ಭಾನುವಾರ, ಮೇ 16, 2021
22 °C

ಶೌಚಾಲಯವೇ ಇಲ್ಲದ ಕುಂಬಾರಪಾಳ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ಇಲ್ಲಿ ಅರವತ್ತೈದು ಮನೆಗಳಿವೆ. ಆದರೆ ಒಂದು ಮನೆಯಲ್ಲೂ ಶೌಚಾಲಯ ವ್ಯವಸ್ಥೆ ಇಲ್ಲ. ಸೂರ್ಯ ಹುಟ್ಟುವ ಮುನ್ನವೇ ಇಲ್ಲಿನ ಜನ ತಮ್ಮ ನಿತ್ಯ ಕರ್ಮಗಳನ್ನು ಮುಗಿಸುವ ಅನಿವಾರ್ಯ ಸನ್ನಿವೇಶವಿದೆ. ಒಟ್ಟು ಕುಟುಂಬಗಳ ಶೇ 25ರಷ್ಟು ಮಂದಿ ಗುಡಿಸಲಲ್ಲೇ ವಾಸ. ಕೊಳವೆ ಬಾವಿ ಇದ್ದರೂ ದಿನಕ್ಕೆ ಒಂದು ಅಥವಾ ಎರಡೇ ಬಿಂದಿಗೆ ನೀರು...ಇದು ಪಟ್ಟಣದ ಏಳನೇ ವಾರ್ಡ್‌ಗೆ ಸೇರಿದ ಕುಂಬಾರಪಾಳ್ಯದ ಸ್ಮಶಾನದ ಸಮೀಪ ವಾಸಿಸುತ್ತಿರುವ 65 ಕುಟುಂಬಗಳ ನಿತ್ಯ ಸಮಸ್ಯೆ.

ಪುರಸಭೆ ಒದಗಿಸಿರುವ 20*20ರ ವಿಸ್ತೀರ್ಣದಲ್ಲಿ ಮನೆ ಕಟ್ಟಿಕೊಳ್ಳಲಾಗಿದ್ದು, 200ಕ್ಕೂ ಹೆಚ್ಚು ಮಂದಿ ವಾಸವಿದ್ದಾರೆ. ತಮ್ಮ ಬೆಳಗಿನ ನಿತ್ಯ ಕರ್ಮಗಳಿಗೆ ಅವರು ಪಕ್ಕದ ಸ್ಮಶಾನದ ಬಯಲನ್ನೇ ಅವಲಂಬಿಸಿದ್ದಾರೆ. ಕನಿಷ್ಠ ಸಮುದಾಯ ಶೌಚಾಲಯ ಕೂಡ ಇಲ್ಲಿ ಇಲ್ಲವಾಗಿದೆ ಎಂಬುದು ನಿವಾಸಿಗಳ ಅಳಲು.

