ಶೋಕಕ್ಕೆ ತಿರುಗಿದ ಆಕ್ರೋಶ

7
13 ದಿನಗಳ ಚಿಕಿತ್ಸೆ ವಿಫಲ: ಸಾವು ಜಯಿಸದ ಯುವತಿ

ಶೋಕಕ್ಕೆ ತಿರುಗಿದ ಆಕ್ರೋಶ

Published:
Updated:
ಶೋಕಕ್ಕೆ ತಿರುಗಿದ ಆಕ್ರೋಶ

ನವದೆಹಲಿ: ವಿಕೃತ ಕಾಮಿಗಳ ಅಮಾನುಷ ಕ್ರೌರ್ಯಕ್ಕೆ ಸಿಕ್ಕಿ ನಲುಗಿದ 23 ವರ್ಷದ ನತದೃಷ್ಟ ಯುವತಿಗೆ ರಾಜಧಾನಿ ದೆಹಲಿ ಶನಿವಾರ ಶಾಂತಿಯುತ ಪ್ರತಿಭಟನೆ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿತು. 13 ದಿನಗಳ ನಿರಂತರ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ ಸುದ್ದಿ ಹರಡುತ್ತಿದ್ದಂತೆ ದೆಹಲಿ ಶೋಕ ಸಾಗರದಲ್ಲಿ ಮುಳುಗಿತು. `ಯುವತಿ ಗುಣಮುಖವಾಗಿ ಬರಲಿ' ಎಂದು ಪ್ರಾರ್ಥಿಸಿದ್ದವರ ಕಣ್ಣಾಲಿಗಳು ತುಂಬಿದ್ದವು.ಮುನ್ನೆಚ್ಚರಿಕೆ ಕ್ರಮವಾಗಿ `ಇಂಡಿಯಾ ಗೇಟ್' ಹಾಗೂ `ರೈಸಿನಾ ಹಿಲ್' ಸೇರಿದಂತೆ ಕೇಂದ್ರ ಸಚಿವಾಲಯಕ್ಕೆ ಬರುವ ಎಲ್ಲ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದರು. ಕಳೆದ ವಾರ ಈ ಸ್ಥಳದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ನಡೆದು ಹಲವರು ಗಾಯಗೊಂಡಿದ್ದರು. ಆದರೆ, ಪ್ರತಿಭಟನೆಗಳಿಗಾಗಿಯೇ ಮೀಸಲಾಗಿರುವ `ಜಂತರ್ ಮಂತರ್' ಬಳಿ ಪ್ರತಿಭಟನೆಗೆ ಅವಕಾಶ ಕೊಡಲಾಗಿತ್ತು.ಕೇಂದ್ರ ಸಚಿವಾಲಯದ ಸುತ್ತಮುತ್ತ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. ನಗರ ಸಾರಿಗೆ ಬಸ್ಸುಗಳನ್ನು ಬೇರೆ ದಿಕ್ಕುಗಳಿಗೆ ತಿರುಗಿಸಲಾಗಿತ್ತು. ಪ್ರಮುಖ ಮೆಟ್ರೊ ನಿಲ್ದಾಣಗಳನ್ನು ಮುಚ್ಚಲಾಗಿತ್ತು. ಇಷ್ಟಾದರೂ ನೂರಾರು ಜನ ಜಂತರ್- ಮಂತರ್ ಬಳಿ ಜಮಾಯಿಸಿ ಅಗಲಿದ ಯುವತಿಗೆ `ಅಶ್ರುತರ್ಪಣ'ದ ಶ್ರದ್ಧಾಂಜಲಿ ಸಲ್ಲಿಸಿದರು. ಕೆಲವರು ಬಾಯಿಗೆ ಕಪ್ಪು ಬಟ್ಟೆಗಳನ್ನು ಕಟ್ಟಿಕೊಂಡಿದ್ದರು.ಸಿಎಂಗೆ ಬಿಸಿ: ಇಲ್ಲಿಗೆ ಬಂದ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಕಂಡು ಆಕ್ರೋಶಕ್ಕೊಳಗಾದ ಪ್ರತಿಭಟನಾಕಾರರು `ಶೀಲಾ ದೀಕ್ಷಿತ್ ವಾಪಸ್ ಹೋಗಿ'ಎಂದು ಘೋಷಣೆಗಳನ್ನು ಕೂಗಿದರು. ಇದರಿಂದ ಆತಂಕಕ್ಕೊಳಗಾದ ಅವರು ತರಾತುರಿಯಲ್ಲಿ ಹೊತ್ತಿಸಿದ ಮೇಣದ ಬತ್ತಿಯನ್ನು ಮರದ ಕೆಳಗಿಟ್ಟು ಕೆಲವೇ ನಿಮಿಷಗಳಲ್ಲಿ  ವಾಪಸ್ಸಾದರು. `ಇದು ರಾಜಕೀಯೇತರ ಹೋರಾಟ. ರಾಜಕಾರಣಿಗಳ ಪ್ರವೇಶಕ್ಕೆ ಅವಕಾಶ ಇಲ್ಲ' ಎಂದು ಪ್ರತಿಭಟನಾಕಾರರು ಹಟ ಮಾಡಿದರು.