ಮಂಗಳವಾರ, ಏಪ್ರಿಲ್ 20, 2021
26 °C

ಶ್ರದ್ಧೆಯಿಂದ...

ಡಿ.ಕೆ. ರಾಮೇಶ್ Updated:

ಅಕ್ಷರ ಗಾತ್ರ : | |

ಗಾಜು ಕಂಗಳನ್ನು ಪಿಳಿಪಿಳಿ ಬೀರುತ್ತಾ ಮಾತಿಗಿಳಿದರು ನಟಿ ಶ್ರದ್ಧಾ ದಾಸ್. ಅವು ನಿಜದ ಕಣ್ಣುಗಳಿಗೆ ಮಣ್ಣೆರಚುವಂಥ ಕೃತಕ ಕಂಗಳು. ಈ ಪರಿಯ ನೇತ್ರ ಬದಲಾವಣೆಗೆ ಕಾರಣ ಹೇಳಲು ನವ ನವೀನ ಪುರಾಣವನ್ನೇ ಆಕೆ ಬಿಚ್ಚಿಟ್ಟರು.

ತೆಲುಗು ಚಿತ್ರಗಳಲ್ಲಿ ಹೆಚ್ಚು ಮಿಂಚಿದ, ಬಂಗಾಳಿ ಮೂಲದ ಈ ನಟಿಯ ಮೊದಲ ಕನ್ನಡ ಚಿತ್ರ `ಹೊಸ ಪ್ರೇಮ ಪುರಾಣ'. ಚಿತ್ರದಲ್ಲಿ ಅವರದು ವಿವಾಹ ಪೂರ್ವ ಸಂಬಂಧ ಬಯಸುವ ಆಧುನಿಕ ಹೆಣ್ಣುಮಗಳ ಪಾತ್ರ. ಇಂಥ ಆಧುನಿಕತೆಗೆ ತಕ್ಕಂತೆ ಕಣ್ಣು ಕೂಡ ಬದಲಾಗಬೇಕಲ್ಲ? ಹೀಗಾಗಿ ಕಡುಕಂದು ಬಣ್ಣದಿಂದ ಆಕೆಯ ಕಂಗಳು ತಿಳಿಕಂದು ಬಣ್ಣಕ್ಕೆ ತಿರುಗಿದ್ದವು.

ಲಿವ್ ಇನ್ ಟುಗೆದರ್‌ನ ಅಪರಾತಪರಾಗಳೆಲ್ಲವೂ ಚಿತ್ರದಲ್ಲಿವೆಯಂತೆ. `ಲಿವ್ ಇನ್'ನ ಮುಕ್ತತೆಯಿದ್ದರೂ ಮತ್ತೊಬ್ಬ ಹುಡುಗಿ ತನ್ನ ಪ್ರಿಯಕರನ ಬಾಳಲ್ಲಿ ಬಂದಾಗ ಎದುರಿಸುವ ತಳಮಳದ ಮೂರ್ತರೂಪವೇ ಶ್ರದ್ಧಾ. ಚಿತ್ರದಲ್ಲಿ ಅವರದು ಬೋಲ್ಡ್ ಹುಡುಗಿಯ ಪಾತ್ರ. ಆದರೆ ಎಲ್ಲಿಯೂ ಏಕಾಂತದ ದೃಶ್ಯಗಳಿಗೆ ಅವಕಾಶವಿಲ್ಲ ಎನ್ನುವ ಮೂಲಕ ಪಡ್ಡೆಗಳ ಉತ್ಸಾಹಕ್ಕೆ ಅವರು ಲಗಾಮು ಹಾಕಿದರು.

ಚೊಚ್ಚಿಲ ಕನ್ನಡ ಚಿತ್ರದ ಜತೆಗೆ ತಮಿಳು ಮಲಯಾಳಂ ಹಿಂದಿ ಚಿತ್ರಗಳಲ್ಲೂ ಶ್ರದ್ಧಾ ತಮ್ಮನ್ನು ತೊಡಗಿಕೊಂಡಿದ್ದಾರೆ. ಮಲಯಾಳಂನ `ಡ್ರ್ಯಾಕುಲಾ 2012' ಅವರ ಮಹತ್ವದ ಚಿತ್ರಗಳಲ್ಲಿ ಒಂದು. ಇದುವರೆಗೆ ಗ್ಲಾಮರ್ ಪಾತ್ರಗಳಲ್ಲಿ ನಟಿಸಿದ್ದ ಅವರಿಗೆ ಚಿತ್ರದಲ್ಲಿ ಮೋಹಿನಿ ಪಾತ್ರ ದೊರೆತಿದೆ. ಆ ಮೋಹಿನಿ ಎಷ್ಟು ಮೋಹಕ ಎಂಬ ಪ್ರಶ್ನೆಗೆ ಮಾತ್ರ ನಗು ತುಳುಕಿಸಿ ಸುಮ್ಮನಾದರು.

ನಟನೆಯ ಕಷ್ಟ ಸುಖಗಳು ಆಕೆಯ ಮಾತಿಗೆ ಸೇರಿಕೊಂಡವು. ಮೂವತ್ತು ನಲವತ್ತು ದಿನಗಳ ಕಾಲ ನಿರಂತರವಾಗಿ ಚಿತ್ರೀಕರಣದಲ್ಲಿ ತೊಡಗಿಕೊಳ್ಳಬೇಕಾದ ಸ್ಥಿತಿ, ಎರಡು ಪಾಳಿಯ ಅಭಿನಯ ಇತ್ಯಾದಿ ಕಷ್ಟ ಎನಿಸಿದರೂ ಅವು ಚಿತ್ರರಂಗದ ಬಗೆಗಿನ ಪ್ರೀತಿ ಹೆಚ್ಚಿಸಿದೆಯಂತೆ.

ಖಾನ್ ಹಾಗೂ ಸೇನ್

`ಸಿದ್ದು ಫ್ರಮ್ ಶ್ರೀಕಾಕುಳಂ' ತೆಲುಗು ಚಿತ್ರದ ಮೂಲಕ ಬಣ್ಣ ಹಚ್ಚಿದ ಶ್ರದ್ಧಾರ ಕನಸಿನ ಪ್ರಾಜೆಕ್ಟ್‌ಗಳಲ್ಲಿ ಹಿಂದಿಯ `ಲಾಹೋರ್' ಕೂಡ ಒಂದು. ಅಲ್ಲಿಯವರೆಗೂ ತೆಲುಗು ಸೀಮೆಯಲ್ಲಿ ಅಡ್ಡಾಡುತ್ತಿದ್ದ ಈ ಚಿಟ್ಟೆ ನಂತರ ಬಾಲಿವುಡ್‌ನಲ್ಲಿ ರೆಕ್ಕೆಬಡಿಯತೊಡಗಿತು. ಮಧುರ್ ಭಂಡಾರ್ಕರ್ ಅವರ ಹಾಸ್ಯ ಪ್ರಯೋಗ `ದಿಲ್ ತೋ ಬಚ್ಚಾ ಹೈ ಜೀ'ಯಲ್ಲಿ ಶ್ರುತಿ ಹಾಸನ್, ಟಿಸ್ಕಾ ಚೋಪ್ರಾ ಅವರೊಂದಿಗೆ ಕಾಣಿಸಿಕೊಂಡು ಗಮನ ಸೆಳೆದಿದ್ದರು.ಚಿತ್ರವನ್ನು ನೋಡಿದ್ದ ನಟಿ ಸುಷ್ಮಿತಾ ಸೇನ್ ಒಮ್ಮೆ ಬಿಗಿದಪ್ಪಿ ಹಾರೈಸಿದರಂತೆ. ಇಬ್ಬರೂ ಬಂಗಾಳಿ ಚೆಲುವೆಯರು ಎಂಬುದು ವಿಶೇಷ. ಸುಷ್ಮಿತಾ ಹಾದಿಯಲ್ಲೇ ನಿಮ್ಮ ನಡಿಗೆ ಇದ್ದಂತಿದೆ ಎಂದರೆ ಶ್ರದ್ಧಾ ಅಲ್ಲವೆನ್ನುವಂತೆ ತಲೆದೂಗುತ್ತಾರೆ.`ಇದೊಂದು ದೊಡ್ಡ ಮೆಚ್ಚುಗೆಯ ಮಾತು' ಎಂದು ವಿನಯ ತೋರುತ್ತಾರೆ. ಬಾಲಿವುಡ್‌ನಲ್ಲಿ ಅಂಬೆಗಾಲಿಡುವ ಬಹುತೇಕ ನಟ-ನಟಿಯರಂತೆ ಇವರೊಳಗೂ ಸಲ್ಮಾನ್‌ಖಾನ್ ಕುರಿತ ಕನವರಿಕೆಗಳಿವೆ. ಅವರನ್ನು ಭೇಟಿಯಾದರೆ ತಮ್ಮ ವೃತ್ತಿ ಬದುಕಿಗೆ ಮಹತ್ವದ ತಿರುವು ದೊರೆಯಬಹುದೆಂಬ ಆಸೆ ಇವರ ಮಾತುಗಳಲ್ಲಿ ಪಲ್ಲವಿಸುತ್ತದೆ.

ವಾರ್ತೆ ಓದುವೆ...

ಬಂಗಾಳಿ ದಂಪತಿಗೆ ಜನಿಸಿದ ಶ್ರದ್ಧಾ ಹುಟ್ಟಿ ಬೆಳೆದದ್ದು ಓದಿದ್ದು ಮುಂಬೈನಲ್ಲಿ. ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಆಕೆಗೆ ನಟಿಯಾದ ಬಳಿಕವೂ ಪತ್ರಿಕಾರಂಗದ ವ್ಯಾಮೋಹ ಹೋಗಿಲ್ಲ. ಓದಿನ ದಿನಗಳಲ್ಲಿ ಅತಿ ಹೆಚ್ಚು ಅಂಕ ಪಡೆಯುತ್ತಿದ್ದ ಆಕೆಗೆ ಯಾವುದೇ ವಿಚಾರದಲ್ಲೂ ತನ್ಮಯತೆಯಿಂದ ದುಡಿಯಬೇಕು ಎಂಬ ಕಳಕಳಿ.ಅವರ ಹೆಸರಲ್ಲೇ ಶ್ರದ್ಧೆ ಸೇರಿಕೊಂಡಿರುವುದರಿಂದ ಆಕೆಯ ಬದ್ಧತೆಯನ್ನು ಪ್ರಶ್ನಿಸುವುದು ಅಸಾಧ್ಯವೇನೊ! ವಾರ್ತಾವಾಚಕಿಯಾಗಿ ಕಾಣಿಸಿಕೊಳ್ಳಬೇಕು ಎಂಬ ಆಸೆಯನ್ನು ಮುಂದಿಟ್ಟ ಅವರು ಅದೆಲ್ಲವೂ ಮದುವೆಯಾದ ಬಳಿಕ ಎಂಬ ಮಾತನ್ನು ಸೇರಿಸಿದರು. ಆದರೆ ಮದುವೆ ಯಾವಾಗ, ಯಾರೊಂದಿಗೆ ಎಂಬ ಗುಟ್ಟು ಬಿಟ್ಟುಕೊಡಲಿಲ್ಲ.

ಸುದೀಪ್ ಹುಚ್ಚು

ಸಾಹಸ ಪ್ರಧಾನ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಬೇಕು, ಯಶ್ ಚೋಪ್ರಾ ಬ್ಯಾನರ್‌ನಲ್ಲಿ ದುಡಿಯಬೇಕು ಎಂಬುದು ಶ್ರದ್ಧಾರ ಅದಮ್ಯ ಕನಸು. ತೆಲುಗು ಚಿತ್ರರಂಗದಲ್ಲಿ ಆಕೆ ಅನೇಕ ಏಳುಬೀಳು ಕಂಡಿದ್ದಾರೆ. `ಸಿದ್ದು...' ನಂತರದ ಆಕೆಯ ನಟನೆಯ ತೆಲುಗು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶ ಕಾಣಲಿಲ್ಲ. ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಐದು ವರ್ಷಗಳ ಬಳಿಕ ಅವರಿಗೆ ಪಾತ್ರಗಳ ಆಯ್ಕೆ ಕುರಿತು ಸ್ಪಷ್ಟತೆ ಮೂಡಿದೆ.

ಒಮ್ಮೆ ನಟ ಸುದೀಪ್ ಜತೆ ಬಣ್ಣ ಹಚ್ಚಬೇಕು ಎಂಬ ಆಸೆ ಅವರಿಗೆ. ಅವರ `ಈಗ' ಚಿತ್ರವನ್ನು ಶ್ರದ್ಧಾ ಇನ್ನೂ ನೋಡಿಲ್ಲ. ಆದರೆ ಸುದೀಪ್ ನಟಿಸಿದ್ದ `ರಣ್' ಚಿತ್ರಕ್ಕೆ ಮಾರು ಹೋಗಿದ್ದಾರೆ. ರಾಮಗೋಪಾಲ್ ವರ್ಮ ನಿರ್ದೇಶನವಿರುವ ಹಾಗೂ ಅಮಿತಾಭ್ ಬಚ್ಚನ್ ಅಭಿನಯಿಸಿರುವ ಆ ಚಿತ್ರದಲ್ಲಿ ಸುದೀಪ್ ನಟನೆ ಶ್ರದ್ಧಾರನ್ನು ಇನ್ನಿಲ್ಲದಂತೆ ಸೆಳೆದಿದೆಯಂತೆ.

   

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.