ಕೆಲ ಮನೆಗಳನ್ನು ಮಣ್ಣಿನಲ್ಲಿ ಕಟ್ಟಲಾಗಿದೆ. ಒಂದೆರಡು ಮನೆ ಹೊರತುಪಡಿಸಿದರೆ ಉಳಿದ 48 ಮನೆಗಳಿಗೆ ಸಿಮೆಂಟ್‌ಶೀಟ್‌ಗಳನ್ನು ಹೊದಿಸಲಾಗಿದೆ. ಮಳೆ ಬಂದರೆ ಅವು ಸಹ ಸೋರುತ್ತವೆ.15 ಕುಟುಂಬಗಳದ್ದು ಗುಡಿಸಿಲಲ್ಲೇ ವಾಸ. ಅವರಿಗೆ ಹಕ್ಕುಪತ್ರ ಕೂಡ ವಿತರಣೆಯಾಗಿಲ್ಲ. ಮನೆ ಕೆಲಸಕ್ಕೆ ಹೋಗುವುದು, ಲಾರಿಗಳಿಗೆ ಮೂಟೆ ತುಂಬುವುದು ಇಲ್ಲಿನ ನಿವಾಸಿಗಳ ಮುಖ್ಯ ಕಸಬು.ಪುರಸಭೆ ವತಿಯಿಂದ ಐದಾರು ಮನೆಗಳಿಗೆ 30 ಸಾವಿರ ರೂಪಾಯಿ ಮನೆ ಸಾಲ ಮಂಜೂರಾಗಿದೆ. ಆದರೆ ಇದುವರೆಗೂ ತಲಾ 20 ಸಾವಿರ ಮಾತ್ರ ದೊರೆತಿದೆ. ಉಳಿದ 10 ಸಾವಿರಕ್ಕಾಗಿ ಜನ ಎದುರು ನೋಡುತ್ತಿದ್ದಾರೆ. ಇನ್ನೂ ಕೆಲವರು ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. ಪುರಸಭೆ ವತಿಯಿಂದ ಸಾಲ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಸಾಲ ಮಾಡಿ ಮನೆ ಕಟ್ಟಿದ್ದೇವೆ. ಕಟ್ಟಿದ ನಂತರ ಸಾಲ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಸಾಲ ತೀರಿಸಲು ತೊಂದರೆಯಾಗಿದೆ ಎನ್ನತ್ತಾರೆ ನಿವಾಸಿ ಶ್ರೀನಿವಾಸ್.ಬಡಾವಣೆಯಲ್ಲಿ ಕೊಳವೆ ಬಾವಿ ಇದ್ದರೂ ನೀರಿಗೆ ಬರ ಒದಗಿದೆ. ನಿತ್ಯ ಅರ್ಧ ಗಂಟೆ ಮಾತ್ರ ಕೊಳವೆ ಬಾವಿಯಲ್ಲಿ ನೀರು ಬರುತ್ತಿದೆ. ಪ್ರತಿ ಕುಟುಂಬಕ್ಕೆ ಕೇವಲ ಒಂದು ಅಥವಾ ಎರಡು ಬಿಂದಿಗೆ ನೀರು ಸಿಗುತ್ತಿದೆ. 15 ದಿನಕ್ಕೊಮ್ಮೆ ಎಸ್.ಎನ್.ಟ್ರಸ್ಟ್ ವತಿಯಿಂದ ಪೂರೈಕೆಯಾಗುವ ಟ್ಯಾಂಕರ್ ನೀರಿಗೆ ಕಾಯಬೇಕಿದೆ ಎನ್ನುವುದು ನಿವಾಸಿಗಳ ಅಳಲು.ಈ ಬಡಾವಣೆ ಪಕ್ಕ ನಿತ್ಯ ಖಾಸಗಿ ಟ್ಯಾಂಕರ್‌ಗಳು ಚಲಿಸುತ್ತವೆ. ಟ್ಯಾಂಕರ್ ಚಾಲಕರನ್ನು ಗೋಗರೆದು ಒಂದೆರಡು ಬಿಂದಿಗೆ ನೀರು ಪಡೆಯುವುದು ಬಡಾವಣೆಯ ಕೆಲ ನಿವಾಸಿಗಳಿಗೆ ಅನಿವಾರ್ಯವಾಗಿದೆ.ಬಡಾವಣೆಯ ಮುಖ್ಯ ರಸ್ತೆಯ ಇಕ್ಕೆಲದಲ್ಲಿ ಮಾತ್ರ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಉಳಿದೆಡೆ ಸಮರ್ಪಕ ರಸ್ತೆ, ಚರಂಡಿಗಳು ಇಲ್ಲ. ಇರುವ ಚರಂಡಿ ಸ್ವಚ್ಛಗೊಳಿಸಿ ಕೆಲ ತಿಂಗಳು ಕಳೆದಿವೆ. ಅನಿವಾರ್ಯ ಎನಿಸಿದಾಗ ನಾವೇ ಸ್ವಚ್ಛಗೊಳಿಸುತ್ತೇವೆ ಎನ್ನುತ್ತಾರೆ ನಿವಾಸಿ ಗೋವಿಂದ.ಪುರಸಭೆ ಸದಸ್ಯೆ ಮುಗಿಲಮ್ಮ ಬಡಾವಣೆಯ ಕೆಲವೆಡೆ ಬೀದಿ ದೀಪ ಹಾಕಿಸಿದ್ದಾರೆ. ಆಗಾಗ ಟ್ಯಾಂಕರ್ ನೀರು ಪೂರೈಸಿದ್ದಾರೆ. ಆದರೆ ಇಲ್ಲಿನ ಮುಳ್ಳುಗಿಡಗಳನ್ನು ತೆರವುಗೊಳಿಸಿ, ತಕ್ಷಣ ಸಮುದಾಯ ಶೌಚಾಲಯ ಕಟ್ಟಿಸಬೇಕು ಎನ್ನುವುದು ಇಲ್ಲಿನ ಮಹಿಳೆಯರ ಸದ್ಯದ ಅಹವಾಲು. ಈ ಬಗ್ಗೆ ಮುಗಿಲಮ್ಮನವರ ಪ್ರತಿಕ್ರಿಯೆ ಪಡೆಯಲು `ಪ್ರಜಾವಾಣಿ' ನಡೆಸಿದ ಪ್ರಯತ್ನ ಕೈಗೂಡಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.