ಶೌಚಾಲಯದಿಂದ ಪರಿಶುದ್ಧ ಪರಿಸರ

7

ಶೌಚಾಲಯದಿಂದ ಪರಿಶುದ್ಧ ಪರಿಸರ

Published:
Updated:

ಯಾದಗಿರಿ: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಸಲಹೆ ನೀಡಿದರು.ತಾಲ್ಲೂಕಿನ ಯಲ್ಹೇರಿ ಹಾಗೂ ರಾಮಸಮುದ್ರ ಗ್ರಾಮದಲ್ಲಿ ಪರಿಶುದ್ಧ ಯೋಜನೆಯಡಿ ನಿರ್ಮಿಸಲಾದ ಶೌಚಾಲಯ ವೀಕ್ಷಿಸಿದ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.ನಮ್ಮ ಸುತ್ತಲಿನ ವಾತಾವರಣ ತಿಳಿಯಾಗಬೇಕಾದರೆ ನಾವು ಪರಿಶುದ್ಧರಾಗಬೇಕು. ಶುದ್ಧ ಆಹಾರ ಸೇವಿಸಬೇಕು. ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.ಉತ್ತರ ಕರ್ನಾಟಕದಲ್ಲಿ ನಿಸರ್ಗದಿಂದ ದೊರೆಯುವ ಹಲವಾರು ಪ್ರಯೋಜನಗಳು ಯಾವುದೇ ಸರ್ಕಾರ ಮತ್ತು ಸಂಸ್ಥೆಗಳಿಂದ ಸಿಗುವುದಿಲ್ಲ ಆದರೆ ನಮ್ಮ ಜನರ ಇಚ್ಛಾಶಕ್ತಿ ಕೊರತೆಯಿಂದ ಅವುಗಳ ಸದುಪಯೋಗ ಆಗುತ್ತಿಲ್ಲ ಎಂದರು.ನಮ್ಮ ಊರ ಕೆರೆ ನಮ್ಮದು. ಅದರ ಹೊಳೆತ್ತುವ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಿದರೂ ಅದು ಸಫಲವಾಗುತ್ತಿಲ್ಲ. ಜನರಿಗೆ ಅದರ ಬಗ್ಗೆ ಕಾಳಜಿ ಇರಬೇಕು. ನಮ್ಮ ಊರ ಕೆರೆ ತುಂಬಿದಾಗ ಅದರ ಸುತ್ತಲಿನ ಕೊಳವೆಬಾವಿಗಳ ಅಂತರ್ಜಲ ಹೆಚ್ಚಾಗುತ್ತದೆ. ಆಗ ನಮ್ಮ ಹೊಲದಲ್ಲಿ ಕೊಳವೆಬಾವಿ ಹಾಕಿಸಿಕೊಂಡು ನೀರಾವರಿ ಪದ್ಧತಿ ಮೂಲಕ ಸಮೃದ್ಧ ಫಸಲನ್ನು ಪಡೆದು ಒಳ್ಳೆಯ ಜೀವನ ನಡೆಸಲು ಸಾಧ್ಯವಾಗಬಹುದು ಎಂದು ಹೇಳಿದರು.ಕೆರೆಯ ಸುತ್ತಲಿನ ವಾತಾವರಣ ಸ್ವಚ್ಛಗೊಳಿಸಿ ಅಲ್ಲಿ ಕಲ್ಲಿನಿಂದ ಆಸನ ವ್ಯವಸ್ಥೆ ಮಾಡಿದಲ್ಲಿ ಸಂಜೆಯ ವಾಯು ವಿಹಾರ ಮಾಡುವ ಮನಸ್ಸು ನಿರ್ಮಾಣವಾಗಿ ಸರ್ವರು ಸಹಬಾಳ್ವೆಯಿಂದ ಜೀವನ ನಡೆಸಲು ಸೂಕ್ತ ವಾತಾವರಣ ನಿರ್ಮಿತವಾಗುತ್ತದೆ ಎಂದು ಹೇಳಿದರು.ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರೂ ಶೌಚಾಲಯ ನಿರ್ಮಿಸಿಕೊಂಡಾಗ ಗ್ರಾಮ ಸ್ವಚ್ಛವಾಗುವುದರ ಜೊತೆಗೆ ದೇಶಕ್ಕೆ ನಿಮ್ಮದು ಮಾದರಿ ಗ್ರಾಮವಾಗಲಿ ಎಂದು ಹೇಳಿದರು.ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ನೀಲಕಂಠರಾಯ ಯಲ್ಹೇರಿ ಮಾತನಾಡಿ, ಯಾದಗಿರಿ ತಾಲ್ಲೂಕಿನಲ್ಲಿ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಕೆರೆಗಳಿದ್ದು, ಅವುಗಳ ಹೊಳೆತ್ತುವ ಕಾರ್ಯ ಪೂರ್ಣಗೊಂಡಿಲ್ಲ. ಇದರಿಂದ ನೀರಾವರಿ ವ್ಯವಸ್ಥೆಯಿಲ್ಲದೇ ಜನ ತಮ್ಮ ಹೊಲಗಳನ್ನು ಬೇರೆಯವರಿಗೆ ವಹಿಸಿ, ಕೆಲಸ ದೊರೆಯದೇ ಗುಳೆ ಹೋಗುತ್ತಿದ್ದಾರೆ.

 

ಅದರ ಯೋಜನೆ ಸಫಲಗೊಳ್ಳಲು ಯಾವುದಾದರೂ ಮಾರ್ಗವನ್ನು ಕಂಡು ಹಿಡಿದು ಜನರಿಂದ ಮತ್ತೆ ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಇನ್ಫೋಸಿಸ್ ಫೌಂಡೇಶನ್‌ನ ವಾಸು ದೇಶಪಾಂಡೆ, ವಿಕಾಸ ಅಕಾಡೆಮಿಯ ಸಂಚಾಲಕ ವೆಂಕಟರಡ್ಡಿ ಅಬ್ಬೆತುಮಕೂರ, ಗ್ರಾಮಸ್ಥರಾದ ಬುಗ್ಗಯ್ಯ ಕಲಾಲ, ಶರಣಪ್ಪಗೌಡ, ಭೀಮರಾಯ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry