ಶೇ 91ರಷ್ಟು ಸಾಲ ವಸೂಲಿ: ಮುಖ್ಯಾಧಿಕಾರಿ

7

ಶೇ 91ರಷ್ಟು ಸಾಲ ವಸೂಲಿ: ಮುಖ್ಯಾಧಿಕಾರಿ

Published:
Updated:

ಬೇಲೂರು: ಕಳೆದ ವರ್ಷ ಬಜೆಟ್‌ನಲ್ಲಿ ಅನುಮೋದನೆಗೊಂಡ ಶೇಕಡ 90ರಷ್ಟು ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿರುವುದರ ಜೊತೆಗೆ ಶೇ.91ರಷ್ಟು ಕಂದಾಯ ವಸೂಲಾತಿ ಮಾಡಿ ಸಾಧನೆ ಮಾಡಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಸಿ. ಬಸವರಾಜು ಹೇಳಿದರು.2014–15ನೇ ಸಾಲಿನ ಪುರಸಭೆ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಶೇ.51ರಷ್ಟು ನೀರನ ತೆರಿಗೆ, ಶೇ.31ರಷ್ಟು ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ ಮಾಡಲಾಗಿದೆ. ಮುಂಬರುವ ಬಜೆಟ್‌ನಲ್ಲಿ ಐಡಿಎಸ್‌ಎಂಟಿ ವಾಣಿಜ್ಯ ಸಂಕೀರ್ಣಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಹೆಚ್ಚಿನ ಆಧ್ಯತೆ ನೀಡಲಾಗುವುದು.ಮನೆಮನೆಗಳಿಂದ ಕಸ ಸಂಗ್ರಹಿಸಲು ಆಟೋ ಟಿಪ್ಪರ್‌ಗಳನ್ನು ಖರೀದಿಸಲಾಗುವುದು. ಮನೆಗಳಲ್ಲಿ ಕಸ ಸಂಗ್ರಹಿಸಲು ಬಕೆಟ್‌ಗಳ ವಿತರಣೆ ಮಾಡಲಾಗುವುದು. ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆ ಪ್ರತಿನಿಧಿಗಳು ಉತ್ತಮ ಸಲಹೆಗಳನ್ನು ನೀಡಬೇಕೆಂದು ಮನವಿ ಮಾಡಿದರು.ಪುರಸಭೆ ಸದಸ್ಯ ಬಿ.ಎಲ್‌.ಧರ್ಮೇಗೌಡ ಮಾತನಾಡಿ, ಬೇಲೂರು ಪಟ್ಟಣದ ವ್ಯಾಪ್ತಿಯಲ್ಲಿ ವಾರದ ಸಂತೆ ನಡೆಸಲು ಜಾಗದ ಕೊರತೆಯಿದೆ. ಹಲವು ವರ್ಷಗಳಿಂದ ಸಂತೆ ಜಾಗಕ್ಕೆ ಪ್ರಯತ್ನಿಸಲಾಗುತ್ತಿದ್ದರೂ ಸೂಕ್ತ ಸ್ಥಳಾವಕಾಶ ಸಿಕ್ಕಿಲ್ಲ. ಚನ್ನಕೇಶವ ದೇಗುಲದ ಹಿಂಭಾಗದಲ್ಲಿರುವ ಪಾಳು ಬಿದ್ದಿರುವ ಜಾಗವನ್ನು ಸಂತೆ ನಡೆಸಲು ಸೂಕ್ತ ಜಾಗವಾಗಿದ್ದು, ಈ ಜಾಗ ಪಡೆಯಲು ಪ್ರಯತ್ನ ನಡೆಸುವುದಲ್ಲದೆ, ಜಾಗ ಖರೀದಿಗೆ ಹಣ ಮೀಸಲಿಡುವಂತೆ ಒತ್ತಾಯಿಸಿದ ಅವರು ರುದ್ರಭೂಮಿ ಮತ್ತು ದರ್ಗಾಗಳ ಅಭಿವೃದ್ಧಿಗೆ ಹೆಚ್ಚಿ ಹಣ ಮೀಸಲಿಡುವಂತೆ ಸೂಚಿಸಿದರು.ಸದಸ್ಯ ಜಿ.ಶಾಂತಕುಮಾರ್‌ ಮಾತನಾಡಿ ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆಗಳ ಮಧ್ಯಭಾಗದಲ್ಲಿ ಫುಟ್‌ಪಾತ್‌ ವ್ಯಾಪಾರಿಗಳಿಗೆಂದು ಕಟ್ಟೆ ನಿರ್ಮಾಣ ಮಾಡಿ 83 ಜನರಿಗೆ ಹಂಚಿಕೆ ಮಾಡಿರುವುದು ಅವೈಜ್ಞಾನಿಕವಾಗಿದೆ. ಅಸಲಿ 20 ವ್ಯಾಪಾರಿಗಳು ಮಾತ್ರ ಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದರೂ 83 ಜನರಿಗೆ ಬೇಕಾಬಿಟ್ಟಿಯಾಗಿ ಕಟ್ಟೆ ಹಂಚಿಕೆ ಮಾಡಲಾಗಿದೆ. ನಿಜವಾದ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿದರಲ್ಲದೆ, ಉದ್ಯಾನವನಗಳ ಅಭಿವೃದ್ಧಿ ವಿಚಾರದಲ್ಲಿ ಹಾಗೂ ಹಲವು ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದ್ದು,ಎಂಜಿನಿಯರ್‌ ಶಿವಪ್ರಸಾದ್ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದರು.ಸದಸ್ಯ ಬಿ.ಡಿ.ಚನ್ನಕೇಶವ ಮಾತನಾಡಿ ಮುಂಬರುವ ಬಜೆಟ್‌ನಲ್ಲಿ ಪ್ರವಾಸೀ ಕೇಂದ್ರವಾದ ಬೇಲೂರು ಪಟ್ಟಣದ ಅಂದ ಹೆಚ್ಚಿಸಲು ಆಧ್ಯತೆ ನೀಡುವುದರ ಜೊತೆಗೆ ಸ್ವಚ್ಚತೆ ಮತ್ತು ಶುದ್ಧ ಕುಡಿಯುವ ನೀರು ಪೂರೈಕೆಗೆ ಹೆಚ್ಚು ಹಣ ಮೀಸಲಿಡುವಂತೆ ಸಲಹೆ ನೀಡಿದರು.ಡಾ.ರಾಜ್‌ಕುಮಾರ್‌ ಅಭಿಮಾನಿ ಸಂಘದ ಅಧ್ಯಕ್ಷ ಬಿ.ಆರ್‌. ತೀರ್ಥಂಕರ್‌ ಹಿಂದಿನ ಬಜೆಟ್‌ನಲ್ಲಿ ತಾವು ಸೂಚಿಸಿದ ಸಲಹೆಗಳನ್ನು ಪರಿಗಣಿಸಿಲ್ಲ ಎಂದು ಆರೋಪಿಸಿ ತಮಟೆ ಬಡಿಯುವ ಮೂಲಕ ಆಕ್ಷೇಪ ವ್ಯಕ್ತಪಡಿಸಿದರಲ್ಲದೇ, ಸ್ವಾಗತ ಕಮಾನುಗಳನ್ನು ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.ಪುರಸಭೆ ಸದಸ್ಯರಾದ ಎಂ.ಆರ್‌. ವೆಂಕಟೇಶ್‌, ಕಾಯಿಶಿವು, ಅಕ್ರಂಪಾಷ, ಅರುಣ್‌ಕುಮಾರ್‌, ವ್ಯವಸ್ಥಾಪಕ ಮಹಾತ್ಮ, ಆರೋಗ್ಯಾಧಿಕಾರಿ ಎಸ್‌.ವೆಂಕಟೇಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry