ಸೋಮವಾರ, ನವೆಂಬರ್ 18, 2019
29 °C

ಶೈಕ್ಷಣಿಕ ಏಳ್ಗೆಗೆ ಶ್ರಮಿಸುತ್ತಿರುವ ಪದವೀಧರರು

Published:
Updated:
ಶೈಕ್ಷಣಿಕ ಏಳ್ಗೆಗೆ ಶ್ರಮಿಸುತ್ತಿರುವ ಪದವೀಧರರು

ಯಾದಗಿರಿ: ಪದವಿ ಸಿಕ್ಕರೆ ಸಾಕು, ಸರ್ಕಾರಿ ಉದ್ಯೋಗಕ್ಕಾಗಿ ಕಾಯುವ ಯುವ ಪಡೆಯೇ ಹೆಚ್ಚು. ಅಂಥದ್ದರಲ್ಲಿ ಪದವಿ ಕಲಿಯುವ ಹಂತದಲ್ಲಿಯೇ ವಿದ್ಯಾರ್ಥಿಗಳು ಗ್ರಾಮದ ಶೈಕ್ಷಣಿಕ ಮಟ್ಟ ಸುಧಾರಣೆಗೆ ಮುಂದಾಗಿರುವುದು ನಿಜಕ್ಕೂ ಮಾದರಿ.ಸದಾ ಒಬ್ಬರು ಇನ್ನೊಬ್ಬರನ್ನು ಕುಚೇಷ್ಟೆ ಮಾಡಿ ಕಾಲಹರಣ ಮಾಡುವ ವಿದ್ಯಾವಂತ ಯುವಕರ ಪಡೆ ಒಂದೆಡೆಯಾದರೆ ಅದಕ್ಕೆ ವಿರೋಧವೆಂಬಂತೆ ಪದವಿಯಲ್ಲಿ ಅಭ್ಯಾಸ ಮಾಡುತ್ತಲೇ ತನ್ನ ಗ್ರಾಮದ ಮಕ್ಕಳಿಗೆ ಬೋಧನೆ ಮಾಡುವ ಮೂಲಕ ಗ್ರಾಮದ ಏಳ್ಗೆಗೆ ಶ್ರಮಿಸುತ್ತಿರುವ ಯುವಕರು ಇನ್ನೊಂದೆಡೆ ಇದೆ.ತಾಲ್ಲೂಕಿನ ಗುಡ್ಲಗುಂಟಾ ಗ್ರಾಮದ ಭೀಮರಾಯ, ದೇವಪ್ಪ, ಬನ್ನಪ್ಪ ಎಸ್, ಬನ್ನಪ್ಪ ಬಿ, ನಾಗಪ್ಪ ಮತ್ತು ಅಂಜಪ್ಪ ಎಂಬ ಯುವಕರು ಯಾದಗಿರಿಯ ನ್ಯೂ ಕನ್ನಡ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜ ಮುಗಿಸಿಕೊಂಡು ಬಂದ ನಂತರ ತಮ್ಮ ಗ್ರಾಮದ ಒಂದರಿಂದ ಎಸ್ಸೆಸ್ಸೆಲ್ಸಿವರೆಗಿನ ಸುಮಾರು 65 ರಿಂದ 70 ವಿದ್ಯಾರ್ಥಿಗಳಿಗೆ ಸತತ  ಒಂದು ವರ್ಷದಿಂದ ನಿತ್ಯ ಮೂರ‌್ನಾಲ್ಕು ಗಂಟೆ ಬೋಧನೆ ಮಾಡುತ್ತಿದ್ದಾರೆ.ವಿವಿಧ ತರಗತಿಯ ಮಕ್ಕಳಿಗೆ ಉಚಿತವಾಗಿ ಬೋಧನೆ ಮಾಡುತ್ತಿದ್ದು, ಹಲವು ಬಾರಿ ಮಕ್ಕಳ ಪೋಷಕರು ಇಂತಿಷ್ಟು ಹಣ ಕೊಡುತ್ತೇವೆ ಎಂದರೂ, ಅದನ್ನು ಪಡೆಯಲು ನಿರಾಕರಿಸಿದ್ದಾರೆ. ನಾವು ಬಡತನದಿಂದ ಬಂದವರು. ಆದರೂ ನಮಗೆ ದುಡ್ಡಿನ ಆಸೆಯಿಲ್ಲ. ನಮಗಿರುವುದು ಉದ್ದೇಶ ಒಂದೇ. ಶೈಕ್ಷಣಿಕವಾಗಿ ನಮ್ಮ ಗ್ರಾಮದ ವಿದ್ಯಾರ್ಥಿಗಳು ಮುಂದುವರಿಯಬೇಕು. ಅದಕ್ಕಾಗಿ ನಾವು ನಮ್ಮ ಕೈಲಾದ ಮಟ್ಟಿಗೆ ಶ್ರಮ ವಹಿಸುತ್ತಿದ್ದೇವೆ” ಎನ್ನುವ ಈ ಯುವಕರು ಗ್ರಾಮದ ಬಗ್ಗೆ ಇರುವ ಅಭಿಮಾನವನ್ನು ಬೋಧನೆ ಮೂಲಕ ಎತ್ತಿ ತೋರಿಸಿದ್ದಾರೆ.

“

ಈ ಮೋದ್ಲು ನಂಗೆ ಒದಾಕ್ ಮತ್ತ ಬರ‌್ಯಾಕ ಬರತ್ತಿದ್ದಿಲ್ಲ. ಈ ಅಣ್ಣಂದಿರ ಸಹಾಯದಿಂದ ನಾ ಈಗ ಓದೋದು, ಬರೇದು ಮಾತ್ರ ಅಲ್ದ ಗಣಿತದ ಲೆಕ್ಕಗಳನ್ನೂ ಮಾಡ್ತೀನಿ” ಎಂದು ಹೇಳುತ್ತಾರೆ 6ನೇ ತರಗತಿಯ ವಿದ್ಯಾರ್ಥಿನಿ ಭೀಮವ್ವ ಬಸಲಿಂಗಪ್ಪ. ಶಿಕ್ಷಣ ವ್ಯಾಪಾರೀಕರಣವಾಗಿದೆ. ದುಡ್ಡು ಇದ್ದರೆ ಮಾತ್ರ ಶಿಕ್ಷಣ ಎನ್ನುವಂತಿರುವ ಇಂದಿನ ದಿನಗಳಲ್ಲಿ, ಬೇಸಿಗೆ ಬಂತೆಂದರೆ ಸಾಕು ಬೇಸಿಗೆ ಶಿಬಿರಗಳು ತಲೆ ಎತ್ತುತ್ತವೆ. ನಾನಾ ತರಬೇತಿ ಶಾಲೆಗಳ ವ್ಯವಸ್ಥಾಪಕರು ಬಂದು ಕೋಚಿಂಗ್ ಕ್ಲಾಸ್‌ಗಳಿಗೆ ಮಕ್ಕಳನ್ನು ಕಳುಹಿಸಿ ಎಂದು ಪೋಷಕರ ಮನೆ ಬಾಗಿಲು ತಟ್ಟುತ್ತಾರೆ.

ಇಂತಹ ದಿನಗಳಲ್ಲಿ ಯಾವುದೇ ರೀತಿಯ ಸಂಭಾವನೆಯನ್ನು ನಿರೀಕ್ಷಿಸದೇ ವಿದ್ಯಾ ದಾನ ಮಾಡುತ್ತಿರುವ ಈ ಯುವಕರು ಇತರರಿಗೆ ಮಾದರಿಯಾಗಿದ್ದಾರೆ.  ಈ ಯುವಕರಂತೆಯೇ ಜಿಲ್ಲೆಯ ಇನ್ನುಳಿದ ಯುವಕರು ಅರ್ಥವಿಲ್ಲದ ಕೆಲಸಗಳಲ್ಲಿ ಕಾಲಹರಣ ಮಾಡದೇ ತಮ್ಮ ಗ್ರಾಮಗಳ ಮಕ್ಕಳಿಗೆ ಬೋಧಿಸಿದರೆ, ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಯಾದಗಿರಿ ಜಿಲ್ಲೆ ಕೇವಲ ಒಂದೆರಡು ವರ್ಷಗಳಲ್ಲಿ ಮುಂದುವರಿದ ಜಿಲ್ಲೆಯಾಗಲು ಸಾಧ್ಯ ಎಂಬುದು ಹಲವರ ಅಭಿಪ್ರಾಯ.

ಪ್ರತಿಕ್ರಿಯಿಸಿ (+)