ಮಂಗಳವಾರ, ಮಾರ್ಚ್ 2, 2021
29 °C
ಗ್ರಾಮಾಯಣ

ಶೌಚಾಲಯವೇ ಇಲ್ಲದ ನೆರೆಬೆಂಚಿ!

ಪ್ರಜಾವಾಣಿ ವಾರ್ತೆ/ ನಾರಾಯಣರಾವ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಶೌಚಾಲಯವೇ ಇಲ್ಲದ ನೆರೆಬೆಂಚಿ!

ಕುಷ್ಟಗಿ: ಇನ್ನೂ ಎರಡು ವಾರ ಕಳೆದರೆ ಆ ಊರು ಸಾಹಿತ್ಯ ಸಂಭ್ರಮದಲ್ಲಿ ಮುಳಗಬೇಕು. ಸಾಹಿತ್ಯಾಸಕ್ತರು, ಗಣ್ಯ­ರನ್ನು ಸ್ವಾಗತಿಸಲು ಎಲ್ಲ ರೀತಿ­ಯಿಂದಲೂ ಶೃಂಗಾರಗೊಳ್ಳಬೇಕು. ಆದರೆ ಊರು ಪ್ರವೇಶಿಸುವಲ್ಲೇ ಕೊಳಚೆ, ಮುಳ್ಳುಕಂಟಿಗಳು ಸ್ವಾಗತಿಸು­ತ್ತಿವೆ. ಅಕ್ಷರಶಃ ಒಂದೂ ಶೌಚಾಲಯ­ವನ್ನೇ ಕಾಣದ ಇಲ್ಲಿ ರಸ್ತೆಗಳೇ ಬಹಿರ್ದೆಸೆಯ ತಾಣಗಳಾಗಿದ್ದು ಮೂಗು ಮುಚ್ಚಿಕೊಂಡೇ ಪ್ರವೇಶ ಮಾಡಬೇಕು. ಹಾಗಾಗಿ ಜನರ ಉತ್ಸಾಹಕ್ಕೆ ಮಾಲಿನ್ಯ ತಣ್ಣೀರೆರೆಚಿದೆ.–ಹೌದು. ಜಿಲ್ಲಾ ಕೇಂದ್ರ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ, ತಾಲ್ಲೂಕು ಸ್ಥಳದಿಂದ ಕೇವಲ ನಾಲ್ಕೈದು ಕಿಮೀ ದೂರ ಇರುವ ನೆರೆಬೆಂಚಿ (ಕಂದಕೂರು ಗ್ರಾ.ಪಂ) ಗ್ರಾಮದ ಸ್ಥಿತಿಗತಿ.ಕುಡಿಯುವ ನೀರು, ಬೀದಿ ದೀಪ­ಗಳನ್ನು ಬಿಟ್ಟರೆ ಇತರೆ ಮೂಲಸೌಲಭ್ಯ­ಗಳಿಂದ ಗ್ರಾಮ ವಂಚಿತವಾಗಿದೆ. ಮಟ್ಕಾ, ಜೂಜಾಟ, ಅಕ್ರಮ ಮದ್ಯ ಮಾರಾಟಗಳಿಂದ ಮುಕ್ತವಾಗಿದೆ ಎಂಬುದು ಮಾತ್ರ ಜನರಲ್ಲಿ ಸಮಾ­ಧಾನ ತರುವ ಸಂಗತಿ. ರಾಜ್ಯ ಹೆದ್ದಾರಿ ಊರಲ್ಲಿ ಹಾದುಹೋಗಿದ್ದರೂ ಅಕ್ಕಪಕ್ಕ ಬಳ್ಳಾರಿ ಜಾಲಿ ಕಂಟಿಗಳು ಮೈಪ­ರಚುತ್ತಿವೆ. ಅಕ್ಕಪಕ್ಕ ತಿಪ್ಪೆಗುಂಡಿಗಳು ರಸ್ತೆಯನ್ನೇ ನುಂಗಿಹಾಕಿವೆ. ದೊಡ್ಡಗಾತ್ರದ ಕಾಂಕ್ರೀಟ್‌ ಚರಂಡಿ ಅಪೂರ್ಣವಾ­ಗಿದ್ದರೂ ಲೋಕೋಪ­ಯೋಗಿ ಇಲಾಖೆ ಗಮನಿಸಿಲ್ಲ.ಕೆಲ ತಿಂಗಳ ಹಿಂದಷ್ಟೇ ನೈರ್ಮಲ್ಯ ದಿನಾಚರಣೆ ಅಂಗವಾಗಿ ಜನಜಾಗೃತಿ ಕಾರ್ಯಕ್ರಮ ನಡೆದ ಈ ಊರಿನಲ್ಲಿ ಒಂದೂ ಶೌಚಾಲಯ ಇಲ್ಲ. ಅಪ್ಪಿತಪ್ಪಿ ಒಂದೂ ವೈಯಕ್ತಿಕ ಶೌಚಾಲಯ ಕಣ್ಣಿಗೆ ಬೀಳುವುದಿಲ್ಲ ಹಾಗಾಗಿ ಎಲ್ಲದೂ ರಸ್ತೆ ಬದಿಯಲ್ಲೇ ನಡೆಯಬೇಕು. ಹಗಲುಹೊತ್ತಿನಲ್ಲಿ ಮಹಿಳೆಯರ ಗೋಳು ಮಾತುಗಳಲ್ಲಿ ವರ್ಣಿಸುವಂತಿಲ್ಲ. ಸುತ್ತಲೂ ಬಯಲು ಇರುವುದರಿಂದ ಮರ್ಯಾದೆ ಇಲ್ಲದಂತಾಗಿದೆ. ನಿತ್ಯ ಒಳಗೊಳಗೇ ಹಿಂಸೆ ಅನುಭವಿಸುತ್ತಿರುವುದನ್ನು ಮಹಿಳೆಯರ ಬಾಯಿಂದಲೇ ಕೇಳಬೇಕು. ಆದರೆ ಯಾರೂ ಕಿವಿಗೆ ಹಾಕಿಕೊಂಡಿಲ್ಲ ಎಂಬ ಕೊರಗು ಅವರದು.ಸರ್ಕಾರಿ ದಾಖಲೆಗಳಲ್ಲಿ ಹಣ ಖರ್ಚಾಗಿದೆ ಒಂದೂ ಶೌಚಾಲಯ ಇಲ್ಲ. ಬಹುಶಃ ಜಿಲ್ಲೆಯಲ್ಲಿ ಒಂದೂ ವೈಯಕ್ತಿಕ ಶೌಚಾಲಯ ಇಲ್ಲದ ಗ್ರಾಮ ಇದೊಂದೆ ಇರಬಹುದು ಎಂಬುದು ಜನರ ಅಂಬೋಣ.ಗ್ರಾಮದ ಅರ್ಧ ಓಣಿಗೆ ದಾರಿ ಇಲ್ಲದೇ ವೃದ್ಧರು, ಮಹಿಳೆ, ಮಕ್ಕಳು ಪರದಾಡುತ್ತಿದ್ದಾರೆ. ಹೊಸ ಗ್ರಾಮಕ್ಕೆ ಕುಡಿಯುವ ನೀರಿನ ಸಂಪರ್ಕ ಇಲ್ಲ. ಹತ್ತು ತಿಂಗಳಿಗೆ ಒಬ್ಬೊಬ್ಬರಂತೆ ಅಧ್ಯಕ್ಷರು ಬದಲಾಗುತ್ತಾರೆ. ನಮ್ಮ ಊರಿನ ಬಗ್ಗೆ ಯಾರೂ ಗಮನಹರಿಸು­ವುದಿಲ್ಲ ಎಂಬ ದೂರು ಕೇಳಿಬರುತ್ತದೆ.ಜಲನಿರ್ಮಲ ಯೋಜನೆಯಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಇದ್ದರೂ ತುಕ್ಕು ಹಿಡಿದು ಎಷ್ಟೋ ವರ್ಷಗಳು ಗತಿವೆ ಎಂದು ಗುಂಡಪ್ಪ ಮಾಮಾಲಿ, ಶರಣಪ್ಪ ಕರಿಗಾರ, ನಿರುಪಾದೆಪ್ಪ ಇತರರು ಹೇಳಿದರು. ಊರಿನ ಮಧ್ಯ ಇರುವ ಅಂಗನವಾಡಿ ಕೇಂದ್ರದ ಪಕ್ಕದಲ್ಲೇ ಜನ ಮಲ ಮೂತ್ರ ವಿಸರ್ಜಿಸುವುದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಕಾರ್ಯಕರ್ತೆ ದ್ಯಾಮವ್ವ ಕುರಿ ವಿವರಿಸಿದರು.ಸಾಹಿತ್ಯ ಸಮ್ಮೇಳನ ನಡೆಯುವ ನೆಪದಿಂದಲಾದರೂ ಮೂಲಸೌಲ­ಭ್ಯಗಳತ್ತ ಸಂಬಂಧಿಸಿದವರು ಗಮನಹ­ರಿಸಿ­ಯಾರು ಎಂಬ ನಿರೀಕ್ಷೆ ಗ್ರಾಮಸ್ಥರದ್ದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.