ಬೆಳಿಗ್ಗೆ ಹತ್ತು ಗಂಟೆಯಿಂದಲೇ ಜಂತರ್- ಮಂತರ್‌ಗೆ ಪ್ರತಿಭಟನಾಕಾರರು ಬರಲಾರಂಭಿಸಿದರು. ನಿಧಾನವಾಗಿ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚತೊಡಗಿತು. `ಆಮ್ ಆದ್ಮಿ'  ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್, ಮನಿಷ್ ಸಿಸೋಡಿಯಾ, ಕುಮಾರ್ ವಿಶ್ವಾಸ್ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದರು. ವಿವಿಧ ಮಹಿಳಾ ಮತ್ತು ಎನ್‌ಜಿಒ ಸದಸ್ಯರು ಪಾಲ್ಗೊಂಡರು. ಎಡಪಕ್ಷಗಳ ಕಾರ್ಯಕರ್ತರು `ಮಂಡಿ ಹೌಸ್'ನಿಂದ ಮೆರವಣಿಗೆಯಲ್ಲಿ ಆಗಮಿಸಿದರು. ಸಿಪಿಎಂ ಪಾಲಿಟ್‌ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಮೆರವಣಿಗೆ ನೇತೃತ್ವ ವಹಿಸಿದ್ದರು. ವಿದ್ಯಾರ್ಥಿಯೊಬ್ಬ ಜೆಎನ್‌ಯು ಕ್ಯಾಂಪಸ್‌ನಿಂದ `ಮುನಿರ‌್ಕಾ'ಗೆ ಕಾಲ್ನಡಿಗೆ ಜಾಥಾ ನಡೆಸಿದ. ಡಿಸೆಂಬರ್ 16ರ ಕರಾಳ ರಾತ್ರಿ ಇದೇ ಬಸ್ ನಿಲ್ದಾಣದಿಂದ ಯುವತಿ ಬಸ್ ಹತ್ತಿದ್ದು.ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಿದ್ದರಿಂದ ಪ್ರಯಾಣಿಕರು ಪರದಾಡಿದರು. ಕೇಂದ್ರ ಸಚಿವಾಲಯದ ಮೂಲಕ ಹೋಗುವ ಬಸ್ಸುಗಳನ್ನು ಬೇರೆ ದಿಕ್ಕುಗಳಿಗೆ ತಿರುಗಿಸಿದ್ದರಿಂದ ಸಾರ್ವಜನಿಕರು ತೊಂದರೆಗೆ ಒಳಗಾದರು. ಇದರಿಂದಾಗಿ ಅಲ್ಲಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಕಂಡು ಬಂತು.ಮನವಿ ತಿರಸ್ಕೃತ: ಇಂಡಿಯಾ ಗೇಟ್ ಬಳಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕೊಡಬೇಕೆಂಬ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸಲಹೆಗೆ ಕೇಂದ್ರ ಸರ್ಕಾರ ಕಿವಿಗೊಡಲಿಲ್ಲ. ಅಲ್ಲಿ ಪ್ರತಿಭಟನೆಗೆ ಅನುಮತಿ ನೀಡಿದರೆ ಕಾನೂನು- ಸುವ್ಯವಸ್ಥೆ ಸಮಸ್ಯೆ ಎದುರಾಗಬಹುದು ಎಂಬ ಅಭಿಪ್ರಾಯವನ್ನು ಕೇಂದ್ರ ಗೃಹ ಸಚಿವಾಲಯ ವ್ಯಕ್ತಪಡಿಸಿತು. ಇಂಡಿಯಾ ಗೇಟ್ ಬಂದ್ ಮಾಡಿದ ಸರ್ಕಾರದ ಕ್ರಮ ವ್ಯಾಪಕ ಟೀಕೆಗೊಳಗಾಯಿತು. `ಇದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ಕ್ರಮ' ಎಂದು ಖಂಡಿಸಿದರು.

ಚಿತ್ರಮಂದಿರದಿಂದ ಸಾವಿನ ಮನೆಗೆ...

ಡಿ.16: ವಿದ್ಯಾರ್ಥಿನಿ ತನ್ನ ಗೆಳೆಯನ ಜತೆ ಸಿನಿಮಾ ನೋಡಿಕೊಂಡು ದಕ್ಷಿಣ ದೆಹಲಿಯ ಮುರ್ನಿಕಾದಲ್ಲಿ ಬಸ್ ಹತ್ತಿದರು. ಚಲಿಸುತ್ತಿದ್ದ ಬಸ್‌ನಲ್ಲಿ ಯುವತಿಯ ಗೆಳೆಯನ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮತ್ತು ಆಕೆಯ ಮೇಲೆ ಬಸ್‌ನಲ್ಲಿದ್ದ ಆರು ಜನರಿಂದ ಸಾಮೂಹಿಕ ಅತ್ಯಾಚಾರ. ಇಬ್ಬರಲ್ಲಿದ್ದ ವಸ್ತುಗಳನ್ನು ಕಸಿದುಕೊಂಡು ಬಸ್‌ನಿಂದ ಹೊರ ತಳ್ಳಿದ್ದರು. ಟೋಲ್ ಪ್ಲಾಜಾ ಬಳಿ ಗಾಯಗೊಂಡು ಬಿದ್ದಿದ್ದ ಯುವತಿಯನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು.ಡಿ. 17: ಬಸ್ ಚಾಲಕ ರಾಮ್ ಸಿಂಗ್ ಹಾಗೂ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದರು.ಡಿ. 18: ಪೊಲೀಸರಿಂದ ನಾಲ್ಕನೇ ಆರೋಪಿ ಬಂಧನ. ಯುವತಿಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿ ಭಾರಿ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಂದ ಇಂಡಿಯಾ ಗೇಟ್ ಬಳಿ ಪ್ರತಿಭಟನೆ. ಆಸ್ಪತ್ರೆಯಲ್ಲಿ ಯುವತಿ ಜೀವನ್ಮರಣ ಹೋರಾಟ.ಡಿ. 19: ತೀವ್ರವಾಗಿ ಗಾಯಗೊಂಡಿದ್ದ ಯುವತಿಯ ಕರುಳು ಬೇರ್ಪಡಿಸಿದ ವೈದ್ಯರು. ದೇಶದಾದ್ಯಂತ ಮತ್ತಷ್ಟು ತೀವ್ರಗೊಂಡ ಪ್ರತಿಭಟನೆ.ಡಿ. 20: ಅತ್ಯಾಚಾರವೆಸಗಿದ ಪೈಕಿ ಒಬ್ಬನನ್ನು ತಿಹಾರ್ ಜೈಲಿನಲ್ಲಿ ಗುರುತಿಸಿದ ವಿದ್ಯಾರ್ಥಿನಿಯ ಗೆಳೆಯ.ಡಿ. 21: ಐದನೇ ಆರೋಪಿ (ಬಾಲಾಪರಾಧಿ) ಬಂಧನ.ಡಿ. 21: ಯುವತಿಯ ಆರೋಗ್ಯ ಮತ್ತಷ್ಟು ಕ್ಷೀಣ. ನೂರಾರು ಜನರಿಂದ ದೆಹಲಿಯ ಜನಪಥ್‌ನಲ್ಲಿ ಮೇಣದ ಬತ್ತಿ ಹಿಡಿದುಕೊಂಡು ಪ್ರತಿಭಟನೆ. ವಿದ್ಯಾರ್ಥಿಗಳಿಂದ ರಾಷ್ಟ್ರಪತಿ ಭವನ ಪ್ರವೇಶಿಸಲು ವಿಫಲ ಯತ್ನ.ಡಿ. 22: ಬಿಹಾರದ ಔರಂಗಾಬಾದ್‌ನಲ್ಲಿ ಪೊಲೀಸರಿಂದ ಪ್ರಕರಣದ ಆರನೇ ಆರೋಪಿ ಬಂಧನ.ಡಿ. 22: ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಗೆ ಆಯೋಗ ರಚನೆ. ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಘೋಷಣೆ. ರಾಷ್ಟ್ರಪತಿ ಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಯುವಕರ ಮೇಲೆ ಪೊಲೀಸರಿಂದ ಜಲಫಿರಂಗಿ, ಅಶ್ರುವಾಯು ಪ್ರಯೋಗ. ಇಂಡಿಯಾ ಗೇಟ್‌ಗೆ ಸ್ಥಳಾಂತರಗೊಂಡ ಪ್ರತಿಭಟನೆ. ತಡರಾತ್ರಿವರೆಗೆ ಮುಂದುವರಿಕೆ. ಕೆಲ ಮೆಟ್ರೊ ನಿಲ್ದಾಣ ಬಂದ್. ಮಹಿಳೆಯರ ಸುರಕ್ಷತೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸು ಮಾಡಲು ಸರ್ಕಾರದಿಂದ ಸಮಿತಿ ರಚನೆ.ಡಿ. 23: ಸಾಮೂಹಿಕ ಅತ್ಯಾಚಾರಕ್ಕೆ ತೀವ್ರ ಖಂಡನೆ. ಸಮರ ಸ್ಥಳವಾಗಿ ಮಾರ್ಪಟ್ಟ ದೇಶದ ರಾಜಧಾನಿ. ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಸಂಘರ್ಷ. ಪೊಲೀಸ್ ಪೇದೆ ಸುಭಾಷ್ ಚಂದ್ರ ತೋಮರ್ ಸಾವು. ಹಲವರಿಗೆ ಗಾಯ. ಸತತ ಎರಡನೇ ದಿನವೂ ಮೆಟ್ರೊ ನಿಲ್ದಾಣಗಳು ಬಂದ್.ಡಿ. 24: ವಿದ್ಯಾರ್ಥಿನಿ ಅತ್ಯಾಚಾರಕ್ಕೊಳಗಾದ ಬಸ್‌ನ ಕಿಟಕಿಗಳಿಗೆ ಸನ್‌ಫಿಲ್ಮ್ ಅಳವಡಿಸಿದ್ದರೂ ತಡೆಯದ ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು. ಪ್ರತಿಭಟನಾಕಾರರಿಂದ ರಸ್ತೆ ತಡೆ ಮುಂದುವರಿಕೆ. ಮಹಿಳೆಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳ ಭರವಸೆ. ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ. ಶಾಂತಿ ಕಾಪಾಡಲು ಮನವಿ.ಡಿ. 25: ಹೃದಯಸ್ತಂಭನದಿಂದ ಪೇದೆ ತೋಮರ್ ಸಾವು- ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉಲ್ಲೇಖ.ಡಿ. 26: ಯುವತಿ ಆರೋಗ್ಯಸ್ಥಿತಿ ತೀವ್ರವಾಗಿ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಸ್ಥಳಾಂತರ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಿಂದ ಅತ್ಯಾಚಾರ ಪ್ರಕರಣದ ತನಿಖೆಗೆ ಸರ್ಕಾರ ನಿರ್ಧಾರ. ರಾಜಧಾನಿಯಲ್ಲಿ ಮಹಿಳೆಯರು ಸುರಕ್ಷಿತವಾಗಿರಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸು ನೀಡುವಂತೆ ಸೂಚನೆ.ಡಿ. 28: ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ತ್ವರಿತ ನ್ಯಾಯದಾನದ ಭರವಸೆ. ಮತ್ತಷ್ಟು ಹದಗೆಟ್ಟ ಯುವತಿ ಆರೋಗ್ಯ.ಡಿ. 29: ಸಿಂಗಪುರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಯುವತಿ. ದೇಶದಾದ್ಯಂತ ಕಂಬನಿ, ಆಕ್ರೋಶ, ಪ್ರತಿಭಟನೆ. ದೆಹಲಿಯಲ್ಲಿ ಪೊಲೀಸರಿಂದ ಬಿಗಿ ಭದ್ರತೆ.

ಗಣ್ಯರ ಪ್ರತಿಕ್ರಿಯೆ

ಕೊನೆಯ ಕ್ಷಣದ ವರೆಗೂ ಹೋರಾಡಿದ ದಿಟ್ಟೆ. ಇಂಥ ಪೈಶಾಚಿಕ ಘಟನೆ ಮರುಕಳಿಸದಂತೆ ನೋಡಿಕೊಳ್ಳೋಣ.

-ರಾಷ್ಟ್ರಪತಿ ಪ್ರಣವ್ ಮುಖರ್ಜಿಭರವಸೆಯ,ಯುವ ಜೀವವೊಂದು ಅತ್ಯಂತ ಕ್ರೂರವಾಗಿ ಅಂತ್ಯ ಕಂಡಿದ್ದು ವಿಷಾದನೀಯ.

-ಉಪ ರಾಷ್ಟ್ರಪತಿ ಅನ್ಸಾರಿಯುವತಿಯ ಹೋರಾಟ ವ್ಯರ್ಥವಾಗಬಾರದು.

-ಪ್ರಧಾನಿ ಮನಮೋಹನ್ ಸಿಂಗ್ಆರೋಪಿಗಳಿಗೆ ಗರಿಷ್ಠ ಶಿಕ್ಷೆ ನೀಡಲಾಗುವುದು.

ಗೃಹ ಸಚಿವ ಶಿಂಧೆಯುವತಿಯ ಸಾವು ದೇಶದ ಆತ್ಮಸಾಕ್ಷಿಯನ್ನು ಕಲಕಿದೆ.

-ಸುಷ್ಮಾ ಸ್ವರಾಜ್ನಮ್ಮ ಹೃದಯ ದುಃಖ ಹಾಗೂ ಅವಮಾನದಿಂದ ಕುದಿಯುತ್ತಿದೆ.

ಶೀಲಾ ದೀಕ್ಷಿತ್ಯುವತಿಯ ಆತ್ಮ ನಮ್ಮ ಹೃದಯವನ್ನು ಮೀಟುತ್ತದೆ

-ಅಮಿತಾಭ್ ಬಚ್ಚನ್ಸರ್ಕಾರ ಗಾಢ ನಿದ್ದೆಯಿಂದ ಎಚ್ಚೆತ್ತುಕೊಳ್ಳಬೇಕು. ಆ ಪಾಪಿಗಳಿಗೆ ಶಿಕ್ಷೆ ನೀಡಬೇಕು.

-ಲತಾ ಮಂಗೇಶ್ಕರ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry