ಶ್ರದ್ಧಾ, ಭಕ್ತಿಯ ಮಹಾಶಿವರಾತ್ರಿ

7

ಶ್ರದ್ಧಾ, ಭಕ್ತಿಯ ಮಹಾಶಿವರಾತ್ರಿ

Published:
Updated:

ಬೀದರ್: ನಗರದಲ್ಲಿ ಸೋಮವಾರ ಮಹಾಶಿವರಾತ್ರಿಯನ್ನು  ಭಕ್ತಿ, ಶ್ರದ್ಧೆಯೊಂದಿಗೆ  ಆಚರಿಸಲಾಯಿತು.

ಮಹಾಶಿವರಾತ್ರಿ ನಿಮಿತ್ತ ಬೆಳಿಗ್ಗೆಯಿಂದ ಜನರು ನಗರದ ಪಾಪನಾಶ ದೇವಸ್ಥಾನದತ್ತ ಹರಿದು ಬರಲಾರಂಭಿಸಿದರು. ಭಕ್ತ ಸಮೂಹ ದೇವಸ್ಥಾನದತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಸಂಜೆವರೆಗೂ ಸಾಮಾನ್ಯವಾಗಿತ್ತು.ದೇವಸ್ಥಾನದ ಪರಿಸರದಲ್ಲಿ ಓಂ ನಮಃ ಶಿವಾಯ ಎಂಬ ಘೋಷಣೆಗಳು ಮೊಳಗಿದ್ದವು. ಭಕ್ತರು ಸರದಿ ಸಾಲಿನಲ್ಲಿ ನಿಂತು ಶಿವಲಿಂಗದ ದರ್ಶನ ಪಡೆದರು. ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿದರು.ಮಹಾಶಿವರಾತ್ರಿ ಸೋಮವಾರ ಬಂದಿದ್ದರಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಎಲ್ಲರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಅನೇಕರು ದೇವಸ್ಥಾನದ ಆವರಣದಲ್ಲಿರುವ ಕುಂಡದಲ್ಲಿ ಪವಿತ್ರ ಸ್ನಾನ ಮಾಡಿದರು.ದೇವಸ್ಥಾನಕ್ಕೆ ಹೋಗುವ ದಾರಿಯುದ್ದಕ್ಕೂ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ರಸ್ತೆಯ ಎರಡು ಬದಿಗಳಲ್ಲಿ ಅಂಗಡಿಗಳು ತೆರೆದಿದ್ದವು. ತೆಂಗು, ಕಾಯಿ ಕರ್ಪೂರ, ಹೂವು, ಸಿಹಿ ತಿನಿಸು, ಮಕ್ಕಳ ಆಟಿಕೆ, ಜೋಕಾಲಿ ಮತ್ತಿತರ ವಸ್ತುಗಳು ಇದ್ದವು. ಕಬ್ಬಿನ ಹಾಲು, ತಂಪು ಪಾನೀಯಗಳ ಅಂಗಡಿಗಳು ಸಹ ಇದ್ದವು.ಪಾಲಕರು ಮಕ್ಕಳಿಗಾಗಿ ಬಗೆ ಬಗೆಯ ಆಟಿಕೆಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡು ಬಂದಿತು. 

ಮಹಾಶಿವರಾತ್ರಿಯ ಅಂಗವಾಗಿ ಜಿಲ್ಲಾ ಬಸವಕೇಂದ್ರ, ಬಸವಸೇವಾ ಪ್ರತಿಷ್ಠಾನ, ರಾಷ್ಟ್ರೀಯ, ಬಸವದಳ, ಲಿಂಗಾಯತ ಸಮಾಜ ಮತ್ತಿತರ ಸಂಘಟನೆಗಳಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry