ಭಾನುವಾರ, ಜನವರಿ 26, 2020
28 °C

ಶೌಚಾಲಯ ನಿರ್ಮಿಸದಿದ್ದರೆ ಪಿಡಿಒ ವಿರುದ್ಧ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ಶೌಚಾಲಯಗಳ ನಿರ್ಮಾಣಕ್ಕಾಗಿ ನಿರ್ಮಲ ಭಾರತ ಅಭಿಯಾನ ಯೋಜನೆ ಅಡಿಯಲ್ಲಿ ತಾಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಪಟ್ಟಣದ ರೋಟರಿ ಬಾಲಭವನದಲ್ಲಿ ನಿರ್ಮಲ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಜಿಲ್ಲಾ ಪಂಚಾಯ್ತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಸಂಪೂರ್ಣ ಸ್ವಚ್ಛತಾ ಆಂದೋಲನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಪ್ರತಿಯೊಂದು ಮನೆ, ಶಾಲೆ, ಅಂಗನವಾಡಿಗಳಲ್ಲಿ ಶೌಚಾಲಯಗಳು ನಿರ್ಮಾಣವಾಗಬೇಕು. ಹಳ್ಳಿಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಸಾಮರಸ್ಯವಿರಬೇಕು. ನಿರ್ಮಲ ಭಾರತ ಅಭಿಯಾನ ಯೋಜನೆ ಅನುಷ್ಠಾನವಾಗಿ ೨೮ ವರ್ಷವಾದರೂ ಶೌಚಾಲಯ ನಿರ್ಮಾಣದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಎಂ.ನಾರಾಯಣಸ್ವಾಮಿ ಮಾತನಾಡಿ, ಡಿಸೆಂಬರ್‌ ತಿಂಗಳ ಅಂತ್ಯದೊಳಗೆ ಕಡ್ಡಾಯವಾಗಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ೨೦೦ ಶೌಚಾಲಯ ನಿರ್ಮಾಣ ಮಾಡಬೇಕು ಇಲ್ಲವಾದಲ್ಲಿ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಿಡಿಒಗಳಿಗೆ ಎಚ್ಚರಿಕೆ ನೀಡಿದರು.ದೊಡ್ಡಉಳ್ಳಾರ್ತಿ ಪಿಡಿಒ ಕೊರಲಯ್ಯ ಸಮರ್ಪಕ ಉತ್ತರ ನೀಡದಿರುವುದನ್ನು ಗಮನಿಸಿದ ಸಿಇಒ ಶೌಚಾಲಯಗಳ ಬಗ್ಗೆ ಮಾಹಿತಿ ಕೊರತೆ ಇರುವ ಪಿಡಿಒಗಳಿಗೆ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಪಂಚಾಯ್ತಿ ಯೋಜನಾಧಿಕಾರಿಗೆ ಸೂಚಿಸಿದರು.ನಾಯಕನಹಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಏಕಾಂತಮ್ಮ ಮಾತನಾಡಿ, ಗ್ರಾಮದಲ್ಲಿ ೧೦ ಕೊಳವೆಬಾವಿ ಕೊರೆಸಲಾಗಿತ್ತು. ನಾಲ್ಕರಲ್ಲಿ ನೀರು  ಬರುತ್ತಿಲ್ಲ. ಜನರು ಪ್ರತಿನಿತ್ಯ ಕುಡಿಯುವ ನೀರು ಕಲ್ಪಿಸುವಂತೆ ಆಗ್ರಹಿಸುತ್ತಿದ್ದಾರೆ ಎಂದು ಅಳಲು ತೊಡಿಕೊಂಡರು.ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಅಗತ್ಯವಿರುವಷ್ಟು ಮಳೆ ಬಂದಿದೆ. ಆದರೆ ಕೊಳವೆಬಾವಿ ಸುತ್ತ ನೀರು ಇಂಗಿಸುವ ಕೆಲಸ ಮಾಡಿಲ್ಲ. ಹಾಗಾಗಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಮಳೆ ನೀರು ಇಂಗಿಸಿದರೆ ಮೂರು

ವರ್ಷ ನೀರಿನ ಸಮಸ್ಯೆ ಇರುವುದಿಲ್ಲ. ಆದ್ದರಿಂದ  ಚೆಕ್ ಡ್ಯಾಂಗಳನ್ನು ನಿರ್ಮಿಸುವ ಬದಲು ಇಂಗು ಗುಂಡಿಗಳಿಗೆ ಆದ್ಯತೆ ನೀಡಿ ಎಂದು ತಾಕೀತು ಮಾಡಿದರು.ತಹಶೀಲ್ದಾರ್ ಎಚ್.ವಿ. ವಿಜಯರಾಜು ಮಾತನಾಡಿ, ಕೆರೆ ಮತ್ತು ಗೋಮಾಳಗಳನ್ನು ಒತ್ತುವರಿ ಮಾಡಿ ಕೊಂಡಿರುವವರನ್ನು ತೆರವು ಗೊಳಿಸಲಾಗುತ್ತದೆ. ಖಾತ್ರಿ ಯೋಜನೆಯಲ್ಲಿ ರುದ್ರಭೂಮಿಗಳನ್ನು ಅಭಿವೃದ್ಧಿಸುವಂತೆ ಪಿಡಿಒಗಳಿಗೆ ಸೂಚಿಸಿದರು.ತರಬೇತಿ ನೀಡಲು ಮಂಗಳೂರು ಮತ್ತು ಕೋಲಾರ ಜಿಲ್ಲೆಗಳಿಂದ ಸಂಪನ್ಮೂಲ ವ್ಯಕ್ತಿಗಳು ಬಂದಿದ್ದರು. ಶಿಕ್ಷಣ ಇಲಾಖೆ, ಅಂಗನವಾಡಿ, ಆರೋಗ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಜಲಾನಯನ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಸದಸ್ಯರು, ಅಧಿಕಾರಿಗಳು  ಕಾರ್ಯಾಗಾರದಲ್ಲಿ ಭಾಗಹಿಸಿದ್ದರು.

ಪ್ರತಿಕ್ರಿಯಿಸಿ (+)