ಬುಧವಾರ, ಮೇ 18, 2022
24 °C

ಶೈಕ್ಷಣಿಕ ಜಾಗೃತಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ದೇಶದಾದ್ಯಂತ ಕಳೆದ 30 ವರ್ಷಗಳಿಂದ ಶೈಕ್ಷಣಿಕ ಜಾಗೃತಿ ಅಭಿಯಾನವನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಸಂಘಟನೆ(ಎಸ್.ಐ.ಓ) ನಡೆಸುತ್ತ ಬಂದಿದೆ. ಈ ವರ್ಷ ಬನ್ನಿ ಕಲಿಯೋಣ ಎಂಬ ಪ್ರಧಾನ ವಿಷಯವನ್ನಿಟ್ಟುಕೊಂಡು ರಾಜ್ಯದಲ್ಲಿ ಶೈಕ್ಷಣಿಕ ಜಾಗೃತಿ ಕೈಗೊಂಡಿದೆ. ರಾಯಚೂರು ನಗರದಲ್ಲಿ ಈ ಕುರಿತ ಚಟುವಟಿಕೆ ಆರಂಭಿಸಲಾಗಿದೆ ಎಂದು ಎಸ್.ಐ.ಓ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಅಸ್ವಕ್ ಅಹಮ್ಮದ್ ಶರೀಫ್ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನದ ಮುಖ್ಯ ಉದ್ದೇಶ ಶೈಕ್ಷಣಿಕವಾಗಿ ಹಿಂದುಳಿದಿರುವಂಥ ಸಮುದಾಯದಲ್ಲಿ ಶಿಕ್ಷಣದ ಅಗತ್ಯದ ಬಗ್ಗೆ ಅರಿವು ಮೂಡಿಸುವುದು, ಕಲ್ಯಾಣಕಾರಿ ಕೆಲಸಗಳ ಮೂಲಕ ಸಮಾಜದಲ್ಲಿ ಶಿಕ್ಷಣ ಗುಣಮಟ್ಟ ಉತ್ತಮ ಪಡಿಸುವುದು, ಸರ್ಕಾರವು ತನ್ನ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸುವಂತೆ ಮಾಡಲು ಪ್ರಾಯೋಗಿಕ ಕ್ರಮ ಕೈಗೊಳ್ಳುವುದು ಹಾಗೂ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಾಗಿದೆ ಎಂದು ವಿವರಿಸಿದರು.ಶಿಕ್ಷಣ ಪಡೆಯುವುದನ್ನು ಅರ್ಧಕ್ಕೆ ಮೊಟಕುಗೊಳಿಸಿದ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಕರೆ ತರುವುದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಒದಗಿಸುವುದು, ಉನ್ನತ ಶಿಕ್ಷಣ ಮೇಳ ನಡೆಸುವುದು ಸೇರಿದಂತೆ ಕೆಲ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.ರಾಯಚೂರು ನಗರದಲ್ಲಿ ಎಸ್‌ಐಓ ಸಂಘಟನೆಯು ಈ ವರ್ಷ ಮ್ಯಾದಾರ್ ಓಣಿ ಆಯ್ಕೆ ಮಾಡಿಕೊಂಡಿದೆ. ಶಿಕ್ಷಣದಿಂದ ವಂಚಿತರಾದ ಮತ್ತು ಶಾಲೆ ಬಿಟ್ಟ 20 ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಅಲ್ಲದೇ, ಮನೆ ಮನೆಗೆ ತೆರಳಿ ಪಾಲಕ ಮತ್ತು ಪೋಷಕರಿಗೆ ಶೈಕ್ಷಣಿಕ ಜಾಗೃತಿ ಮೂಡಿಸಲಾಗಿದೆ ಎಂದರು.ನಗರದ ಸರ್ಕಾರಿ ಕಾಲೇಜುಗಳ ಪರಿಶೀಲನೆ ಮಾಡುವುದು, ಮೂಲಭೂತ ಸೌಕರ್ಯ, ಪಿಠೋಪಕರಣ, ಉಪನ್ಯಾಸಕರ ಕೊರತೆ ಮುಂತಾದ ಅಂಶಗಳಗನ್ನು ಗಮನಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಗಮನಕ್ಕೆ ತರುವುದು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.ಜಾತ್ಯತೀತ ತಳಹದಿಯಲ್ಲೇ ಎಸ್‌ಐಓ ಸಂಘಟನೆ ಕಾರ್ಯ ನಿರ್ವಹಿಸುತ್ತದೆ. ಯಾವುದೇ ಜಾತಿ, ಪಂಗಡ, ಬೇಧ ಭಾವವಿಲ್ಲ. ಶೈಕ್ಷಣಿಕವಾಗಿ ಹಿಂದುಳಿದ ಯಾವುದೇ ಸಮುದಾಯವಿರಲಿ. ಅವರ ಏಳ್ಗೆಗೆ ಪ್ರಯತ್ನಿಸುವುದು ಸಂಘಟನೆ ಪ್ರಮುಖ ಆಶಯವಾಗಿದೆ ಎಂದು ತಿಳಿಸಿದರು.ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮರ್ಪಕ ರೀತಿ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಒತ್ತಾಯ ಪಡಿಸಲಾಗುವುದು. ಎಷ್ಟೇ ಉನ್ನತ ಶಿಕ್ಷಣ ಸಂಸ್ಥೆಗಳಿದ್ದರೂ ಉನ್ನತ ಶಿಕ್ಷಣ ಪಡೆಯುತ್ತಿರುವವರು ಶೇ 12ರಷ್ಟು ಮಾತ್ರ. ಈ ಪ್ರಮಾಣ ಇನ್ನೂ ಹೆಚ್ಚಾಗಬೇಕು. ಈ ದಿಶೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಸಂಘಟನೆ ಮಾಡುತ್ತಿದೆ ಎಂದು ಹೇಳಿದರು.ಸಂಘಟನೆ ರಾಯಚೂರು ಘಟಕದ ಅಧ್ಯಕ್ಷ ಮಹಜ್ ಮನಿಯಾರ್, ಕಾರ್ಯದರ್ಶಿ ಸಾದಿಕ್ ಪಾಷಾ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.