ಬುಧವಾರ, ಜೂನ್ 16, 2021
23 °C

ಶ್ರದ್ಧಾಭಕ್ತಿಯ ಸಂದಲ್ ಉರುಸ್‌ಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು:ಹಿಂದೂ ಮುಸ್ಲಿಮರ ಭಾವೈಕ್ಯ ಕೇಂದ್ರದಲ್ಲಿ ಶುಕ್ರವಾರ ವಾರ್ಷಿಕ ಸಂದಲ್ ಉರುಸ್‌ಗೆ ಚಾಲನೆ ಸಿಕ್ಕಿತು.  ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಉರುಸ್‌ನಲ್ಲಿ ಪಾಲ್ಗೊಂಡಿದ್ದರು.ಸುಮಾರು 6 ವರ್ಷಗಳ ಬಳಿಕ ಬಾಬಾಬುಡನ್‌ಗಿರಿಯಲ್ಲಿ ಆರಂಭವಾದ ವಾರ್ಷಿಕ ಸಂದಲ್ ಉರುಸ್‌ಗೆ ಸಾವಿರಾರು ಸಂಖ್ಯೆಯ ಮುಸ್ಲಿಂ ಭಕ್ತರು ಸಾಕ್ಷಿಯಾದರು. ಪೀಠದ ಮುಖ್ಯಸ್ಥ ಶಾಖಾದ್ರಿಯ ವರನ್ನು ಹೊರಗಿಟ್ಟು ಜಿಲ್ಲಾಡಳಿತ ಉರುಸ್ ಸಮಿತಿ ಆಶ್ರಯದಲ್ಲಿ ವಾರ್ಷಿಕ ಉರುಸ್ ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದರಿಂದ  ವಿವಾದ ಹುಟ್ಟಿತ್ತು. ಶಾಖಾದ್ರಿ ಜಿಲ್ಲಾಡಳಿತ ನೇತೃತ್ವದ ಉರುಸ್‌ನಿಂದ ದೂರ ಉಳಿದಿದ್ದರು. ಫಕೀರರು ಭಾಗವಹಿಸುತ್ತಿರಲಿಲ್ಲ. ಸಾಂಪ್ರದಾಯಿಕ ಆಚರಣೆಗಳಗೂ ಅಡ್ಡಿಯಾಗಿತ್ತು.ಕಳೆದ ವರ್ಷ ಜಿಲ್ಲಾಡಳಿತದ ಉರುಸ್‌ಗೆ ಬಹಿಷ್ಕಾರ ಹಾಕಿ, ಶಾಖಾದ್ರಿ ಪ್ರತ್ಯೇಕ ಉರುಸ್ ನಡೆಸುವುದಾಗಿ ಪ್ರಕಟಿಸಿದ್ದರು. ಫಕೀರರು ಜಿಲ್ಲಾ ಕೇಂದ್ರದ ಬಡಾಮಕಾನ್‌ನಲ್ಲಿ ಜಮಾಯಿಸಿ ಗಿರಿಗೆ ತೆರಳುವಾಗ ಪೊಲೀಸ್ ಬಂಧನಕ್ಕೂ ಒಳಗಾಗಿದ್ದರು. ಈ ವರ್ಷದಿಂದ ಜಿಲ್ಲಾಡಳಿತ ಶಾಖಾದ್ರಿ ನೇತೃತ್ವದಲ್ಲಿ ಉರುಸ್‌ಗೆ ಅನುಮತಿ ನೀಡಿರು ವುದರಿಂದ ದೇಶದ ನಾನಾ ಭಾಗಗಳಿಂದ    ಸಾವಿರಾರ ಫಕೀರರು ಆಗಮಿಸಿದ್ದರು.ಶಾಖಾದ್ರಿ ಬೆಳಿಗ್ಗೆಯೇ ಪೀಠಕ್ಕೆ ತೆರಳಿ ಫಕೀರರ ಜತೆ ಕಾರ್ಯಕ್ರಮದ ರೂಪರೇಶೆ ಬಗ್ಗೆ ಯೋಜನೆ ರೂಪಿಸಿದರು. ಉರುಸ್‌ಗಾಗಿ ಮೂರು ದಿನಗಳ ಕಾಲ ಗುಹೆ ಪ್ರವೇಶಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಭಕ್ತರ ದರ್ಶನಕ್ಕೆ ದತ್ತ ಪಾದುಕೆಗಳನ್ನೂ ಇಡಲಾಗಿದೆ.  ಬೆಳಿಗ್ಗೆ ಜೋಳದಾಳ್‌ನಿಂದ ಗಂಧ ತಂದು ಜಿಲ್ಲಾ ಕೇಂದ್ರದ ಬಡಾಮಕಾನ್‌ನಲ್ಲಿ ಇಡಲಾಗಿತ್ತು. ನಂತರ ಅತ್ತಿಗುಂಡಿಗೆ ಕೊಂಡೊಯ್ಯಲಾಯಿತು. ಅತ್ತಿ ಗುಂಡಿಯ ಮಸೀದಿಯಲ್ಲಿ ಗಂಧ ಇಟ್ಟು  ಪೂಜಿಸಿ ಬಳಿಕ ಬಾಬಾಬುಡನ್ ಗಿರಿಗೆ ಕೊಂಡೊಯ್ಯ ಲಾಗುತ್ತಿತ್ತು. ಈ ಬಾರಿ ಪೀರ್‌ಸಾಬ್ ನೇತೃತ್ವದಲ್ಲಿ ಸ್ಥಳೀಯರ ಮನೆಯಲ್ಲಿ ಇಟ್ಟು ಪೂಜಿಸಲಾಯಿತು. ನಂತರ ಗಂಧವನ್ನು ಫಕೀರರ ಸಮ್ಮುಖದಲ್ಲಿ ಮಕ್ಕಳ ದರ್ಫ್ ಬಡಿತ, ವಾದ್ಯಮೇಳದೊಂದಿಗೆ ಅತ್ತಿಗುಂಡಿಯಲ್ಲಿ ಮೆರ ವಣಿಗೆ ನಡೆಸಿ, ಬಾಬಾಬುಡನ್‌ಗಿರಿಗೆ ತರಲಾಯಿತು.ಗಂಧ ಬರುತ್ತಿದ್ದಂತೆ ಭಕ್ತರು ನಾಣ್ಯ ಚಿಮ್ಮಿ ಭಕ್ತಿ ಪ್ರದರ್ಶಿಸಿದರು. ಮಹಿಳೆಯರು ಸಕ್ಕರೆ ಇನ್ನಿತರ ಪಡಿ ನೀಡಿ ಪ್ರಸಾದ, ಆಶೀರ್ವಾದ ಪಡೆದರು. ಬೆಟ್ಟದ ಮೇಲ್ಭಾಗದಲ್ಲಿ ಸಾವಿರಾರು ಜನರ ಸಮ್ಮಖದಲ್ಲಿ ಗಂಧ ತಂದಾಗ ಫಕೀರರು ಉನ್ಮಾದ ಭರಿತರಾಗಿ ಕಬ್ಬಿಣದ ಸಲಾಕೆ, ಇನ್ನಿತರೆ ಆಯುಧ ಚುಚ್ಚಿಕೊಂಡು ನರ್ತಿಸಿದ ಪರಿ ರೋಮಾಂಚನ ಉಂಟುಮಾಡುವಂತಿತ್ತು.ಗುಹೆ ಪ್ರವೇಶಿಸಲು ಪೀಠದ ಮುಖ್ಯಸ್ಥ ಸಜ್ಜಾನೆ ನಶೀನ್‌ಗೌಸ್ ಮಹಮದ್ ಶಾಖಾದ್ರಿ ಹಾಗೂ ಅವರೊಂದಿಗಿದ್ದವರಿಗೆ ಮಾತ್ರ ಅವಕಾಶ ನೀಡಿದಾಗ, ಕ್ಷಣಕಾಲ ಪೊಲೀಸರು ಹಾಗೂ ಭಕ್ತರ ಮಧ್ಯೆ ತಳ್ಳಾಟ ಆದ ಪ್ರಸಂಗವೂ ನಡೆಯಿತು. ಉರುಸ್ ಸಮಿತಿಗೆ ಭೋಜನ ಪೂರೈಸುವ ವ್ಯವಸ್ಥೆ ನೀಡದೆ, ಬೇರೆಯವರಿಗೆ ಟೆಂಡರ್ ನೀಡಿರುವ ಬಗ್ಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರಲ್ಲಿ ಬಹುತೇಖ ಮಂದಿಗೆ ಉಪಾಹಾರ ಸಿಗದೆ, ಪರದಾಡಿದರು. ಜಿಲ್ಲಾಡಳಿತದ ಕ್ರಮಕ್ಕೆ ಆಕ್ಷೇಪ ಕೂಡ ವ್ಯಕ್ತಪಡಿಸಿದರು.ಸಂಸದ ದ್ರುವಕುಮಾರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್.ಮೂರ್ತಿ, ನಗರಸಭೆ ಸದಸ್ಯ ಸಂದೀಪ್, ಜೆಡಿಎಸ್ ಮುಖಂಡ ಅತೀಕ್ ಖೈಸರ್, ಜೆಡಿಯುನ ನಾಡಗೌಡ, ಕೆ.ಭರತ್, ಯೂಸೂಪ್ ಹಾಜಿ, ಮುನೀರ್ ಅಹಮದ್, ಸಿ.ಎಸ್.ಖಲಂದರ್ ಇನ್ನಿತರರು ಇದ್ದರು.ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿತ್ರ ಹೆರಾಜೆ, ಉಪ ವಿಭಾಗಾಧಿಕಾರಿ ಪ್ರಶಾಂತ್, ಡಿವೈಎಸ್‌ಪಿ ವೇದಮೂರ್ತಿ, ಗ್ರಾಮಾಂತರ ವೃತ್ತದ ಸಿಪಿಐ ಪಂಚಾಕ್ಷರಿ ಸ್ಥಳದಲ್ಲೇ ಇಂದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿಬಂದೋಬಸ್ತ್ ಮಾಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.