ಸೋಮವಾರ, ಮೇ 10, 2021
25 °C

ಶೌಚಾಲಯ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಶೌಚಾಲಯ ನಿರ್ಮಿಸುವ ವಿಶೇಷ ಯೋಜನೆ ಜಾರಿಗೊಳಿಸಿದೆ. ಆದರೆ ಅಧಿಕಾರಿಗಳು ಈ ಕುರಿತು ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಿಗೇ ಸೂಕ್ತ ಮಾಹಿತಿ ನೀಡಿಲ್ಲ.ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕರೂರು ಕ್ಷೇತ್ರದ ಸದಸ್ಯೆ ಬಳ್ಳೊಳ್ಳಿ ಮಲ್ಲಮ್ಮ ಈ ರೀತಿ ಆರೋಪಿಸಿದರು.`ಪಾಯಖಾನೆ ಕಟ್ಟಾಕ ಸರ್ಕಾರ್ದಿಂದ ರೊಕ್ಕ ಕೊಡ್ತಾರಂತ. ಗ್ರಾಮ ಪಂಚಾಯಿತಿ ಪಿಡಿಓಗಳು, ಸೆಕ್ರೆಟ್ರಿಗಳು ನಮಗೆ ಈ ಬಗ್ಗೆ ತಿಳಿಸೇ ಇಲ್ಲ. ಈ ರೀತಿ ಆದ್ರ ಜನಕ್ಕೆ ತಿಳಿಯೂದಾದ್ರೂ ಹ್ಯಂಗ?~ ಎಂದು ಅವರು ಪ್ರಶ್ನಿಸಿದರು.`ನಮ್ಮ ಭಾಗದಾಗ ಕುಡ್ಯಾಕ ನೀರಿಲ್ಲ. ಕುಡ್ಯೂ ನೀರಾಗ ಹುಳಾ ಬಿದ್ದಾವ. ಓಟ್ ಕೊಟ್ಟ ಜನಾ ಮಕಾ ಮಕಾ ಬೈಯ್ಯಾಕತ್ತಾರ. ಹಳ್ಳಿಗುಳಾಗ ಅಂಗನವಾಡಿಗೆ ಕಟ್ಟಡ ಇಲ್ಲ. ಗುಡಿ- ಗುಂಡಾರದಾಗ ಮಕ್ಕಳಿಗೆ ಸಾಲಿ ಕಲಸಾಕತ್ತಾರ. ಜನಗುಳಿಗೆ ಪಾಯಖಾನಿ ಕಟ್ಟಸಾಕ ರೊಕ್ಕ ಕೊಡ್ತೀವಿ ಅಂತ ನೀವು ಹೇಳ್ತೀರಿ. ಅಲ್ಲಿ ಗ್ರಾಮ್ ಪಂಚಾಯ್ತಿಗುಳಾಗ ಯಾವ್ದರ್ ಬಗ್ಗೆನೂ ಹೇಳೂದಿಲ್ಲ~ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.ಜಿಲ್ಲೆಯ ಅನೇಕ ಶಾಲೆಗಳಲ್ಲಿ ಶೌಚಾಲಯಗಳಿಲ್ಲ, ಇದರಿಂದ ವಿದ್ಯಾರ್ಥಿನಿಯರಿಗೆ ತೀವ್ರ ತೊಂದರೆ ಎದುರಾಗಿದೆ ಎಂದು ಸದಸ್ಯೆ ಶಾರದಾ ಪ್ರಸಾದ್ ಆರೋಪಿಸಿದರು.ಶೌಚಾಲಯ ನಿರ್ಮಿಸಿಕೊಳ್ಳಲು ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳಿಗೆ ಧನಸಹಾಯ ಸೌಲಭ್ಯವನ್ನೂ ನೀಡಲಾಗುವುದು  ಎಂದು ಕಾರ್ಯದರ್ಶಿ ಅನ್ನದಾನಯ್ಯ ಸಭೆಗೆ ತಿಳಿಸಿದರು.ಶೌಚಾಲಯ ನಿರ್ಮಿಸಿಕೊಳ್ಳುವವರಿಗೆ ನೀಡಲಾಗುವ ಧನಸಹಾಯದ ಬಗ್ಗೆ ವಿವರ ನೀಡುವುದರೊಂದಿಗೆ, ಸಾರ್ವಜನಿಕ ಶೌಚಾಲಯಗಳು ಮತ್ತು ಶಾಲಾ ಶೌಚಾಲಯಗಳ ನಿರ್ವಹಣೆಗೆ ಉದ್ಯೋಗ ಖಾತರಿ ಯೋಜನೆ ಅಡಿ ಕನಿಷ್ಠ ಸಂಬಳ ನೀಡಿ, ಯಾವುದಾದರೂ ಸಿಬ್ಬಂದಿ ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಸೂಚಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.