ಶೋಭಾಗೆ ಒಲಿದ ವರಮಹಾಲಕ್ಷ್ಮಿ ಪೂಜಾ ಫಲ

7

ಶೋಭಾಗೆ ಒಲಿದ ವರಮಹಾಲಕ್ಷ್ಮಿ ಪೂಜಾ ಫಲ

Published:
Updated:
ಶೋಭಾಗೆ ಒಲಿದ ವರಮಹಾಲಕ್ಷ್ಮಿ ಪೂಜಾ ಫಲ

ಬಳ್ಳಾರಿ:   ನಗರದಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ಘಟಕವು ಶಾಸಕ ಬಿ.ಶ್ರೀರಾಮುಲು ನೇತೃತ್ವದಲ್ಲಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ  `ಮಾಜಿ~ಗಳಿಗೆ ಮಾತ್ರ ಮಣೆ ಹಾಕಲಾಗಿತ್ತು. `ಹಾಲಿ~ಗಳನ್ನು ನಗಣ್ಯ ಎಂಬಂತೆ ಬಿಂಬಿಸಲಾಯಿತು.  ಸಚಿವರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಬಸವರಾಜ್ ಬೊಮ್ಮಾಯಿ ಸಮಾರಂಭಕ್ಕೆ ಆಗಮಿಸಿದ್ದರೂ, ಅವರಿಗೆ ಸಮಾರಂಭದಲ್ಲಿ ಮಾತನಾಡಲು ಅವಕಾಶವನ್ನೇ ನೀಡದೆ, ನಿರ್ಲಕ್ಷಿಸಲಾಯಿತು.  ಸದ್ಯ ಮಾಜಿ ಸಚಿವರಾಗಿರುವ ಜಿ.ಜನಾರ್ದನರೆಡ್ಡಿ, ಬಿ. ಶ್ರೀರಾಮುಲು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಕೊನೆಯಲ್ಲಿ ಹಿಂದಿಯಲ್ಲಿ ಮಾತನಾಡಿ, ಚಪ್ಪಾಳೆ ಗಿಟ್ಟಿಸಿದರು.  ಅಕ್ರಮ ಗಣಿಗಾರಿಕೆ ಕುರಿತ ಲೋಕಾಯಕ್ತರ ವರದಿಯಲ್ಲಿ ಹೆಸರಿರುವ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲೆಯ ಮುಖಂಡರು ಸಚಿವ ಸ್ಥಾನ ಕಳೆದುಕೊಂಡಿದ್ದು, ಮುಖ್ಯಮಂತ್ರಿ ಸದಾನಂದಗೌಡ ಸಂಪುಟದಲ್ಲಿ ಜಿಲ್ಲೆಯ ಯಾರಿಗೂ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ, ಕೆಲವು ದಿನಗಳಿಂದ ಪಕ್ಷದಲ್ಲಿ ಹೊಗೆಯಾಡುತ್ತಿರುವ ಭಿನ್ನಮತ ಶುಕ್ರವಾರದ ಸಮಾರಂಭದಲ್ಲಿ ಗೋಚರಿಸಲಿಲ್ಲ.  ಆದರೂ ಯಡಿಯೂರಪ್ಪ ಬಣದ ಸಚಿವರನ್ನು ಕಡೆಗಣಿಸಿದ್ದು ಸ್ಪಷ್ಟವಾಗಿ ಕಂಡುಬಂತು.   ಸಮಾರಂಭದ ನಂತರ ತೋರಣಗಲ್‌ನ ಜಿಂದಾಲ್ ವಿಮಾನ ನಿಲ್ದಾಣಕ್ಕೆ ತೆರಳಲು ಹಸಂಭಾವಿಯಲ್ಲಿರುವ ಹೆಲಿಪ್ಯಾಡ್‌ಗೆ ಆಗಮಿಸಿದ ಸಂದರ್ಭವೂ, ಸಚಿವರಾದ ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಕಡೆಗಣಿಸಿ, ಕೊನೆಗೆ ಬಂದ ಹೆಲಿಕಾಪ್ಟರ್‌ನಲ್ಲಿ ಬೀಳ್ಕೊಡಲಾಯಿತು.   ಪ್ರತಿ ವರ್ಷ ವರಮಹಾಲಕ್ಷ್ಮಿ ಪೂಜೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸುತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ  ಸ್ವರಾಜ್ ಈ ಬಾರಿ ಸೋದರನ ಸಾವಿನ ಕಾರಣ ಆಗಮಿಸಿರಲಿಲ್ಲ.   ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಆಗಮಿಸುತ್ತಾರೆ ಎಂದು ತಿಳಿಸಲಾಗಿದ್ದರೂ ಅವರೂ ಕಾರ್ಯಕ್ರಮಕ್ಕೆ ಆಗಮಿಸದ್ದರಿಂದ, ಅವರ ಅನುಪಸ್ಥಿತಿಯಲ್ಲಿ ನಗರದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಿತಿನ್ ಗಡ್ಕರಿ ಅವರೇ ಚಾಲನೆ ನೀಡಿದರು.  ಚಿತ್ರನಟ ದಿ.ಡಾ.ವಿಷ್ಣುವರ್ದನ್ ಉದ್ಯಾನದ ಉದ್ಘಾಟನೆ, ವಿಷ್ಣು ಪುತ್ಥಳಿ ಅನಾವರಣ, ಜಿಲ್ಲಾ ಆಸ್ಪತ್ರೆಯ ನವೀಕೃತ ಕಟ್ಟಡದ ಉದ್ಘಾಟನೆಯನ್ನೂ ಯಡಿಯೂರಪ್ಪ ಮತ್ತು ಸಚಿವರ ಸಮ್ಮುಖದಲ್ಲಿ ಗಡ್ಕರಿಯವರೇ ನೆರವೇರಿಸಿದರು.   ಸುಷ್ಮಾ ಸ್ವರಾಜ್ ಅವರ ಅನುಪಸ್ಥಿತಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ  ಡಾ.ಬಿ.ಕೆ. ಶ್ರೀನಿವಾಸಮೂರ್ತಿ ಅವರ ನಿವಾಸಕ್ಕೆ ತೆರಳಿ, ವರಮಹಾಲಕ್ಷ್ಮಿ ಪೂಜೆ ನೆರವೇರಿಸಿದ್ದು ವಿಶೇಷವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry