ಶೈಕ್ಷಣಿಕ ವರ್ಷಾರಂಭಕ್ಕೆ 2095 ಶಾಲೆಗಳ ಬಂದ್

7

ಶೈಕ್ಷಣಿಕ ವರ್ಷಾರಂಭಕ್ಕೆ 2095 ಶಾಲೆಗಳ ಬಂದ್

Published:
Updated:

ಬೆಂಗಳೂರು: ರಾಜ್ಯದಲ್ಲಿ ಹತ್ತಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳನ್ನು ಸಮೀಪದ ಶಾಲೆಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ಸಾಲಿನ ವೇಳೆಗೆ 2,095 ಶಾಲೆಗಳನ್ನು ಮುಚ್ಚಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಗುರುವಾರ ಇಲ್ಲಿ ತಿಳಿಸಿದರು.595 ಶಾಲೆಗಳಲ್ಲಿ ಐದಕ್ಕಿಂತ ಕಡಿಮೆ ಮಕ್ಕಳಿದ್ದು, ಆ ಶಾಲೆಗಳನ್ನು ಈ ವರ್ಷವೇ ಪಕ್ಕದ ಶಾಲೆಗಳಿಗೆ ಜೋಡಿಸಲಾಗುತ್ತಿದೆ. 1,500 ಶಾಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಮಕ್ಕಳಿದ್ದು, ಅಂತಹ ಶಾಲೆಗಳನ್ನು ಬರುವ ವರ್ಷ ಪಕ್ಕದ ಶಾಲೆಗಳಲ್ಲಿ ವಿಲೀನಗೊಳಿಸಲಾಗುವುದು ಎಂದರು.`ನಾನು ಅಧಿಕಾರಕ್ಕೆ ಬಂದ ಆರಂಭದಲ್ಲಿ 500 ಶಾಲೆಗಳನ್ನು ಜೋಡಿಸಲಾಗಿತ್ತು.  ಕೇಂದ್ರ ಸರ್ಕಾರ 20ಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳನ್ನು ವಿಲೀನ ಮಾಡಿ ಎಂದು ಹೇಳಿದೆ. ಆದರೆ ನಾವು 10ಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳನ್ನು ಮಾತ್ರ ವಿಲೀನ ಮಾಡುತ್ತಿದ್ದೇವೆ~ ಎಂದರು.ಹಣದ ಕೊರತೆ ಅಥವಾ ಶಾಲೆಗಳನ್ನು ನಡೆಸಲು ಕಷ್ಟ ಎಂಬ ಕಾರಣಕ್ಕೆ ವಿಲೀನ ಮಾಡುತ್ತಿಲ್ಲ. ಅಂತಹ ಶಾಲೆಗಳ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಹತ್ತಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳನ್ನು ಪಕ್ಕದ ಶಾಲೆಗಳಿಗೆ ಜೋಡಿಸುವ ಬಗ್ಗೆ ಪ್ರಸ್ತಾವ ನೀಡುವಂತೆ ಸೂಚಿಸಲಾಗಿದೆ ಎಂದರು.ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಶಾಲೆಗಳ ನಡುವಿನ ಅಂತರ ಹೆಚ್ಚಾಗಿದ್ದು, ಮಕ್ಕಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಶಾಲೆಗಳು ತುಂಬಾ ದೂರವಿದ್ದರೆ ಹೋಗಿ ಬರಲು ಸಾರಿಗೆ ವೆಚ್ಚ ನೀಡಲಾಗುವುದು. ಜನಸಂಖ್ಯೆ ಕಡಿಮೆಯಾಗುತ್ತಿರುವುದು, ನಗರ ಪ್ರದೇಶದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದು ಪೋಷಕರು ನಗರದ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿರುವುದರಿಂದ ಗ್ರಾಮೀಣ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಈ ಮುಂಚೆ 2008ರ ವರೆಗೆ ಖಾಲಿ ಇರುವ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿತ್ತು. ಆದರೆ ಈಗ 2008ರ ನಂತರವೂ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.ಕಡ್ಡಾಯ ಪ್ರಾಥಮಿಕ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ  ಸರ್ಕಾರ ಬದ್ಧವಾಗಿದೆ. ಆದರೆ ಹಣಕಾಸಿನ ಬದ್ಧತೆಯನ್ನು ಕೇಂದ್ರ ಸರ್ಕಾರ ತೋರಿಸಬೇಕು. ಕಾಯ್ದೆ ಜಾರಿ ಸಂಬಂಧ ಕರಡು ನಿಯಮಾವಳಿಗಳನ್ನು ರೂಪಿಸಲಾಗಿದೆ ಎಂದರು.`ಆರರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಿರುವುದರಿಂದ 8ನೇ ತರಗತಿಯನ್ನು ಹಿರಿಯ ಪ್ರಾಥಮಿಕ ಶಾಲೆಯ ವ್ಯಾಪ್ತಿಗೆ ತರಬೇಕು ಎಂದು ಕೇಂದ್ರ ಹೇಳುತ್ತಿದೆ. ಕರ್ನಾಟಕ, ಮಹಾರಾಷ್ಟ್ರ ಹೊರತುಪಡಿಸಿದರೆ ಬಹುತೇಕ ಎಲ್ಲ ರಾಜ್ಯಗಳು ಈಗಾಗಲೇ 8ನೇ ತರಗತಿಯನ್ನು ಪ್ರಾಥಮಿಕ ಶಾಲೆ ವ್ಯಾಪ್ತಿಗೆ ತಂದಿವೆ. ಈ ಬಗ್ಗೆ ಚರ್ಚೆ ಆಗಬೇಕಿರುವುದರಿಂದ ನಾವು ಸಮಯಾವಕಾಶ ಕೇಳಿದ್ದೇವೆ~ ಎಂದು ಕಾಗೇರಿ ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry