ಶೌಚಾಲಯವೇ ತಿಪ್ಪನ ಕಸ್ತೂರಿ ನಿವಾಸ!

ಶುಕ್ರವಾರ, ಮೇ 24, 2019
23 °C

ಶೌಚಾಲಯವೇ ತಿಪ್ಪನ ಕಸ್ತೂರಿ ನಿವಾಸ!

Published:
Updated:

ಮದ್ದೂರು: ಇದೊಂದು ವಿಚಿತ್ರ ಕಥೆ. ನೀವೇ ಓದಿ.ಈತನ ಹೆಸರು ತಿಪ್ಪ. ಚಪ್ಪಲಿ ಹೊಲೆಯುವುದು ಈತನ ಕಾಯಕ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವೃತ್ತವೇ ಈತನ ಕರ್ಮಭೂಮಿ.ಪ್ರತಿದಿನ ಈತನ ಕಂಗಳು ದಾರಿಯಲ್ಲಿ ನಡೆದು ಹೋಗುವವರ ಕಾಲ್ಗಳನ್ನೇ ದಿಟ್ಟಿಸುತ್ತವೆ. ಕಾಲ್ಗಳಲ್ಲಿನ ಚಪ್ಪಲಿ ಕಿತ್ತುಹೋಗಿದೇಯೇ ಎಂಬ ಪರಿಶೀಲನೆ ನಿತ್ಯ ನಡೆಯುತ್ತದೆ. ಸ್ವಲ್ಪ ಕಿತ್ತು ಹೋಗಿದ್ದರೂ ಹೊಲಿಸಿಕೊಳ್ಳಿ ಎಂದು ವಿಜ್ಞಾಪಿಸುತ್ತಾನೆ. ಇಲ್ಲದಿದ್ದರೆ, ಕಡೇ ಪಕ್ಷ ನಿಮ್ಮ ಚಪ್ಪಲಿ-ಬೂಟಿಗೆ ಪಾಲಿಷ್ ಹಾಕುತ್ತೇನೆ ಬನ್ನಿ ಎಂದು ಗೊಗೆರೆಯುತ್ತಾನೆ. ಈತನ ವಿನಂತಿಗೆ ದಿನಕ್ಕೆ ಒಂದಷ್ಟು ಮಂದಿ ಸಿಕ್ಕುತ್ತಾರೆ. ಸಿಕ್ಕುವ ಪುಡಿಗಾಸಿನಲ್ಲೇ ತನ್ನ ಇಡೀ ಕುಟುಂಬದ ದಿನದ ತುತ್ತಿನ ಚೀಲ ತುಂಬಿಸುತ್ತಾನೆ.ಈತನ ಹೆಂಡತಿ ರಾಧಮ್ಮನಿಗೆ ಚಿಂದಿ ಆಯುವ ಕಸುಬು. 5ಗಂಡು, ಒಂದು ಹೆಣ್ಣು ಸೇರಿದಂತೆ ಆರು ಮಕ್ಕಳಿವೆ. ಹಿರಿಯ ಮಗನಿಗೆ ಮದುವೆಯಾಗಿದೆ. ಆತ ರಾಮನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದಾನೆ. 2ನೇ ಮಗ ಆತನದ್ದೂ ಗಾರೆ ಕೆಲಸ. ಮೂರನೇ ಮಗ ತಿಪ್ಪನ ಅಣ್ಣನ ಮನೆಯಲ್ಲಿದ್ದು 4ನೇ ತರಗತಿ ಓದುತ್ತಿದ್ದಾನೆ. ಇನ್ನುಳಿದ ಇಬ್ಬರು ಗಂಡು ಮಕ್ಕಳು, ಕೊನೆಯ ಹೆಣ್ಣುಮಗು ಸದ್ಯಕ್ಕೆ ತಿಪ್ಪನ ಸುಪರ್ದಿಯಲ್ಲಿವೆ. ಈ  ಮಕ್ಕಳ ವಯಸ್ಸು ಹತ್ತು ದಾಟಿಲ್ಲ. ಇದು ತಿಪ್ಪನ ಸುಂದರ ಸಂಸಾರದ ವಿವರ. ಆದರೆ, ಈ ಸುಂದರ ಸಂಸಾರದ ತಲೆ ಕಾಯಲು ಸೂರಿಲ್ಲ. ಸದ್ಯ ಈ ವೃತ್ತದಲ್ಲಿನ ಪಾಳು ಬಿದ್ದ ಸಾರ್ವಜನಿಕ ಶೌಚಾಲಯವೇ ಈತನ ಕಸ್ತೂರಿ ನಿವಾಸ.ಈ ಕಸ್ತೂರಿ ನಿವಾಸದ್ದು ಒಂದು ದೊಡ್ಡ ಕಥೆ. 2001-02ನೇ ಸಾಲಿನಲ್ಲಿ ಸ್ಥಳೀಯ ಶಾಸಕರ ಅಭಿವೃದ್ಧಿ ಅನುದಾನದಲ್ಲಿ ಕಟ್ಟಲ್ಪಟ್ಟ ಈ ಸಾರ್ವಜನಿಕ ಶೌಚಾಲಯ. ದಿನಗಳೆದಂತೆ ನಿರ್ವಹಣೆ ಕೊರತೆಯ ಫಲವಾಗಿ ಪಾಳು ಬಿದ್ದಿತು. ಈ ಪಾಳು ಬಿದ್ದ ಶೌಚಾಲಯಕ್ಕೆ ಇದೀಗ ತಿಪ್ಪನೇ ಯಜಮಾನ. ಹಗಲಿನ ವೇಳೆ ಹೊರಗಿರುವ ಈತನ ಸಂಸಾರಕ್ಕೆ ಸಂಜೆಯಾಗುತ್ತಿದ್ದಂತೆ ಈ ಶೌಚಾಲಯವೇ ವಾಸದ ಮನೆ.ಈತನ ತಂದೆ ತಿಮ್ಮಯ್ಯ ಪೌರಕಾರ್ಮಿಕ. ಇವರಿಗೆ  ಪಟ್ಟಣದ ಸಿದ್ದಾರ್ಥನಗರದ 7ನೇ ಕ್ರಾಸ್‌ನಲ್ಲಿ ಒಂದು ಹೆಂಚಿನ ಮನೆ ಇತ್ತು. ಕಾಲಾನಂತರ ತಂದೆ ತಿಮ್ಮಯ್ಯ ಕಣ್ಮುಚ್ಚಿದರು. ಆ ಮನೆ ತಿಪ್ಪನ ಸುಪರ್ದಿಗೆ ಬಂತು. ಈ ಮೂರು ವರ್ಷದ ಹಿಂದೆ ಪಟ್ಟಣಕ್ಕೆ ಜೋರು ಮಳೆ ಬಂತು. ಮೊದಲೇ ಶಿಥಿಲಗೊಂಡಿದ್ದ ಮನೆ ಧರೆಗೆ ಉರುಳಿ ಬಿತ್ತು. ಗೋಡೆಯ ಯಾವುದೋ ಸಂದಿ ಯಲ್ಲಿದ್ದ ನಿವೇಶನದ ಹಕ್ಕು ಪತ್ರವೂ ನಾಶ ಹೊಂದಿತು.

 

ಅಂದಿನಿಂದ ತಿಪ್ಪನ ಸಂಸಾರ ಬೀದಿಗೆ ಬಂತು. ಬೀದಿಯಲ್ಲೇ ಮಲಗುತ್ತಿದ್ದ ಸಂಸಾರಕ್ಕೆ ಪಾಳುಬಿದ್ದ ಈ ಶೌಚಾಲಯ ಅರಮನೆಯಂತೆ ದಕ್ಕಿತು. ಈ ಅರಮನೆಯಿಂದ ಮುಕ್ತಿ ಪಡೆಯಲು ಈಗಾಗಲೇ ತಿಪ್ಪ ಪಟ್ಟಣ ಪುರಪಿತೃಗಳ ಮನೆಗೆ ಚಪ್ಪಲಿ ಸವೆಸಿದ್ದಾನೆ. ಆದರೆ, ಹಕ್ಕುಪತ್ರ ಇಲ್ಲದೇ ಹಣ ನೀಡಲು ಸಾಧ್ಯವಿಲ್ಲ ಎಂಬ ಉತ್ತರ ಕೇಳಿ ಬಂದಿದೆ. ಹಕ್ಕು ಪತ್ರ ಪಡೆಯುವುದು ಹೇಗೆ? ಎನ್ನುವುದು ತಿಪ್ಪನಿಗೆ ತಿಳಿದಿಲ್ಲ. ಹೀಗಾಗಿ ತಿಪ್ಪನ ಮನೆಯ ಕನಸು ಕನಸಾಗಿಯೇ ಉಳಿದಿದೆ.ಪ್ರತಿವರ್ಷ ಪುರಸಭೆ ಬಜೆಟ್‌ನಲ್ಲಿ ಪರಿಶಿಷ್ಟಜಾತಿ ಪಂಗಡದ ಅಭಿವೃದ್ಧಿಗೆ ಶೇ.22.75ರಷ್ಟು ಹಣ ಮೀಸಲಿಡಲಾಗಿದೆ. ಇದುವರೆಗೂ ಈ ಹಣದಲ್ಲಿ ತಿಪ್ಪನ ಸಂಸಾರಕ್ಕೆ ಒಂದು ಪಾತ್ರೆ ಪಗಡ ನೀಡಿಲ್ಲ. `ನಮ್ಮಗೆಲ್ಲಿ ಕೊಡ್ತಾರೆ ಸಾಮಿ.. ನಾವು ಚಪ್ಪಲಿ ಹೊಲೆಯೋರು... ಎಲ್ಲನೂ ತಾರಸಿ ಮನೆಲೀ ಇದ್ದವರಿಗೆ ಕೊಡ್ತಾರೆ~ ಎನ್ನುವ ರಾಧಾಮ್ಮನ ಅಳಲಿಗೆ ಉತ್ತರವಿಲ್ಲ.ಇದು ನಮ್ಮ ಮನೆ ಎಂಬುದಕ್ಕೆ ತಿಪ್ಪನ ಹೆಂಡತಿ ರಾಧಾಮ್ಮ ಶೌಚಾಲಯದ ಕೊಠಡಿಗಳಲ್ಲಿ ತನ್ನ ಬುಟ್ಟಿ, ಪಾತ್ರೆ, ಪೆಟ್ಟಿ ಪೆಟಾರಿ ಇಟ್ಟಿದ್ದಾಳೆ. ಇದೀಗ ಯಾರು ಶೌಚಾಲಯದತ್ತ ಸುಳಿಯುತ್ತಿಲ್ಲ. ಅಣ್ಣಾ ಹಜಾರೆಯ ಭ್ರಷ್ಟಚಾರ ವಿರೋಧಿ ಕೂಗಿಗೆ ದನಿಯಾಗುವ ಸಜ್ಜನರಿಗೆ,  ಶೌಚಾಲ ಯವನ್ನೇ ತನ್ನ ಕಸ್ತೂರಿ ನಿವಾಸವನ್ನಾಗಿ ಮಾಡಿಕೊಂಡ ತಿಪ್ಪನ ದುರಾವಸ್ಥೆ ಕಾಣದಿರುವುದು ದುರಂತ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry