ಶೋಷಿತ ಸಮುದಾಯಗಳು ಒಗ್ಗೂಡಲಿ - ಸಿದ್ದರಾಮಯ್ಯ ಕರೆ

7

ಶೋಷಿತ ಸಮುದಾಯಗಳು ಒಗ್ಗೂಡಲಿ - ಸಿದ್ದರಾಮಯ್ಯ ಕರೆ

Published:
Updated:

ಬೆಂಗಳೂರು: `ಜಾತಿ ಉಪಜಾತಿಗಳ ವಿಘಟನೆಯನ್ನು ಮೀರಿ ಒಂದಾದಾಗ ಮಾತ್ರ ಹಿಂದುಳಿದ ವರ್ಗಗಳ ಉದ್ಧಾರ ಸಾಧ್ಯ~ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.ನಗರದಲ್ಲಿ ಬುಧವಾರ ನಡೆದ ಗಾಣಿಗ ಸಮಾಜದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಹಿಂದುಳಿದ ವರ್ಗಗಳ ಒಳಗೇ ನೂರಾರು ಉಪಜಾತಿಗಳಿವೆ. ಹಿಂದುಳಿದ ವರ್ಗಗಳ ಜನರು ತಮ್ಮಲ್ಲಿನ ಒಗ್ಗಟ್ಟಿನ ಬಗ್ಗೆಯೇ ಗಂಭೀರವಾಗಿ ಯೋಚಿಸುತ್ತಿಲ್ಲ. ಹೀಗಾದರೆ ಹಿಂದುಳಿದವರು ಹಿಂದೆಯೇ ಉಳಿಯಬೇಕಾಗುತ್ತದೆ~ ಎಂದು ಅವರು ನುಡಿದರು.`ನೂರಾರು ವರ್ಷಗಳಿಂದಲೂ ಹಿಂದುಳಿದ ಹಾಗೂ ದಲಿತರ ಶೋಷಣೆ ನಡೆಯುತ್ತಲೇ ಬಂದಿದೆ. ಆದರೆ ಇನ್ನೂ ಹಿಂದುಳಿದ ಜನರು ಈ ಬಗ್ಗೆ ಎಚ್ಚೆತ್ತುಕೊಂಡಿಲ್ಲದೇ ಇರುವುದು ದುರಂತ. ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಸ್ವಾವಲಂಬನೆಗಾಗಿ ಎಲ್ಲ ಶೋಷಿತ ಸಮುದಾಯಗಳೂ ಒಗ್ಗೂಡಬೇಕು~ ಎಂದು ಅವರು ಕರೆ ನೀಡಿದರು.`ಹಿಂದುಳಿದವರು, ಶೋಷಿತರು ತಳಮಟ್ಟದಲ್ಲಿಯೇ ಇರುವಂತೆ ಮೇಲ್ವರ್ಗದ ಜನರು ಹುನ್ನಾರ ಮಾಡುತ್ತಲೇ ಬಂದಿದ್ದಾರೆ. ಈ ದೇಶದಲ್ಲಿ ಹಿಂದಿನಿಂದಲೂ ಶ್ರಮಿಕ ವರ್ಗದ ಉತ್ಪಾದನೆಯನ್ನು ಮೇಲ್ವರ್ಗ ಅನುಭೋಗಿಸುತ್ತಲೇ ಬಂದಿದೆ. ತಳ ಸಮುದಾಯದ ಪ್ರತಿಭೆಗಳು ಬೆಳೆಯಲು ಈ ಮೇಲ್ವರ್ಗ ವಿರೋಧ ವ್ಯಕ್ತ ಪಡಿಸುತ್ತಲೇ ಇರುತ್ತದೆ.

 

ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ವಿಚಾರ ಬಂದಾಗ ರಾಮಾಜೋಯಿಸ್ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದರು. ಇದು ಮೇಲ್ವರ್ಗಗಳ ಸಂಕುಚಿತ ಮತ್ತು ಸಮಾನತೆ ವಿರೋಧಿ ಮನೋಭಾವವನ್ನು ತಿಳಿಸುತ್ತದೆ. ಬಿಜೆಪಿ ಕೂಡ ಹಿಂದಿನಿಂದಲೂ ಸಮಾನತೆ ಹೆಸರಲ್ಲಿ ಅಸಮಾನತೆಯನ್ನು ಬಿತ್ತುತ್ತಲೇ ಬರುತ್ತಿದೆ~ ಎಂದು ಅವರು ಕಿಡಿಕಾರಿದರು.`ಮಂಡಲ್ ಆಯೋಗದ ವರದಿ ಜಾರಿಯನ್ನು ವಿರೋಧಿಸಿ ಅಡ್ವಾಣಿ ರಥಯಾತ್ರೆ ಆರಂಭಿಸಿದರು. ಸಂಸದ ಅನಂತ ಕುಮಾರ್ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದವರಿಗೆ ಮೀಸಲಾತಿಯನ್ನು ವಿರೋಧಿಸಿದರು. ಈ ಮೂಲಕ ಬಿಜೆಪಿ ಮೀಸಲಾತಿ ಹಾಗೂ ಹಿಂದುಳಿದವರ ವಿರೋಧಿ ಎಂಬುದು ಜನಜನಿತವಾಗಿದೆ. ಮೀಸಲಾತಿಯ ಬಗ್ಗೆ ಶೋಷಿತರು ಕೀಳರಿಮೆ ಬೆಳೆಸಿಕೊಳ್ಳುವ ಅಗತ್ಯವಿಲ್ಲ.ಮೀಸಲಾತಿ ಶೋಷಿತರ ಹಾಗೂ ಹಿಂದುಳಿದವರ ಜನ್ಮಸಿದ್ಧ ಹಕ್ಕು. ಮೀಸಲಾತಿಯನ್ನು ಬಳಸಿಕೊಂಡು ಹಿಂದುಳಿದ ಸಮುದಾಯಗಳು ಶಿಕ್ಷಣ ಪಡೆದು ಸಮಾಜದಲ್ಲಿ ಸಮಾನತೆ ಸಾಧಿಸಲು ಹೋರಾಡಬೇಕು~ ಎಂದು ಅವರು ಕರೆ ನೀಡಿದರು.ವಿಧಾನ ಪರಿಷತ್ ಸದಸ್ಯ  ವಿ.ಆರ್.ಸುದರ್ಶನ್ ಮಾತನಾಡಿ, `ಹಿಂದುಳಿದ ವರ್ಗಗಳ ಸಮಾನತೆಯ ವಿಚಾರಕ್ಕಿಂತಲೂ ಮೊದಲು ಹಿಂದುಳಿದ ವರ್ಗಗಳ ಗುರುತಿಸುವಿಕೆ ಅಗತ್ಯ. ಕೇಂದ್ರ ಸರ್ಕಾರ 2004-05 ನೇ ಸಾಲಿನಲ್ಲಿಯೇ ಹಿಂದುಳಿದ ವರ್ಗಗಳ ಸಮೀಕ್ಷೆಗೆಂದು 21 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು.ಅಂದಿನ ರಾಜ್ಯ ಸರ್ಕಾರ ಇದೇ ಸಮೀಕ್ಷೆಗೆಂದು 2 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿತ್ತು. ಇಷ್ಟು ಹಣವಿದ್ದರೂ ಈ ವರೆಗೂ ಹಿಂದುಳಿದ ವರ್ಗಗಳ ಸಮೀಕ್ಷೆ ಆಗಿಲ್ಲ. ರಾಜ್ಯ ಸರ್ಕಾರ ಕೂಡಲೇ ಸಮೀಕ್ಷೆ ನಡೆಸಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಕೆಲಸ ಮಾಡಬೇಕು~ ಎಂದು ಒತ್ತಾಯಿಸಿದರು.`ಗಾಣಿಗ ಜನಾಂಗದಲ್ಲಿ ಅನೇಕ ಒಳ ಪಂಗಡಗಳಿದ್ದು ಈ ಪಂಗಡಗಳೆಲ್ಲ ಒಗ್ಗೂಡಿ ತಮ್ಮ ಸಾಮಾಜಿಕ ಶಕ್ತಿಯನ್ನು ಪ್ರದರ್ಶಿಸಬೇಕು. ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಮುಂದುವರೆಯಲು ಸಮುದಾಯದ ಜನತೆ ಹೆಚ್ಚು ಹೆಚ್ಚು ವಿದ್ಯಾವಂತರಾಗಬೇಕು. ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಶಿಕ್ಷಣದ ಮೂಲಕವೇ ಹಿಂದುಳಿವದರ ಏಳಿಗೆ ಸಾಧ್ಯ~ ಎಂದು ಅವರು ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ಗಾಣಿಗ ಸಮಾಜದ ಹಲವರನ್ನು ಸನ್ಮಾನಿಸಲಾಯಿತು. ಮಾಜಿ ಸಂಸದೆ ತೇಜಸ್ವಿನಿ, ಗಾಣಿಗ ಸಮಾಜದ ಎನ್.ಶ್ರೀನಿವಾಸ, ಟಿ.ಆರ್.ಕುಮಾರಸ್ವಾಮಿ, ಅನಂತ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry