ಶೈಕ್ಷಣಿಕ ಪ್ರಾರಂಭೋತ್ಸವ ನಾಳೆ: ಕಾಗೇರಿ

7

ಶೈಕ್ಷಣಿಕ ಪ್ರಾರಂಭೋತ್ಸವ ನಾಳೆ: ಕಾಗೇರಿ

Published:
Updated:

ಹುಬ್ಬಳ್ಳಿ: `ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಇದೇ 30ರಂದು ನಡೆಯಲಿದೆ. ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನದ ಮೊದಲ ವರ್ಷವಾದ್ದರಿಂದ ಈ ಬಾರಿ ಹೆಚ್ಚಿನ ಜವಾಬ್ದಾರಿ ಇದೆ. ಕಾಯ್ದೆಯನ್ನು ಮುಂದಿನ ತರಗತಿಗಳಿಗೂ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಇಲ್ಲಿ ಹೇಳಿದರು.

`ಶಿಕ್ಷಣ ಹಕ್ಕು ಕಾಯ್ಕೆ ಅನುಷ್ಠಾನ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಯಾವುವು ಎಂಬ ಗೊಂದಲದ ಬಗ್ಗೆ ಕಾನೂನು ಇಲಾಖೆ ಜೊತೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು~ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

`ಶೇ 90ರಷ್ಟು ಶಾಲೆಗಳಿಗೆ ಈಗಾಗಲೇ ಪಠ್ಯಪುಸ್ತಕಗಳು ತಲುಪಿವೆ. ಗುಲ್ಬರ್ಗ ವಿಭಾಗದಲ್ಲಿ ಸಮವಸ್ತ್ರವನ್ನೂ ಪೂರೈಸಲಾಗಿದೆ. ಬೆಳಗಾವಿ ವಿಭಾಗದ ವಿಜಾಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಜೂನ್ 15ರೊಳಗೆ ಸಮವಸ್ತ್ರ ಸರಬರಾಜು ಪೂರ್ಣ ಆಗಲಿದೆ. ಎನ್‌ಸಿಎಫ್ 2005 ಆಧಾರಿತ ಶಿಕ್ಷಣ ಕ್ರಮ (ಸಿಬಿಎಸ್‌ಇ) ಈ ಬಾರಿ ಐದನೇ, ಎಂಟನೇ, ಮತ್ತು ಪ್ರಥಮ ಪಿಯುಸಿ (ಪಿಸಿಎಂಬಿ) ತರಗತಿಗಳಲ್ಲಿ ಜಾರಿಗೆ ಬರಲಿದೆ. ಮುಂದಿನ ಮೂರು ವರ್ಷದಲ್ಲಿ ಈ ಪಠ್ಯಕ್ರಮವನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು. ತರಗತಿಗಳ ಪುರ್ನವಿಂಗಡನೆ ಕುರಿತು ವರದಿ ನೀಡುವಂತೆ ರಚಿಸಲಾದ ಪ್ರೊ. ಗೋವಿಂದ್ ಸಮಿತಿಗೆ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ~ ಎಂದರು.

`ಪದವಿ ಪೂರ್ವ ಕಾಲೇಜುಗಳ 1,764 ಉಪನ್ಯಾಸಕ ಹುದ್ದೆಗೆ 95,000 ಹಾಗೂ ಪ್ರೌಢಶಾಲೆಗಳ 3,404  ಶಿಕ್ಷಕರ ಹುದ್ದೆಗೆ 2.25 ಲಕ್ಷ ಅರ್ಜಿಗಳು ಬಂದಿವೆ. ಉಪನ್ಯಾಸಕರ ಆಯ್ಕೆಗೆ ವಿಭಾಗ ಮಟ್ಟದ ಕೇಂದ್ರಗಳಲ್ಲಿ ಜೂನ್ 12ರಿಂದ 21ರವರೆಗೆ ಹಾಗೂ ಪ್ರೌಢಶಾಲಾ ಶಿಕ್ಷಕರ ಆಯ್ಕೆಗೆ ಜೂನ್ 23ರಿಂದ 26ರವರೆಗೆ ಪರೀಕ್ಷೆ ನಡೆಯಲಿದೆ. ಶಿಕ್ಷಕರ ನಿವೃತ್ತಿಯಿಂದ ಖಾಲಿಯಾಗುವ ಹುದ್ದೆಗಳ ಭರ್ತಿಗೂ ಅನುಮತಿ ಕೋರಿ ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ~ ಎಂದು ಸಚಿವರು ತಿಳಿಸಿದರು.

`ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಸೇವೆಯಲ್ಲಿರುವ ಶಿಕ್ಷಕರ ಸೇವೆಯನ್ನು ಶಾಶ್ವತಗೊಳಿಸುವ ಮೊದಲು ನೀಡಲಾಗಿದ್ದ ಕಾಲ್ಪನಿಕ ವೇತನವನ್ನು ಸರ್ಕಾರ ಹಿಂದಕ್ಕೆ ಪಡೆಯಲಿದೆ ಎಂಬ ವದಂತಿ ಹರಡಿದೆ. ಇದು ಸುಳ್ಳು. ಕಾಲ್ಪನಿಕ ವೇತನದ ಬಗ್ಗೆ ಮಹಾಲೇಖಪಾಲರು (ಎಜಿ) ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆದರೆ ಈ ಬಗ್ಗೆ ಕೋರ್ಟ್ ಮತ್ತು ಎಜಿಯವರಿಗೆ ಮಾಹಿತಿ ನೀಡಲಾಗುವುದು. ಅಗತ್ಯಬಿದ್ದರೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು~ ಎಂದು ಅವರು ಹೇಳಿದರು.

`ಶಿಕ್ಷಣ ಸಂಸ್ಥೆಗಳಲ್ಲಿ ಅಧಿಕ ಶುಲ್ಕ, ಡೊನೇಷನ್ ವಸೂಲಿ ಕುರಿತು ಜಿಲ್ಲಾಧಿಕಾರಿ ಅಥವಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧ~ ಎಂದು ಕಾಗೇರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry