದೆ. ರಾಜ್ಯದಲ್ಲಿ ಬೋಗಸ್ ಹೆಸರಿನಲ್ಲಿ ನಡೆಯುವ ಹಾಗೂ ಅಂಗವಿಕಲರ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯುವ ಸಂಸ್ಥೆಗಳ ಪಟ್ಟಿ ತಯಾರಿಸಲಾಗುತ್ತಿದೆ. ಅವರಿಗೆ ತಿದ್ದಿಕೊಂಡು ಸರಿಯಾಗಿ ಕಾರ್ಯನಿರ್ವಹಿಸಲು ಆರು ತಿಂಗಳ ಕಾಲಾವಕಾಶ ನೀಡಲಾಗುವುದು. ಆಗಲೂ ತಿದ್ದಿಕೊಳ್ಳದಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.‘ಬುದ್ಧಿಮಾಂದ್ಯರು, ಅಂಧತ್ವ, ಮಂದ ದೃಷ್ಠಿ, ಕುಷ್ಠ ರೋಗ ನಿವಾರಿತ ಅಂಗವಿಕಲರು, ಶ್ರವಣದೋಷವುಳ್ಳ ಅಂಗವಿಕಲರು, ದೈಹಿಕ ಅಂಗವಿಕಲರು ಹಾಗೂ ಮಾನಸಿಕ ಅಸ್ವಸ್ಥರು ಅಂಗವಿಕಲರ ಸಾಲಿನಲ್ಲಿ ಬರುತ್ತಾರೆ. ಅಂಗವಿಕಲ ಮಕ್ಕಳಿಗೆ 18 ವರ್ಷ ಉಚಿತ ಶಿಕ್ಷಣ, ಅಗತ್ಯ ಸೌಲಭ್ಯ, ವಿವಿಧ ಹುದ್ದೆಗಳಲ್ಲಿ ಶೇ. 3ರಷ್ಟು ಮೀಸಲಾತಿ ನೀಡುವುದು ಅಧಿನಿಯಮದಲ್ಲಿ ಒಳಗೊಂಡಿವೆ. ಈ ಸೌಲಭ್ಯಗಳ ಮಾಹಿತಿಯನ್ನು ರಾಜ್ಯದ ಎಲ್ಲ ಅಂಗವಿಕಲರಿಗೆ ನೀಡಲು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.‘ದೇಶದ ಜನಸಂಖ್ಯೆಯಲ್ಲಿ ಶೇ. 10ರಷ್ಟು ಅಂಗವಿಕಲರಿದ್ದು, ದೇಶದ ಅಂಗವಿಕಲರ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಅಂಗವಿಕಲರ ಅಧಿನಿಯಮದ ಅನುಷ್ಠಾನಕ್ಕಾಗಿ ಮುಖ್ಯ ಆಯುಕ್ತರನ್ನು ನೇಮಿಸಿದೆ. ಕೇಂದ್ರದ ಮುಖ್ಯ ಆಯುಕ್ತರು ತಮಗೆ (ರಾಜ್ಯ ಆಯುಕ್ತರು) ವಿವಿಧ ಕೆಲಸಗಳನ್ನು ವಹಿಸುತ್ತಾರೆ.ಕೇಂದ್ರ ಸರ್ಕಾರ ನೀಡುವ ನಿಧಿಯ ಬಳಕೆಯ ಮೇಲ್ವಿಚಾರಣೆ. ಅಂಗವಿಕಲರ ಹಕ್ಕುಗಳ ಉಲ್ಲಂಘನೆಯಾಗದಂತೆ ಕ್ರಮ, ದೂರುಗಳ ವಿಚಾರಣೆ, ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರ ಅಂಗವಿಕಲರ ಕಲ್ಯಾಣಕ್ಕಾಗಿ ನೀಡಿರುವ ನಿಯಮ, ಆದೇಶಗಳ ಪಾಲನೆಯಲ್ಲಿ ಲೋಪವಾದಲ್ಲಿ ಕ್ರಮ ಕೈಗೊಳ್ಳುವ ಅಧಿಕಾರ ತಮಗಿದೆ’ ಎಂದು ವಿವರಿಸಿದರು.ಜಿ.ಪಂ. ಸಿಇಒ ಎ.ಎನ್. ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ವಸಂತಪ್ರೇಮಾ ಸುದ್ದಿಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry