ಶೌಚಾಲಯಕ್ಕೆ ಆದ್ಯತೆ ಇರಲಿ

7

ಶೌಚಾಲಯಕ್ಕೆ ಆದ್ಯತೆ ಇರಲಿ

Published:
Updated:

`ಉ ಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಿ ಬಡವನಯ್ಯಾ~ ಎಂದು ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣ ಹೇಳಿದ್ದರು. `ದೀನ-ದರಿದ್ರರಲ್ಲಿಯೇ ದೇವರನ್ನು ಕಾಣು~ ಎಂದು ಸ್ವಾಮಿ ವಿವೇಕಾನಂದರು ನೂರು ವರ್ಷಗಳ ಹಿಂದೆ ಹೇಳಿದ್ದರು.ಈ ಮಹಾಪುರುಷರೆಲ್ಲರೂ ನಾವು ಇಂದು ಸರ್ಕಾರಿ ಭಾಷೆಯಲ್ಲಿ ಕರೆಯುತ್ತಿರುವ `ಬಡತನದ ರೇಖೆಗಿಂತ ಕೆಳಗಿರುವವರ~ ಬಗ್ಗೆಯೇ ಮಾತನಾಡಿದ್ದರು. `ಜನತಾ ಸೇವೆಯೇ ಜನಾರ್ದನನ ಸೇವೆ~ ಎನ್ನುವುದು ನಮ್ಮ ರಾಜಕೀಯ ನಾಯಕರ ಘೋಷಣೆ ಕೂಡಾ ಆಗಿದೆ.ಯಾವ ಮಹಾಪುರುಷರು ಕೂಡಾ ಬಡತನ ನಿರ್ಮೂಲನೆಗಿಂತಲೂ ದೇವಾಲಯ ನಿರ್ಮಾಣ ಹೆಚ್ಚಿನ ಆದ್ಯತೆಯದ್ದು ಎಂದು ಹೇಳಿಲ್ಲ. ಈ ಹಿನ್ನೆಲೆಯಲ್ಲಿಯೇ ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವ ಜೈರಾಂ ರಮೇಶ್ `ಭಾರತದಲ್ಲಿ ಶೌಚಾಲಯಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿವೆ~ ಎಂಬ ಹೇಳಿಕೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ.ಶೌಚಾಲಯಗಳ ಕೊರತೆಯಿಂದಾಗಿ ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತಾಗಿದೆ. ವಿಶ್ವದಲ್ಲಿ ಶೌಚಾಲಯ ಇಲ್ಲದ ಕುಟುಂಬಗಳಲ್ಲಿ ಶೇಕಡಾ 60ರಷ್ಟು ಭಾರತದಲ್ಲಿಯೇ ಇದೆ ಎನ್ನುವುದು ಯಾರೂ ಹೆಮ್ಮೆಪಡುವಂತಹ ವಿಷಯ ಖಂಡಿತ ಅಲ್ಲ. ಸ್ವಾತಂತ್ರ್ಯ ಸಿಕ್ಕಿ 65ವರ್ಷಗಳಾದರೂ ದೇಶದ ಶೇಕಡಾ 44ರಷ್ಟು ಕುಟುಂಬಗಳು ಇನ್ನೂ ಶೌಚಾಲಯ ಹೊಂದಿಲ್ಲ ಎನ್ನುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.ಭಾರತದಲ್ಲಿ ಶೌಚಾಲಯ ಮತ್ತು ನೈರ್ಮಲ್ಯದ ಕೊರತೆಯಿಂದಾಗಿ ಅಕಾಲಿಕ ಸಾವು, ರೋಗಿಗಳಿಗೆ ಚಿಕಿತ್ಸೆ, ಉತ್ಪಾದನೆಯಲ್ಲಿ ಕುಸಿತ ಮತ್ತು ಪ್ರವಾಸೋದ್ಯಮಕ್ಕೆ ಹಿನ್ನಡೆ ಉಂಟಾಗಿ ವಾರ್ಷಿಕ 24,000 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ವಿಶ್ವಸಂಸ್ಥೆ ಇತ್ತೀಚಿನ ವರದಿಯಲ್ಲಿ ಹೇಳಿದೆ.ಶೌಚಾಲಯ  ಅತ್ಯಂತ ಮೂಲಭೂತವಾದ ನಾಗರಿಕ ಹಕ್ಕು ಮಾತ್ರ ಅಲ್ಲ, ಮಾನವ ಹಕ್ಕು ಕೂಡಾ ಆಗಿದೆ. ಈ ಕಾರಣಕ್ಕಾಗಿಯೇ ಮನೆಗಳಲ್ಲಿ ಮಾತ್ರವಲ್ಲ ಪ್ರತಿಯೊಂದು ಕಚೇರಿ ಮತ್ತು ಶಾಲೆಗಳಲ್ಲಿಯೂ ಶೌಚಾಲಯ ನಿರ್ಮಾಣವನ್ನು ಕಡ್ಡಾಯಗೊಳಿಸಬೇಕಾಗಿದೆ.ಹಣದ ಕೊರತೆ ಇಲ್ಲದ ಈ ಯೋಜನೆ ಕುಂಟುತ್ತಾ ಸಾಗಲು ಅಧಿಕಾರಿಗಳ ನಿರ್ಲಕ್ಷ ಮಾತ್ರ ಅಲ್ಲ ಸಾರ್ವಜನಿಕರ ಅಸಹಕಾರ ಕೂಡಾ ಕಾರಣ. ಸರ್ವರಿಗೂ ಶೌಚಾಲಯದ ಆಶಯ ಈಡೇರಬೇಕಾದರೆ ಇದು ಕೇವಲ ಸರ್ಕಾರಿ ಯೋಜನೆಯಾಗಿ ಉಳಿಯದೆ ಸಾಮಾಜಿಕ ಸುಧಾರಣೆಯ ಆಂದೋಲನವಾಗಬೇಕು.ದೇವರು, ಧರ್ಮ ಮತ್ತು ಪೂಜಾಕೇಂದ್ರಗಳನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಖಂಡಿತ ಸಲ್ಲದು. ಈಗ ಜೈರಾಂ ರಮೇಶ್ ಅವರನ್ನು ಟೀಕಿಸುವ ಬಿಜೆಪಿ ಧರ್ಮವನ್ನು ರಾಜಕೀಯಕ್ಕಾಗಿ ಹೇಗೆಲ್ಲ ದುರ್ಬಳಕೆ ಮಾಡಿಕೊಂಡು ಬಂದಿದೆ ಎನ್ನುವುದು ದೇಶದ ಜನರಿಗೆಲ್ಲ ಗೊತ್ತು.ಆದುದರಿಂದ ಇದನ್ನು ಅನಗತ್ಯವಾಗಿ ವಿವಾದ ಮಾಡುವ ಅಗತ್ಯ ಇಲ್ಲ. ಇದೇ ವೇಳೆ ಜೈರಾಂ ರಮೇಶ್ ಅವರು ಸರ್ವರಿಗೂ ಶೌಚಾಲಯ ಕಲ್ಪಿಸುವ ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ತಮ್ಮ ವಿರುದ್ಧದ ಆರೋಪ ಸುಳ್ಳೆಂದು ಸಾಬೀತುಪಡಿಸಬೇಕಾಗಿದೆ.ಇದರಲ್ಲಿ ಹಿಂದೆ ಬಿದ್ದರೆ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪ ನಿಜ ಎಂದು ಒಪ್ಪಬೇಕಾಗುತ್ತದೆ. ಈ ಎಚ್ಚರ ಬುದ್ದಿಜೀವಿ ರಾಜಕಾರಣಿಯಾದ ಜೈರಾಂ ರಮೇಶ್ ಅವರಿಗೆ ಇರಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry