ಸೋಮವಾರ, ನವೆಂಬರ್ 18, 2019
27 °C
ಬೋರ್ಡ್ ರೂಮಿನ ಸುತ್ತ

ಶೇ24 ಎಂದು ಹೇಳಬೇಕಾದರೆ...

Published:
Updated:

ಸರ್ವಸಿದ್ಧಿಯು ಲಭ್ಯ ಯೋಜನೆಗಳಡಿಯಲ್ಲೆ/

ಪೂರ್ವಸಿದ್ಧತೆ ಇರಲಿ ಎಲ್ಲ ಕೆಲಸದೊಳು//

ನಿರ್ವಿಕಾರದ ಒಂದು ನಕ್ಷೆ ಕೈಯೊಳಗಿರಲು/

ಸರ್ವಹಿತ ಪಯಣದೊಳು -ನವ್ಯಜೀವಿ//

ಡೆಕ್ಕನ್ ಹೆರಾಲ್ಡ್' ಆಂಗ್ಲ ದಿನಪತ್ರಿಕೆ ಓದುವವರಿಗೆ ಅದರ 16ನೇ ಪುಟದಲ್ಲಿ ಕೆಲವೊಮ್ಮೆ ಬರುವ ಸಂಶೋಧನಾತ್ಮಕ ಸಮೀಕ್ಷೆಗಳನ್ನಾಧರಿಸಿದ ಲೇಖನಗಳ ಪರಿಚಯವಿದ್ದೇ ಇರುತ್ತದೆ. ಮಾರ್ಚ್ 19ರ ಸಂಚಿಕೆಯಲ್ಲಿ ಪ್ರಕಟವಾದ ಅಂತಹುದೇ ಒಂದು ಸಂಶೋಧನೆಯ ವಿವರಗಳನ್ನು ತಮ್ಮಡನೆ ಹಂಚಿಕೊಳ್ಳಲು ಬಯಸುತ್ತೇನೆ.ಈ ಸಂಶೋಧನೆ ನಡೆದದ್ದು ಲಂಡನ್ನಿನಲ್ಲಿ. `ನಾಕ್ಟೂರಿಯಾ' ಎಂಬ ದೈಹಿಕ ಸಮಸ್ಯೆ ಬಗ್ಗೆ. ಈ ಸಮಸ್ಯೆ ಬರುವವರು ರಾತ್ರಿ ಮಲಗಿದ ನಂತರ ಹಲವಾರು ಬಾರಿ ಮೂತ್ರ ವಿಸರ್ಜನೆಗೆಂದು ಎದ್ದೇಳುತ್ತಾರೆ. ಇದರಿಂದ ಅವರ ನಿದ್ರಾಭಂಗವಾಗುತ್ತದೆ. ರಾತ್ರಿಯಿಡೀ ಆಗಾಗ ಬಾತ್‌ರೂಮಿಗೆ ಹೋಗಿಬರುವುದರಿಂದ ಬೆಳಿಗ್ಗೆ ಹೊತ್ತಿಗೆ ಮಲಗಿದ್ದರೂ ಮಲಗಿಯೇ ಇಲ್ಲವೇನೋ ಎಂಬ ಆಯಾಸದೊಂದಿಗೇ ಮೇಲೇಳುತ್ತಾರೆ. ಸುಖನಿದ್ರೆ ಎಂಬುದು ಇವರಿಗೆ ಮರೀಚಿಕೆಯೇ ಹೌದು.ಈ ಸಂಶೋಧನೆಯನ್ನು ನಡೆಸಿದವರು ಮನುಷ್ಯನ ಮೂತ್ರಪಿಂಡ ತಜ್ಞರು ಹಾಗೂ ವೈದ್ಯರು. ಇವರು ತಮ್ಮ ಸಂಶೋಧನೆಗಾಗಿ `ನಾಕ್ಟೂರಿಯಾ'ದಿಂದ ನರಳುತ್ತಿರುವ 261 ಮಹಿಳೆಯರನ್ನು ಹಾಗೂ 385 ಪುರುಷರನ್ನು ಯುರೋಪಿನ ಹಲವು ರಾಷ್ಟ್ರಗಳಿಂದ ಆಯ್ದು ಬಳಸಿಕೊಂಡರು. ಇವರನ್ನೆಲ್ಲ ವಯಸ್ಸಿನ ಆಧಾರದ ಮೇಲೆ ಹಾಗೂ `ನಾಕ್ಟೂರಿಯಾ'ದ ತೀವ್ರತೆ ಮೇಲೆ ವಿಂಗಡಿಸಿದರು. ಸಮೀಕ್ಷೆಯಲ್ಲಿ ಇವರನ್ನು ಕೇಳಬೇಕಾದ ಪ್ರಶ್ನೆಗಳನ್ನೆಲ್ಲ ಹಲವು ದಿನಗಳವರೆಗೆ ಚರ್ಚಿಸಿ, ವಿಮರ್ಶಿಸಿ ನಿರ್ಧರಿಸಿದರು.ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ರೋಗಿಗಳನ್ನು ಹಲವು ವಾರಗಳವರೆಗೆ ಕೂಲಂಕಷವಾಗಿ ತಪಾಸಣೆಗೆ ಒಡ್ಡಿ ಅವರಿಂದ ಹಲವು ಬಾರಿ ತಮ್ಮ ಪ್ರಶ್ನೆಗಳಿಗೆಲ್ಲ ಉತ್ತರವನ್ನು ಪಡೆದುಕೊಂಡರು. ಈ ರೀತಿ ತಮಗೆ ಒದಗಿದ ಉತ್ತರಗಳನ್ನು ಮತ್ತೆ ಮತ್ತೆ ತಾರ್ಕಿಕ ಆಯಾಮವೊಂದರಲ್ಲಿ ವಿಂಗಡಿಸಿದರು. ಅವುಗಳನ್ನೆಲ್ಲ ಅಂಕಿಗಳನ್ನಾಗಿಸಿ, ನಿರ್ದಿಷ್ಟ ಯೋಜನೆಯೊಂದರಲ್ಲಿ ಪಟ್ಟಿ ಮಾಡಿದರು. ಈ `ದತ್ತಾಂಶ' ಅಥವಾ `ಡೇಟಾ' ಬಳಸಿ ಸಾವಿರಾರು ನಕ್ಷಾಚಿತ್ರಗಳನ್ನು ರಚಿಸಿ, ಕಡೆಯದಾಗಿ ತಾವು ಕಂಡುಕೊಂಡ ಸತ್ಯವನ್ನು ಮಿಲಾನ್‌ನಲ್ಲಿರುವ `ಯುರೋಪಿಯನ್ ಅಸೋಸಿಯೇಷನ್ ಆಫ್ ಯೂರಾಲಜಿ ಕಾಂಗ್ರೆಸ್' ಎದುರು ಪ್ರತಿಪಾದಿಸಿ ಸಮರ್ಥಿಸಿಕೊಂಡರು. ಅಲ್ಲಿಗೆ ಅವರ ದೀರ್ಘವಾದ ಸಂಶೋಧನೆ ಯಶಸ್ವಿ ಆದಂತೆಯೇ ಸರಿ.ಈ ಸಂಶೋಧನೆ ಕಂಡುಕೊಂಡ ಸತ್ಯವೇನು? ಇದು ನನಗೆ ಅತ್ಯಂತ ಕುತೂಹಲಕಾರಿಯಾದ ವಿಷಯ. ಸಂಶೋಧನಾಕಾರರು ಕಡೆಯಲ್ಲಿ ತಮಗೆ ಜ್ಞಾನೋದಯವಾದ ಸತ್ಯವನ್ನು ಈ ರೀತಿ ಮಂಡಿಸುತ್ತಾರೆ - `ನಾಕ್ಟೂರಿಯಾದಿಂದ ನರಳುತ್ತಿರುವ ರೋಗಿಗಳು ಆಸ್ತಮಾ ಅಥವಾ ಇನ್ನಿತರ ಉಸಿರಾಟದ ಬೇನೆಯಿಂದ ನರಳುತ್ತಿರುವ ರೋಗಿಗಳಿಗಿಂತ ದಿನದ ತಮ್ಮ ಕೆಲಸ ಕಾರ್ಯಗಳಲ್ಲಿ ಶೇ 24ರಷ್ಟು ಕಡಿಮೆ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಾರೆ'! ಅಂದರೆ, ಆಸ್ತಮಾದಂತಹ ರೋಗಗಳಿಂದ ನರಳುತ್ತಿರುವವರಿಗಿಂತ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ `ನಾಕ್ಟೂರಿಯಾ' ರೋಗಿಗಳ ಉತ್ಪಾದಕತೆ ಅಥವಾ ಪ್ರೊಡಕ್ಟಿವಿಟಿ ಶೇ 24ರಷ್ಟು ಕಡಿಮೆ ಇರುತ್ತದೆ!ಇಷ್ಟು ಹೇಳುವುದಕ್ಕೆ ಅಷ್ಟು ತ್ರಾಸ ಪಡಬೇಕಿತ್ತೆ? ರಾತ್ರಿಯಿಡೀ ಮೂತ್ರ ವಿಸರ್ಜನೆಗೆಂದು ಆಗಾಗ ಏಳುತ್ತಿದ್ದರೆ ಸರಿಯಾಗಿ ನಿದ್ದೆ ಇಲ್ಲದ ಕಾರಣ ಮರುದಿನದ ಅವರ ಕೆಲಸದಲ್ಲಿ ಅವರಿಗೆ ದೈಹಿಕ ಶಕ್ತಿ ಹಾಗೂ ಮನಸ್ಸಿನ ಉತ್ಸಾಹ ಕಡಿಮೆ ಇರುತ್ತದೆ. ಇನ್ನೂ ತೀರದ ನಿದ್ರೆಯ ಗುಂಗಿನಲ್ಲೇ ಇರುತ್ತಾರೆ. ಹಾಗಾಗಿ ಅವರ ಉತ್ಪಾದಕತೆಯಲ್ಲಿ ಇಳಿಮುಖ ಖಂಡಿತ. ಮನೆಯಲ್ಲಿ ಅಮ್ಮನೇ ಹೇಳುವುದಿಲ್ಲವೆ, `ರಾತ್ರಿಯಿಡೀ ಸುಡುಗಾಡು ಟಿ.ವಿ ನೋಡೋದು ಬಿಟ್ಟು ನೆಮ್ಮದಿಯಾಗಿ ಬೇಗ ನಿದ್ರೆ ಮಾಡು. ನಾಳೆ ಕ್ಲಾಸಿನಲ್ಲಿ ನಿನಗೆ ಮಾಸ್ತರ ಪಾಠ ಸರಿಯಾಗಿ ಅರ್ಥ ಆಗುತ್ತೆ'.ಆ ಪಾಟಿ ಜನರನ್ನು ಸಂದರ್ಶಿಸಿ, ಆ ಪಾಟಿ ದತ್ತಾಂಶ ಶೇಖರಿಸಿ, ಆ ಪಾಟಿ ಸಂಖ್ಯೆಯ ತಜ್ಞರು ಹಾಗೂ ವೈದ್ಯರು ಆ ಪಾಟಿ ಹಣ ಹಾಗೂ ಸಮಯ ವ್ಯಯ ಮಾಡಿ ಕಂಡುಕೊಂಡ ಸತ್ಯವನ್ನು ಮನೆಯಲ್ಲಿ ಅಮ್ಮನೇ ಹೇಳಿಬಿಡುತ್ತಾಳಲ್ಲ ಎನ್ನುತ್ತಾ ಪಾಶ್ಚಾತ್ಯರ ಈ ಸಂಶೋಧನಾ ವ್ಯವಸ್ಥೆಯನ್ನೇ ಅಲ್ಲಗಳೆವ ಮೊದಲು ಸ್ವಲ್ಪ ಯೋಚಿಸೋಣ.`ನಾಕ್ಟೂರಿಯಾ' ರೋಗಿಗಳಿಗೆ ರಾತ್ರಿ ನಿದ್ದೆ ಸರಿ ಇರಲ್ಲ ಎಂಬುದು ಸಾಮಾನ್ಯ ಜ್ಞಾನದಿಂದಲೇ ಗೊತ್ತಾಗುತ್ತದೆ. ಆದರೆ ಅವರವೋ ರಾತ್ರಿಯ ಸಮಸ್ಯೆ ಆಸ್ತಮಾ ಅಥವಾ ಇನ್ನಿತರ ರೋಗಿಗಳಿಗಿಂತಲೂ ದೈನಂದಿನ ಕೆಲಸದಲ್ಲಿ ಹೆಚ್ಚು ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ಸ್ವಲ್ಪ ವಿಶೇಷ ಜ್ಞಾನದ ಅಗತ್ಯವಿದೆ.ಈ ಇಬ್ಬರಿಗೂ ರಾತ್ರಿ ಸರಿ ನಿದ್ರೆ ಇಲ್ಲ. ಆದರೆ, ಮೊದಲಿನವರಿಗೆ ಈ ಸಮಸ್ಯೆಯಿಂದಾಗಿ ಎರಡನೆಯವರಿಗಿಂತ ತಮ್ಮ ದಿನದ ಚಟುವಟಿಕೆಗಳಲ್ಲಿ ಶೇ 24ರಷ್ಟು ಅಧಿಕವಾಗಿ ಕೆಟ್ಟ ಪರಿಣಾಮ ಉಂಟು ಎಂದು ನಿಖರವಾಗಿ ಹೇಳಬೇಕಾದರೆ, ಅದಕ್ಕೆ ಈ ಪರಿಯ ಸವಿಸ್ತಾರವಾದ ಸಂಶೋಧನೆಗಳು ಅತ್ಯಾವಶ್ಯಕ. ಇಲ್ಲಿ ಶೇ 24ರಷ್ಟು ಎಂದು ಸ್ಪಷ್ಟವಾಗಿ ಊಹೆಗಳಿಗೆ ಎಡೆಯಿಲ್ಲದೆ ತಿಳಿಸುವುದು ಮುಖ್ಯವೇ ಹೊರತು, ಸಾಮಾನ್ಯ ಮನಸ್ಸಿಗೆ ಥಟ್ ಎಂದು ಹೊಳೆಯುವ ಸತ್ಯವನ್ನು ಪ್ರತಿಪಾದಿಸುವುದಲ್ಲ.ಮೇಲ್ನೋಟಕ್ಕೆ ನಮಗೆ ಇಂತಹ ಸಂಶೋಧನೆಗಳಿಂದ ಜನೋಪಯೋಗವೇನೂ ಇಲ್ಲ ಎಂದೆನ್ನಿಸಿದರೂ, ಇಂತಹ ಸಣ್ಣಪುಟ್ಟ ಸಂಶೋಧನೆಗಳಿಂದ ಹೊರಹೊಮ್ಮುವ ನಿರ್ದಿಷ್ಟವಾದ ಸತ್ಯಗಳ ಸಾಗರದಿಂದಲೇ ಮುಂದೊಂದು ದಿನ ಕ್ಲಿಷ್ಟವಾದ ಸಮಸ್ಯೆಯೊಂದಕ್ಕೆ ಪರಿಹಾರದ ಮುತ್ತು ಲಭ್ಯ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ವಿಚಾರದ ಹಿನ್ನೆಲೆಯಲ್ಲಿಯೇ ಪಾಶ್ಚಾತ್ಯರ ಈ ಸಂಶೋಧನಾ ಬದ್ಧತೆಯಲ್ಲಿ ನನಗೆ ಮಹತ್ತರವಾದದ್ದು ಗೋಚರಿಸುತ್ತದೆ.ಪರಿಹರಿಸಬೇಕಾದ ಸಮಸ್ಯೆ ಅದೆಷ್ಟೇ ಕ್ಷುಲ್ಲಕವೆಂದೆನ್ನಿಸಿದರೂ ಈ ಜನ ಅದರ ಸಂಶೋಧನೆಯಲ್ಲಿ ತೊಡಗಿಕೊಂಡಾಗ, ತಾವು ನಿಸರ್ಗದ ಯಾವುದೋ ನಿಗೂಢವಾದ ರಹಸ್ಯವೊಂದನ್ನು ಬಯಲಿಗೆಳೆಯುತ್ತಿದ್ದೇವೆ ಎಂಬ ಶ್ರದ್ಧೆಯಿಂದಲೇ ಆ ಸಂಶೋಧನೆ ನಡೆಸುತ್ತಾರೆ. ಈ ಪ್ರಯತ್ನದಲ್ಲಿ ಯಾವುದೇ ಒಂದು ಕೆಲಸವನ್ನು ಕೂಡ ಸಣ್ಣದೆನ್ನುತ್ತಾ ಕೈಬಿಡುವುದಿಲ್ಲ. ದೊರೆತ ಪ್ರತಿ ದತ್ತಾಂಶವನ್ನೂ ಗೌರವದಿಂದ ಕಾಣುತ್ತಾ ಅದರಿಂದ ಹೊರಹೊಮ್ಮುವ ಪ್ರತಿ ಅಂಕಿ-ಅಂಶಕ್ಕೂ ಮಹತ್ವ ನೀಡುತ್ತಾರೆ. ಸಾಮಾನ್ಯ ಜ್ಞಾನವನ್ನು ಭದ್ರವಾಗಿ ಬಚ್ಚಿಟ್ಟು, ಅದರ ಜಾಗದಲ್ಲಿ ಆನ್ವೇಷಕನ ತೆರೆದ ಮನೋಧರ್ಮವನ್ನು ಧಾರೆ ಎರೆದು ಸಂಶೋಧನೆಯಲ್ಲಿ ತೊಡಗುತ್ತಾರೆ. ಈ ಬದ್ಧತೆ ಸಂಶೋಧಕನಲ್ಲಿ ಸರ್ವದಾ ಇರಲೇಬೇಕಾದ ಒಂದು ವಿಶೇಷವಾದ ಗುಣ.ಶೇ 24 ಒಂದು ವೇಳೆ ಶೇ 80 ಆಗಿದ್ದು ಅಥವಾ ಶೇ 2 ಆಗಿದ್ದಲ್ಲಿ ಅವುಗಳನ್ನು ಎದುರಿಸಬೇಕಾದ ನಮ್ಮೆಲ್ಲ ಮುಂದಿನ ತಂತ್ರಗಳು ಬೇರೆ ಬೇರೆಯೇ ಆದಾವು. ಈ ನಿಟ್ಟಿನಲ್ಲಿ ಶೇಕಡಾ ಇಂತಿಷ್ಟು ಎಂದು ನಿರ್ಣಾಯಕವಾಗಿ ಹೇಳುವುದು ಅದೆಷ್ಟು ಮುಖ್ಯ ಎಂಬುದು ನಮಗೆ ಅರಿವಾಗುತ್ತದೆ. ಸಾಮಾನ್ಯ ಜ್ಞಾನದಿಂದ `ಬಹುತೇಕ ಅಥವಾ ಸರಿಸುಮಾರು' ಎಂದು ಅಂದಾಜಿಸಬಹುದೇ ಹೊರತು `ಇದು ಇಷ್ಟೆ!' ಎಂದು ಹೇಳುವುದಕ್ಕೆ ಸಂಶೋಧನೆ, ಸಮೀಕ್ಷೆ ಅತ್ಯಗತ್ಯ.ಮಾರಾಟ ವಿಭಾಗದವರು ತಮ್ಮ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಾದ್ದು ಅತ್ಯಂತ ಮುಖ್ಯವಾದ ವಿಷಯ ಎಂದು ನಾವೀಗಾಗಲೇ ಹಿಂದಿನ ಲೇಖನದಲ್ಲಿ ಓದಿದ್ದೇನೆ. ಗ್ರಾಹಕರ ಸಮಸ್ಯೆಗಳು ಮೇಲ್ನೋಟಕ್ಕೆ ಬಹಳ ಕ್ಷುಲ್ಲಕ ಎಂದೆನ್ನಿಸಿ ಅವುಗಳನ್ನು ಒಂದು ಹಂತದಲ್ಲಿ ಸಾಮಾನ್ಯ ಜ್ಞಾನದಿಂದ ಪರಿಹರಿಸುತ್ತಾ ಸಾಗಬಹುದು. ಬಹುತೇಕ ಸಮಯದಲ್ಲಿ ಅವು ಸೂಕ್ತವಾಗಿಯೂ ಇರುತ್ತವೆ. ಆದರೆ ಎಲ್ಲ ವೇಳೆಯಲ್ಲೂ ಅದು ಪರಿಣಾಮಕಾರಿಯಾಗಿರುವುದಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ಮಾರಾಟ ವಿಭಾಗದ ಎಲ್ಲರೂ ಸಂಶೋಧನಾ ಕಾರ್ಯದಲ್ಲಿ ಹಾಗೂ ಸಮೀಕ್ಷೆಗಳನ್ನು ದಕ್ಷತೆಯಿಂದ ನಡೆಸುವ ಕೆಲಸದಲ್ಲಿ ಪಳಗಿರಬೇಕು.ಗ್ರಾಹಕರನ್ನು ಭೇಟಿಯಾದಾಗಲೆಲ್ಲ ಅವರ ಬಗ್ಗೆ ಹಾಗೂ ಅವರ ಸಮಸ್ಯೆಗಳ ಬಗ್ಗೆ ಸೂಕ್ತವಾಗಿ ಪ್ರಶ್ನೆಗಳನ್ನು ಕೇಳುವ ಮೂಲಕ ಹೊಸ ಹೊಸ ವಿಚಾರಗಳನ್ನು ಅರಿತುಕೊಳ್ಳಬೇಕು, ಅವರ ಮುಂದಿನ ಯೋಜನೆಗಳ ಕುರಿತು ನಿಖರವಾದ ಮಾಹಿತಿ ಸಂಗ್ರಹಿಸಬೇಕು. ತಮ್ಮ ಉತ್ಪನ್ನಕ್ಕೂ ಹಾಗೂ ಅವರ ನಿರೀಕ್ಷೆಗೂ ಇರುವ ಅಂತರವನ್ನು ನಿರಂತರವಾಗಿ ಗುರುತಿಸುತ್ತಿರಬೇಕು.ಒಬ್ಬ ಗ್ರಾಹಕನಿಂದ ದೊರೆತ ಈ ಎಲ್ಲ ದತ್ತಾಂಶವನ್ನೂ ಮಿಕ್ಕ ಗ್ರಾಹಕರಿಂದ ಪಡೆದ ದತ್ತಾಂಶದೊಂದಿಗೆ ಸೇರಿಸಿ ಅವುಗಳೆಲ್ಲದರ ಒಟ್ಟು ವಿಂಗಡನೆ ಹಾಗೂ ವಿಶ್ಲೇಷಣೆಯಿಂದ ಹೊರಬರುವ ಸತ್ಯಗಳನ್ನು ಶೇಕಡಾ ಇಂತಿಷ್ಟು ಎಂದು ಅಂಕಿಯೊಂದರಲ್ಲಿ ಸೆರೆ ಹಿಡಿಯಬೇಕು. ಮತ್ತೆ ಮತ್ತೆ ತುಲನೆ ಮಾಡುತ್ತಾ ಸಾಗಿದಾಗಲೇ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಹಾಗೂ ತಮ್ಮದೇ ಬೆಳವಣಿಗೆಗೆ ಸರಿದಾರಿ ಕಂಡುಬರುತ್ತದೆ.ಮಾರುವ ಒಂದು ಆಯಾಮದಲ್ಲಿ ಸದಾ ನಿರತರಾಗಿರುವ ಮಾರಾಟ ವಿಭಾಗದವರಿಗೆ ಈ ಪರಿಯ ಸಂಶೋಧನಾ ಪ್ರಕ್ರಿಯೆ ಕೆಲವೊಮ್ಮೆ ಸಮಯ ಹಾಳು ಎಂದೆನ್ನಿಸಿ ಬಿಡುತ್ತದೆ ಅಥವಾ ಇದಕ್ಕೆ ಬೇಕಾದ ತಿಳಿವಳಿಕೆ ಅವರಲ್ಲಿ ಇಲ್ಲದಿರಬಹುದು. ಬೋರ್ಡ್ ರೂಮಿನ ಸುತ್ತಮುತ್ತಲಿನ ಅಧಿಕಾರಿಗಳು ಇದನ್ನರಿತು ತಮ್ಮ ಮಾರಾಟ ವಿಭಾಗದವರು ಸದಾ ಸಂಶೋಧನಾತ್ಮಕವಾದ ಪ್ರಕ್ರಿಯೆಯೊಂದರಲ್ಲಿ ಭಾಗಿಗಳಾಗಿರುವಂತೆ ಎಚ್ಚರ ವಹಿಸಬೇಕು.ಅದಕ್ಕಾಗಿ ತಮ್ಮ ಅವಶ್ಯಕತೆಗಳನ್ನು ಪೂರೈಸುವ ಒಂದು ಸಂಶೋಧನಾ ಕ್ರಮವನ್ನು ಹಾಗೂ ಅದಕ್ಕೊಂದು ಚೌಕಟ್ಟನ್ನು ನಿರ್ಮಿಸಿಕೊಳ್ಳಬೇಕು. ಮಾರಾಟ ವಿಭಾಗದವರ ಕಮಿಷನ್ ಲೆಕ್ಕಾಚಾರದಲ್ಲಿ ಈ ರೀತಿಯ ಸಂಶೋಧನಾತ್ಮಕವಾದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೆ ವಿಶೇಷ ಅಂಕಗಳನ್ನು ದಯಪಾಲಿಸಿ ಅಂತಹವರನ್ನು ಪ್ರೋತ್ಸಾಹಿಸಬೇಕು. ಆಗ ಅವರ ವೈಯಕ್ತಿಕ ಬೆಳವಣಿಗೆಯೊಂದಿಗೆ ಕಂಪೆನಿಯ ಯಶಸ್ಸು ಕೂಡ ಖಂಡಿತ.ಅಂದ ಹಾಗೆ ಸಂಶೋಧನೆ ಎನ್ನುವುದು ಬರಿಯ ಪಾಶ್ಚಾತ್ಯರ ಗುಣವಲ್ಲ. ಅದನ್ನು ಮೊದಲು ಈ ಜಗತ್ತಿಗೆ ಪರಿಚಯಿಸಿದವರು ನಮ್ಮ ಋಷಿಗಳು. ಅವರೆಲ್ಲ ಕುಳಿತ ಜಾಗದಲ್ಲೇ ಬಾನಾಚೆ ಚಿಂತನೆಗೈಯ್ಯುತ್ತ ಮನುಷ್ಯ ಧರ್ಮದ ಪ್ರತಿಯೊಂದು ವಿಚಾರವನ್ನೂ ಸೂತ್ರವಾಗಿಸಿದವರು. ನಮ್ಮ ಹಿರಿಯರು ಈ ಅಭೂತಪೂರ್ಣವಾದ ಮನಃಸ್ಥಿತಿಯನ್ನು ನಾವು ಮತ್ತೆ ನಮ್ಮಲ್ಲಿ ಅವತರಿಸಿಕೊಂಡು ಅದರಲ್ಲಿ ಪಾಶ್ಚಾತ್ಯರ ಗಮನೀಯವಾದ ಶಿಸ್ತಿನ ಬದ್ಧತೆಯೊಂದನ್ನು ರೂಪಿಸಿಕೊಂಡರೆ, ನಮ್ಮೆಲ್ಲ ಸಂಶೋಧನೆಗಳಲ್ಲಿ ಸ್ವಲ್ಪ ಮಟ್ಟಿಗಿನ ಶೋಧನೆ ಸಾಧ್ಯವಾದೀತು. ಅಂತಹ ಶೋಧನೆಗಳಿಂದಲೇ ಪರಿಹಾರ ಪ್ರಾಪ್ತಿ ಎಂದಾದರೆ, ಯಾಕಾಗಬಾರದು? ಬನ್ನಿ ಒಂದು ಸಣ್ಣ ಪ್ರಯತ್ನವನ್ನು ಮಾಡಿಯೇ ಬಿಡೋಣ!

ಪ್ರತಿಕ್ರಿಯಿಸಿ (+)