ಮಂಗಳವಾರ, ಜೂನ್ 22, 2021
27 °C

ಶೋಷಿತರ ಅಭಿವೃದ್ಧಿಗೆ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ: ಅಹಿಂದ ಸಂಘಟನೆ ಸ್ವಾಭಿಮಾನದ ಸಂಕೇತ. ಸಮಾಜದಲ್ಲಿನ ಶೋಷಿತರು, ತುಳಿತಕ್ಕೆ ಒಳಗಾದ ಜನರ ಅಭಿವೃದ್ಧಿಗೆ ತಾವು ನಿರಂತರ ಹೋರಾಟ ನಡೆಸುವುದಾಗಿ ಮಾಜಿ ಸಚಿವ ಹಾಗೂ ಶಾಸಕ ಶ್ರೀರಾಮುಲು ತಿಳಿಸಿದರು.ಅವರು ಸೋಮವಾರ ತಾಲ್ಲೂಕು ಅಹಿಂದ ಸಂಘಟನೆ ಆಯೋಜಿಸಿದ್ದ ಅಹಿಂದ ಅಭಿಯಾನಕ್ಕೆ ಚಾಲನೆ, ಅಹಿಂದ ಹಾಗೂ ಶ್ರೀರಾಮುಲು ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ಬದ್ಧ ಅಧಿಕಾರ ನೀಡಿದ್ದರಿಂದ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಜನ ಪ್ರತಿನಿಧಿಗಳಾಗಿದ್ದೇವೆ. 12ನೇ ಶತಮಾನದಲ್ಲಿನ ಬಸವಾದಿ ಶರಣರು ಸಾಮಾಜಿಕ ಸಮಾನತೆಗೆ ಅವಿರತವಾಗಿ ಹೋರಾಟ ನಡೆಸಿದ್ದಾರೆ. ಇಂದಿನ ರಾಜಕಾರಣದಲ್ಲಿ ಜಾತಿ ವ್ಯವಸ್ಥೆ ಬೇರೂರಿದೆ.

 

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದಿಂದ ಹಿಂದುಳಿದ ವರ್ಗಗಳ ಮುಖಂಡರ ಶೋಷಣೆ ನಡೆಯುತ್ತಿದೆ. ರಾಜ್ಯದಲ್ಲಿನ ಎಲ್ಲಾ ಜಾತಿ, ವರ್ಗಗಳ ಜನರನ್ನು ಒಂದುಗೂಡಿಸುವ ಶಕ್ತಿ ನನಗಿದೆ. ತಾವು ಮೂರು ಬಾರಿ ಶಾಸಕರಾಗಿ, ಎರಡು ಬಾರಿ ಮಂತ್ರಿಯಾಗಿ ಪ್ರಾಮಾಣಿಕವಾಗಿ ರಾಜ್ಯದ ಜನತೆ ಸೇವೆ ಮಾಡಿದ್ದೇನೆ. ಕುಸಿಯುತ್ತಿರುವ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಬೇಕಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಹೊಸ ಗಾಳಿ ಬೀಸಲಿದೆ ಎಂದು ಶ್ರೀರಾಮುಲು ಭವಿಷ್ಯ ನುಡಿದರು.ಕೌಠಾ (ಬಿ) ಬಸವ ಕೇಂದ್ರದ ಸಿದ್ಧರಾಮ ಶರಣರು ಬೆಲ್ದಾಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಒಳ್ಳೆಯ ಕೆಲಸ ಮಾಡುವವರಿಗೆ ಧಾರ್ಮಿಕ ಗುರುಗಳ ಬೆಂಬಲ, ಆಶೀರ್ವಾದ ಇರುತ್ತದೆ.ಮೇಲ್ವರ್ಗದವರ ದಮನಕಾರಿ ನೀತಿ ವಿರೋಧಿಸಿ ರಾಜ್ಯದಲ್ಲಿ ಅಹಿಂದ ಸಂಘಟನೆ ಜನ್ಮತಾಳಿದೆ. ಅಹಿಂದ ವರ್ಗದ ಜನರು ಈ ದೇಶದ ಮೂಲ ನಿವಾಸಿಗಳು. ದೇಶಕ್ಕೆ ಸ್ವಾತಂತ್ರ್ಯ ದೊರೆತು 6ದಶಕಗಳು ಗತಿಸಿದರೂ ಶೋಷಿತರು ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸಮಾಜದಲ್ಲಿ ಜಾತಿಯತೆ, ಮೂಢನಂಬಿಕೆ ಹಾಗೂ ಕಂದಾಚಾರಗಳು ಇನ್ನೂ ಜೀವಂತವಾಗಿವೆ. ಶೋಷಿತರು ಒಂದಾಗಬೇಕು. ಪ್ರೀತಿ, ಪ್ರೇಮ ಮತ್ತು ಸಾಮರಸ್ಯದಿಂದ ಅಹಿಂದ ಸಂಘಟನೆಯನ್ನು ಬಲಪಡಿಸಬೇಕೆಂದು ಶರಣರು ಅಭಿಪ್ರಾಯಪಟ್ಟರು.ಹೈದರಾಬಾದ ವಿಶ್ವಶಾಂತಿ ಭಾವೈಕ್ಯತೆ ಕನ್ನಡ ಪ್ರವಚನಕಾರ ಪಂಡಿತ ಮೌಲಾನಾ ಸೈಯದ್ ಬಾಷಾಸಾಹೇಬ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಸಿಂಧನೂರ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ ಆಗಮಿಸಿ ಮಾತನಾಡಿದರು. ನೆಲೋಗಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಬಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಲ್ಲೂಕು ಅಹಿಂದ ಮುಖಂಡ ಬೈಲಪ್ಪ ನೆಲೋಗಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಅತಿಥಿಗಳಾಗಿ ವಿವಿಧ ಸಮಾಜ ಹಾಗೂ ಸಂಘಟನೆಗಳ ಮುಖಂಡರಾದ ಅಣ್ಣಾರಾವ್ ನರಿಬೋಳ, ಪುಂಡಲಿಕ ಗಾಯಕವಾಡ, ಗುಂಡಪ್ಪಗೌಡ ಹಾಲಘತ್ತರಗಿ, ನಂದಕುಮಾರ ಮಾಲಿಪಾಟೀಲ, ಸಿದ್ರಾಮಪ್ಪಗೌಡ ಸಿದ್ನಾಳ, ಸಿದ್ರಾಮ ಕಟ್ಟಿ, ತಿಪ್ಪಣ್ಣ ಕನಕ, ಶಂಕರ ಕಟ್ಟಿಸಂಗಾವಿ, ಶಿವಶರಣಪ್ಪ ಹೊನ್ನಾಳ, ಅಹಿಂದ ನೌಕರರ ಸಂಘದ ಅಧ್ಯಕ್ಷ ಶಿವಪುತ್ರಪ್ಪಕೋಣಿನ್, ಮನೋಜ ನವಲಕರ್, ಮಲ್ಕಣ್ಣ ಹನ್ನೂರ, ಎಂ.ಎಸ್.ಪಾಟೀಲ ಹರವಾಳ, ಭೂತಾಳಿ ದಾವಜಿ, ಶಿವಶರಣಪ್ಪ ಜಂಬೇರಾಳ, ಮಲ್ಲಿಕಾರ್ಜುನ ನೆಲೋಗಿ, ರಾಜಶೇಖರ ಮುತ್ತಕೋಡ ಮತ್ತಿತರರು ವೇದಿಕೆ ಮೇಲಿದ್ದರು. ಇದಕ್ಕೂ ಮುನ್ನ ಮಾಜಿ ಸಚಿವ ಶ್ರೀರಾಮುಲು ಅವರನ್ನು ಪಟ್ಟಣದ ಪ್ರವಾಸಿ ಮಂದಿರದಿಂದ- ಸರ್ಕಾರಿ ಪದವಿ-ಪೂರ್ವ ಕಾಲೇಜಿನ ಆವರಣದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.ಹಲಕಟೆಪ್ಪ ಯಡ್ರಾಮಿ ಪ್ರಾರ್ಥಿಸಿದರು, ಬಲಭೀಮ ನೆಲೋಗಿ ಸ್ವಾಗತ ಗೀತೆ ಹಾಡಿದರು, ಪುಂಡಲಿಕ ಗಾಯಕವಾಡ ಸ್ವಾಗತಿಸಿದರು, ಎಸ್.ಎಸ್.ಮಾಲಿಬಿರಾದಾರ ನಿರೂಪಿಸಿದರು, ಪರಮೇಶ್ವರ ಬಿರಾಳ ವಂದಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.