ಶನಿವಾರ, ಏಪ್ರಿಲ್ 17, 2021
27 °C

ಶೇ.50ರಷ್ಟು ವೈದ್ಯಕೀಯ ಸೌಲಭ್ಯ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದೇಶ ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಶೇ 50ರಷ್ಟು ಜನರಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳು ದೊರಕುತ್ತಿಲ್ಲ. ವಿದ್ಯಾವಂತ ಯುವಜನರು ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಿದೆ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ವಿಷಾದಿಸಿದರು.ನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಶನಿವಾರ ನಡೆದ `ಕಡಬಮ್ಸ~ (ಮನೋ- ಸಾಮಾಜಿಕ ಪುನರ್ವಸತಿ ಕೇಂದ್ರಗಳು) ಸಮೂಹದ 20ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ರಾಜ್ಯದಲ್ಲಿ ಅತ್ಯುತ್ತಮ ವೈದ್ಯರು ಹಾಗೂ ಉತ್ತಮ ಸೌಲಭ್ಯದ ಆಸ್ಪತ್ರೆಗಳು ಇವೆ. ಮನೋರೋಗಿಗಳಿಗೆ ವೈದ್ಯರು ಹೆಚ್ಚಿನ ಕಾಳಜಿ ವಹಿಸಬೇಕು. ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಬಡವರ ಸೇವೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಹಣದ ಆಕಾಂಕ್ಷೆ ಬಿಟ್ಟು ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು~ ಎಂದು ಅವರು ಕಿವಿಮಾತು ಹೇಳಿದರು.`ವಾಯ್ಸ ಆಫ್ ಮೈಂಡ್ಸ್~ ಪುಸ್ತಕ ಬಿಡುಗಡೆ ಮಾಡಿದ ತಮಿಳುನಾಡು ರಾಜ್ಯಪಾಲ ಕೆ. ರೋಸಯ್ಯ, `ಸಮಾಜದಲ್ಲಿ ಮನೋರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಒತ್ತಡದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾಯಿಲೆಯನ್ನು ನಿಯಂತ್ರಿಸಲು ಅಂತರ್‌ಶಿಸ್ತಿನ ಸಂಶೋಧನೆಗೆ ಒತ್ತು ನೀಡಬೇಕು~ ಎಂದು ಸಲಹೆ ನೀಡಿದರು.  ಬೆಂಗಳೂರಿನ ಆರ್ಚ್ ಬಿಷಪ್ ಡಾ. ಬರ್ನಾರ್ಡ್ ಮೊರಾಸ್ `ಬ್ರೈಟ್ ಸ್ಟಾರ್~ ಪ್ರಶಸ್ತಿ ಪ್ರದಾನ ಮಾಡಿ, `ಸಮಾಜದ ಎಲ್ಲರನ್ನು ಸಮಾನ ದೃಷ್ಟಿಯಿಂದ ಕಾಳಜಿ ವಹಿಸಿ ನೊಂದವರ ಕಣ್ಣೀರು ಒರೆಸುವ ಕೆಲಸ ಆಗಬೇಕು~ ಎಂದರು.ಕಡಬಮ್ಸನ ನಿರ್ದೇಶಕ ಸಂದೇಶ್ ಕಡಬಮ್ ಮಾತನಾಡಿ, `ಮಾನಸಿಕ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವವರು ಸಮಾಜದಲ್ಲಿ ಅವಮಾನ ಎದುರಿಸಿ ದೂಷಣೆಗೆ ಒಳಗಾಗುತ್ತಾರೆ. ಬಹುತೇಕರಿಗೆ ಮಾನಸಿಕ ಕಾಯಿಲೆಗಿಂತಲೂ ದೂಷಣೆಯೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಮಾನಸಿಕ ಸಮಸ್ಯೆ ಹೊಂದಿರುವ ನಾಲ್ಕು ವ್ಯಕ್ತಿಗಳ ಪೈಕಿ ಮೂವರು ಕಳಂಕದ ಅವಮಾನಕ್ಕೆ ಗುರಿಯಾಗಿರುತ್ತಾರೆ. ಈ ನಿಟ್ಟಿನಲ್ಲಿ ನಿಂದನೆಯ ವಿರುದ್ಧ ಹೋರಾಟ ನಡೆಸಲಾಗುತ್ತಿದೆ~ ಎಂದರು.ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ `ಸಿನಿಮಾ ಥೆರಪಿ ಕ್ಲಬ್ ಇಂಡಿಯಾ~ ಅನಾವರಣ ಮಾಡಿದರು. ಪ್ರಫುಲ್ಲತಾ ಭಾರದ್ವಾಜ್, ಕಡಬಮ್ಸ ಸಂಸ್ಥಾಪಕ ರಮೇಶ್ ಕಡಬಮ್ಸ ಮತ್ತಿತರರು ಹಾಜರಿದ್ದರು. ಈ ಸಂದರ್ಭ ಮನೋವೈದ್ಯರಾದ ಡಾ.ಪಿ.ವಿ. ಭಂಡಾರಿ ಹಾಗೂ ಡಾ.ಆರ್.ಧನಶೇಖರ ಪಾಂಡ್ಯನ್ ಅವರಿಗೆ ಕಡಬಮ್ಸ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.