ಶನಿವಾರ, ಏಪ್ರಿಲ್ 17, 2021
23 °C

ಶೌಚಾಲಯ ಸ್ವಚ್ಛತೆಗೆ ಯಂತ್ರ ಬಳಕೆ

ಕೆ.ನರಸಿಂಹಮೂರ್ತಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ರಾಜ್ಯದ ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಶೌಚಾಲಯ ಗುಂಡಿಗಳನ್ನು ಯಂತ್ರಗಳ ಮೂಲಕ ಮಾತ್ರ ಸ್ವಚ್ಛಗೊಳಿಸುವ ಸಂಬಂಧ ಪ್ರತಿ ತಾಲ್ಲೂಕು ಪಂಚಾಯತ್‌ನ ಅವಶ್ಯಕತೆಗೆ ಅನುಗುಣವಾಗಿ 2ರಿಂದ 4 `ಸಕ್ಕಿಂಗ್ ಯಂತ್ರ~ಗಳನ್ನು ಖರೀದಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಎಲ್ಲ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದೆ. ಆ ಮೂಲಕ, ಕಾರ್ಮಿಕರಿಂದ ಮಲದಗುಂಡಿ ಸ್ವಚ್ಛಗೊಳಿಸುವ ಪದ್ಧತಿ ನಿರ್ಮೂಲನೆ ಮಾಡಲು ಹೊರಟಿದೆ.ಮಾರ್ಚ್ 7ರಂದು ರಾಜ್ಯ ಹೈಕೋರ್ಟ್‌ನಲ್ಲಿ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ (ಸಂ.30221/2009) ವಿಚಾರಣೆ ವೇಳೆ ನೀಡಲಾದ ಸೂಚನೆ ಹಿನ್ನೆಲೆಯಲ್ಲಿ ಯಂತ್ರಗಳನ್ನು ಶೀಘ್ರ ಖರೀದಿಸಬೇಕು ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಅಮಿತಾ ಪ್ರಸಾದ್ ಮಾರ್ಚ್ 8ರಂದೇ ಆದೇಶ ನೀಡಿದ್ದಾರೆ. ಯಂತ್ರ ಖರೀದಿ ತಪ್ಪಿದರೆ ನ್ಯಾಯಾಲಯ ನಿಂದನೆ ಆಗುವ ಸಂಭವ ಇದೆ. ಅಂಥ ಸಂದರ್ಭದಲ್ಲಿ ಸಂಬಂಧಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.ಒಂದು ಸಾವಿರ ಲೀಟರ್ ಸಾಮರ್ಥ್ಯದ ಗರಿಷ್ಠ 4, ಮೂರು ಸಾವಿರ ಲೀಟರ್ ಸಾಮರ್ಥ್ಯದ ಗರಿಷ್ಠ 2 ಯಂತ್ರಗಳನ್ನು ಖರೀದಿಸಬೇಕು. ಅದಕ್ಕಾಗಿ 13ನೇ ಹಣಕಾಸು ಆಯೋಗ ಅಥವಾ ಜಿಲ್ಲಾ ತಾಲ್ಲೂಕು ಮತ್ತು ಗ್ರಾಮ-ಮೂರೂ ಪಂಚಾಯತ್‌ಗಳ ಸಂಯುಕ್ತ ನಿಧಿ ಬಳಸಬೇಕು ಎಂದು  ಸೂಚಿಸಿದ್ದಾರೆ.ಸಮಿತಿ ರಚನೆ: ಪ್ರತಿ ಜಿಲ್ಲೆಯಲ್ಲಿ ಯಂತ್ರಗಳನ್ನು ಖರೀದಿ ಮಾಡುವ ವಿಧಾನ, ನಿಗದಿಪಡಿಸಬೇಕಾದ ಮಾದರಿ ಹಾಗೂ ಅಳವಡಿಸಿಕೊಳ್ಳಬೇಕಾದ ಮಾನದಂಡಗಳನ್ನು ರಚಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪರಾಮರ್ಶನ ಸಮಿತಿ ರಚಿಸಲಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಆಯಾ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಮಿತಿ ಸದಸ್ಯರಾಗಿರುತ್ತಾರೆ. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಂಚಾಲಕರಾಗಿರುತ್ತಾರೆ.ಪ್ರತಿ ತಾಲ್ಲೂಕು ಪಂಚಾಯತ್‌ಗೆ ಅವಶ್ಯವಿರುವ ಪ್ರಸ್ತಾವನೆಗಳನ್ನು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಪಡೆದು, ಸಮಿತಿಯಲ್ಲಿ ಖರೀದಿ ರೂಪರೇಷೆಗಳನ್ನು ಅಂತಿಮಗೊಳಿಸಬೇಕು. ಖರೀದಿಸುವ ಎಲ್ಲ ಪ್ರಕ್ರಿಯೆಗಳನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೇ ನಿರ್ವಹಿಸಬೇಕು.`ಇ-ಟೆಂಡರ್~ ಮಾದರಿ ಅಳವಡಿಸಿಕೊಳ್ಳಬೇಕು. ಗರಿಷ್ಠ  ತಿಂಗಳ ಅವಧಿಯಲ್ಲಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.ನೆರವು: ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿರುವ ಯಂತ್ರಗಳ ಸೇವೆಯನ್ನು ಪಡೆಯಲು ಕ್ರಮ ಕೈಗೊಳ್ಳಬೇಕು. ಈ ಎಲ್ಲವನ್ನೂ ನಿರ್ವಹಿಸುವುದು ಕಡ್ಡಾಯ. ತಪ್ಪಿದರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಸಲಾಗಿದೆ.ಮಾರ್ಚ್ 1ರಂದು ಸುತ್ತೋಲೆ ಹೊರಡಿಸಿರುವ ಸರ್ಕಾರ, ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ತಲೆ ಮೇಲೆ ಮಲ ಹೊರುವ ಪದ್ಧತಿ ಕಾರ್ಯಕ್ಕೆ ನೇಮಿಸಿಕೊಳ್ಳುವುದರಿಂದ ಆ ವರ್ಗಗಳ ಗೌರವಕ್ಕೆ ಧಕ್ಕೆ ತಂದಂತಾಗುತ್ತದೆ. ಆ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆಯನ್ನು ಅನ್ವಯಿಸಲೂ ಅವಕಾಶವಿದೆ ಎಂದು ತಿಳಿಸಿದೆ.ಗ್ರಾಮೀಣ ಪ್ರದೇಶದಲ್ಲಿ ತಲೆಯ ಮೇಲೆ ಮಲ ಹೊರುವ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವ ದೃಷ್ಟಿಯಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸಮನ್ವಯ (ನೋಡಲ್) ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದೆ.ಪಟ್ಟಣ ಪ್ರದೇಶಗಳಲ್ಲಿದ್ದ ಮಲದ ಗುಂಡಿ ಸ್ವಚ್ಛಗೊಳಿಸುವ ಯಂತ್ರ ಸೌಲಭ್ಯ ಗ್ರಾಮಾಂತರ ಪ್ರದೇಶಗಳಿಗೂ ದೊರಕಲಿದೆ. ಜುಲೈ ಕೊನೆ ಹೊತ್ತಿಗೆ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಒಂದಾದರೂ ಯಂತ್ರ ಸೌಲಭ್ಯ ಇರಲೇಬೇಕು ಎಂದು ಗಡುವು ವಿಧಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.