ಶೇ 85 ಮತದಾನ; ಮತ ಎಣಿಕೆ ಇಂದು

7
ಒಕ್ಕಲಿಗರ ಸಂಘದ ಚುನಾವಣೆ: ಫಲಿತಾಂಶದತ್ತ ಎಲ್ಲರ ಚಿತ್ತ

ಶೇ 85 ಮತದಾನ; ಮತ ಎಣಿಕೆ ಇಂದು

Published:
Updated:

ಮೈಸೂರು: ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಮೈಸೂರು–ಚಾಮರಾಜನಗರ ಕ್ಷೇತ್ರದಲ್ಲಿ ಶೇ 85.33 ಮತದಾನವಾಗಿದೆ. 13,311 ಮತದಾರರಲ್ಲಿ 11,359 ಮಂದಿ ಮತ ಚಲಾಯಿಸಿದ್ದಾರೆ.ಎರಡೂ ಜಿಲ್ಲೆಗಳಿಂದ ಒಟ್ಟು ಐದು ಕೇಂದ್ರಗಳ 26 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆವರೆಗೆ ಶಾಂತಿಯುತವಾಗಿ ನಡೆಯಿತು ಎಂದು ಚುನಾವಣಾಧಿಕಾರಿ ಎಚ್‌.ಸಿ. ಜೋಶಿ ತಿಳಿಸಿದ್ದಾರೆ. ಮೈಸೂರು, ಎಚ್‌.ಡಿ. ಕೋಟೆ ಮತ್ತು ನಂಜನಗೂಡು ತಾಲ್ಲೂಕುಗಳ ಮತದಾರರು ಮೈಸೂರಿನ ಜೆಎಲ್‌ಬಿ ರಸ್ತೆಯ ಮಹಾರಾಣಿ ಕಲಾ ಪದವಿ ಕಾಲೇಜಿನಲ್ಲಿ ಸ್ಥಾಪಿಸಿದ್ದ ಮತಕೇಂದ್ರದಲ್ಲಿ ಹಕ್ಕು ಚಲಾಯಿಸಿದರು. ಉಳಿದಂತೆ ಕೆ.ಆರ್‌. ನಗರ ತಾಲ್ಲೂಕಿನವರು ಕೆ.ಆರ್.ನಗರದಲ್ಲಿ, ಪಿರಿಯಾಪಟ್ಟಣ ಮತ್ತು ಹುಣಸೂರು ತಾಲ್ಲೂಕಿನವರು ಹಣಸೂರಿನಲ್ಲಿ, ತಿ. ನರಸೀಪುರ ತಾಲ್ಲೂಕಿನವರು ತಿ. ನರಸೀಪುರದಲ್ಲಿ, ಯಳಂದೂರು, ಗುಂಡ್ಲಪೇಟೆ ಮತ್ತು ಚಾಮರಾಜನಗರ ತಾಲ್ಲೂಕಿನವರು ಚಾಮರಾಜನಗರ ಕೇಂದ್ರದಲ್ಲಿ ಮತ ಚಲಾಯಿಸಿದರು. ಮೈಸೂರು ಕೇಂದ್ರದಲ್ಲಿ 17 ಮತಗಟ್ಟೆ, ತಿ. ನರಸೀಪುರದಲ್ಲಿ 5, ಹುಣಸೂರಿನಲ್ಲಿ 2 ಮತ್ತು ಉಳಿದ ಎರಡು ಕೇಂದ್ರಗಳಲ್ಲಿ ತಲಾ ಒಂದು ಮತಗಟ್ಟೆ ಸ್ಥಾಪಿಸಲಾಗಿತ್ತು. ಎಲ್ಲ ಮತಕೇಂದ್ರಗಳಲ್ಲಿ ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾಗಿತ್ತು.ನಗರದ ಮಹಾರಾಣಿ ಕಲಾ ಕಾಲೇಜು ಆವರಣದಲ್ಲಿ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮತಯಾಚಿಸಿದರು. ಬೆಳಿಗ್ಗೆ 10 ಗಂಟೆವರೆಗೂ ಮತಗಟ್ಟೆಗಳಲ್ಲಿ ಸಂದಣಿ ಕಡಿಮೆ ಇತ್ತು, ನಂತರ ಮತದಾನ ಚುರುಕು ಪಡೆಯಿತು. ಕೊನೆ ಕ್ಷಣದವರೆಗೂ ಮತದಾರರು ಮತ ಚಲಾಯಿಸಿದರು. ಮತಪಟ್ಟಿಯಲ್ಲಿ ಹೆಸರಿದ್ದರೂ ಸಂಘದಿಂದ ಪಡೆದ ಅಧಿಕೃತ ಗುರುತಿನ ಚೀಟಿ ಇಲ್ಲದಿದ್ದರಿಂದ ಮತದಾನ ಮಾಡಲಾಗದೇ ಕೆಲವರು ನಿರಾಶರಾದರು. ಕೆಲವರು ತಮ್ಮ ಗುರುತಿನ ಚಿಹ್ನೆಯ ವಸ್ತುಗಳನ್ನು (ತೆಂಗಿನಕಾಯಿ, ಕ್ಯಾಮೆರಾ... ಇತ್ಯಾದಿ) ಕೈಯಲ್ಲಿ ಹಿಡಿದು, ಕೊರಳಿಗೆ ಹಾಕಿಕೊಂಡು ಮತ ಯಾಚಿಸಿದರೆ, ಮತ್ತೆ ಕೆಲವರು ಗುರುತಿನ ಚಿಹ್ನೆ ಮುದ್ರಿತ ಟೀ ಶರ್ಟ್, ಟೋಪಿಗಳನ್ನು ಧರಿಸಿ ಮತ ಯಾಚಿಸಿದರು. ಒಟ್ಟಾರೆಯಾಗಿ ಮತ ಕೇಂದ್ರದ ಹೊರಗೆ ಜನಸ್ತೋಮ ಹೆಚ್ಚು ಇತ್ತು. ಕಾಲೇಜಿನ ಆವರಣದಲ್ಲಿ ಅಭ್ಯರ್ಥಿಗಳ ಕರಪತ್ರಗಳು ಚೆಲ್ಲಾಪಿಲ್ಲಿಯಾಗಿ ಹರಡಿದ್ದವು.ಮತಕ್ಷೇತ್ರವಾರು ಒಟ್ಟು ಮತ ಹಾಗೂ ಚಲಾವಣೆ ಆದ ಮತಗಳ ವಿವರ ಹೀಗಿದೆ:

ಮೈಸೂರು ಒಟ್ಟು ಮತಗಳು– 8739, ಚಲಾವಣೆ ಆದ ಮತಗಳು– 7161, ತಿ. ನರಸೀಪುರ ಒಟ್ಟು ಮತಗಳು– 2325, ಚಲಾವಣೆ ಆದ ಮತಗಳು–2138, ಹುಣಸೂರು ಒಟ್ಟು ಮತಗಳು– 1132, ಚಲಾವಣೆ ಆದ ಮತಗಳು–1038, ಕೆ.ಆರ್. ನಗರ ಒಟ್ಟು ಮತಗಳು– 584, ಚಲಾವಣೆ ಆದ ಮತಗಳು– 524, ಚಾಮರಾಜನಗರ ಒಟ್ಟು ಮತಗಳು–   531, ಚಲಾವಣೆ ಆದ ಮತಗಳು– 498.

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಒಟ್ಟಾರೆ ನಡೆದ ಮತದಾನದ ವಿವರ ಹೀಗಿದೆ:

ಒಟ್ಟು ಮತಗಳು– 13311.

ಒಟ್ಟು ಚಲಾವಣೆಯಾದ ಮತಗಳು– 11359.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry