ಶ್ರಮದ ದುಡಿಮೆಗೆ ಅಸಡ್ಡೆ: ಪ್ರಸನ್ನಆತಂಕ

7

ಶ್ರಮದ ದುಡಿಮೆಗೆ ಅಸಡ್ಡೆ: ಪ್ರಸನ್ನಆತಂಕ

Published:
Updated:

ಬೆಂಗಳೂರು: ನಮ್ಮ ಶಿಕ್ಷಣದ ಮೂಲಕ ಹುಡುಗ ಹುಡುಗಿಯರಿಗೆ ಪ್ಯಾಂಟ್ ಹಾಕಿಸುತ್ತಿದ್ದೇವೆ. ಒಮ್ಮೆ ಪ್ಯಾಂಟ್ ಹಾಕಿದವರು ಅದನ್ನು ಬಿಚ್ಚಿ ಗೊಬ್ಬರ ಹೊರುವುದಿಲ್ಲ. ಈಗ ಪ್ಯಾಂಟ್ ಕಳಚಿ ಮತ್ತೆ ಶ್ರಮದ ದುಡಿಮೆಗೆ ಹಿಂತಿರುಗದೆ ಹೋದರೆ ಯಾವ ವಿಶ್ವವಿದ್ಯಾಲಯವೂ, ಯಾವ ರಾಜಕಾರಣವೂ ‘ದೇಸಿ ಸಂಸ್ಕೃತಿ’ಯನ್ನು ಉಳಿಸಲು ಸಾಧ್ಯವಿಲ್ಲ ಎಂದು ರಂಗಕರ್ಮಿ ಹಾಗೂ ದೇಸಿ ಸಂಸ್ಕೃತಿಯ ಚಿಂತಕ ಪ್ರಸನ್ನ ಅಭಿಪ್ರಾಯಪಟ್ಟರು.ಕನ್ನಡ ಸಾಹಿತ್ಯ ಸಮ್ಮೇಳನದ ‘ದೇಸಿ ಸಂಸ್ಕೃತಿ- ತವಕ ತಲ್ಲಣಗಳು’ ಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಅವರು, ದೇಸಿ ಸಂಸ್ಕೃತಿಯ ಇಂದಿನ ಎಲ್ಲ ಆತಂಕಗಳಿಗೆ ಶ್ರಮ ಸಂಸ್ಕೃತಿ ಸಂಕಷ್ಟದಲ್ಲಿರುವುದೇ ಕಾರಣವಾಗಿದೆ. ಈ ದುಡಿಮೆಗೆ ಅಂಟಿರುವ ಕೀಳರಿಮೆಯ ಪರಿಣಾಮವನ್ನು ಮಿಕ್ಕೆಲ್ಲ ಕ್ಷೇತ್ರಗಳಲ್ಲಿ ನೋಡುತ್ತಿದ್ದೇವೆ ಎಂದರು.ಮಠಾಧೀಶರು, ರಾಜಕಾರಣಿಗಳು, ಶೂದ್ರ ಸಮುದಾಯ ಸೇರಿದಂತೆ ಎಲ್ಲರೂ ಇಂದು ಶ್ರಮದ ದುಡಿಮೆ ನಿರಾಕರಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕುಟುಂಬದ ಕಸುಬುಗಳಿಂದ ವಿಮುಖರಾಗಿಸುತ್ತಿದ್ದಾರೆ. ರಾಜ್ಯದ ತುಂಬ ಹರಡಬೇಕಿದ್ದ ಸಂಸ್ಕೃತಿಯನ್ನು ಅಡುಗೆಮನೆಗೆ ಸೀಮಿತಗೊಳಿಸಿದ್ದೇವೆ ಎಂದು ವಿಷಾದಿಸಿದರು.ಸಂಕಷ್ಟದಲ್ಲಿರುವ ನೇಕಾರರಿಗೆ ವಿದ್ಯುತ್ ಮಗ್ಗಗಳ ಹೆಸರಿನಲ್ಲಿ ಸರ್ಕಾರ ಸಾಲ ಕೊಡುತ್ತದೆ. ಈ ಮೂಲಕ ನೇಕಾರ ತನ್ನ ಕೈಮಗ್ಗವನ್ನು ತೊರೆದು, ವಿದ್ಯುತ್ ಚಾಲಿತ ಮಗ್ಗಗಳಲ್ಲಿ ಜೀತದಾಳಾಗುತ್ತಾನೆ. ಎರಡು ವರ್ಷಗಳ ಕೆಳಗೆ ನೂಲು ಸಿಗದೆ ನಮ್ಮಲ್ಲಿ ಲಕ್ಷಾಂತರ ನೇಕಾರರು ಕೆಲಸ ವಂಚಿತರಾದರು. ಆದರೆ, ಪಕ್ಕದ ಆಂಧ್ರದಲ್ಲಿ ನೂಲು ಒದಗಿಸುವ ಮೂಲಕ ನೇಕಾರರು ತಮ್ಮ ಬದುಕುಗಳನ್ನು ಕಟ್ಟಿಕೊಳ್ಳಲು ಅಲ್ಲಿನ ಸರ್ಕಾರ ನೆರವು ನೀಡಿತು. ನಮ್ಮಲ್ಲಿ ಮಾತ್ರ ಎಲ್ಲರನ್ನೂ ಬೆಂಗಳೂರಿಗೆ ತರಬುವ ಪ್ರಯತ್ನದಲ್ಲಿದ್ದೇವೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.ಮಿಶ್ರಧಾನ್ಯ ಬೆಳೆ ನಮ್ಮ ಸಂಸ್ಕೃತಿಯೇ ಹೊರತು, ಏಕಧಾನ್ಯ ಬೆಳೆಯಲ್ಲ. ಪ್ರಸ್ತುತ, ಪಾರಂಪರಿಕ ಕೃಷಿ ಬಗ್ಗೆ ಮತ್ತೆ ಆಸಕ್ತಿಯ ಮಾತುಗಳು ವ್ಯಕ್ತವಾಗುತ್ತಿದ್ದು, ದೇಸಿ ತಳಿ-ಬೀಜಗಳನ್ನು ಉಳಿಸಿಕೊಳ್ಳುವುದು ಇಂದಿನ ತುರ್ತಾಗಿದೆ ಎಂದು ‘ಪತನದತ್ತ ಪಾರಂಪರಿಕ ಕೃಷಿ’ ವಿಷಯದ ಬಗ್ಗೆ ಮಾತನಾಡಿದ ಗದಗದ ಕೃಷಿಕರಾದ ಭರಮಗೌಡರು ಹೇಳಿದರು.ರಾಸಾಯನಿಕ ಕೃಷಿಗೆ ಮಾರುಹೋದ ರೈತರು ಪಾರಂಪರಿಕ ಬೆಳೆಗಳನ್ನು ಕೈಬಿಟ್ಟರು. ಈಗ ನಮ್ಮ ಭೂಮಿ ಫಲವತ್ತತೆ ಕಳೆದುಕೊಂಡು ರೈತರು ಪರಾವಲಂಬಿಗಳಾಗಿದ್ದಾರೆ. ಪ್ರತಿಯೊಂದಕ್ಕೂ ಸರ್ಕಾರದತ್ತ ಕೈಚಾಚುವ ಪರಿಸ್ಥಿತಿಯಿದೆ. ಎಂಜಿನಿಯರ್ ಮತ್ತು ವೈದ್ಯರ ಮಕ್ಕಳು ಅಪ್ಪನ ಕಸುಬನ್ನೇ ಬಯಸುವಂತೆ, ರೈತನ ಮಗ ರೈತನಾಗುವ ಸಂದರ್ಭ ಇವತ್ತು ಕಾಣಲಿಕ್ಕೆ ಸಾಧ್ಯವಿಲ್ಲ ಎಂದರು.ಪಾರಂಪರಿಕ ಕೃಷಿಯಲ್ಲಿ ಕಮ್ಮಾರ, ಕುಂಬಾರ, ಕ್ಷೌರಿಕ ಸೇರಿದಂತೆ ಅನೇಕ ಸಮುದಾಯಗಳಿದ್ದವು. ಕೀಟ ಪಕ್ಷಿಗಳೂ ಇದ್ದವು. ಇವರೆಲ್ಲರ ನಡುವೆ ಕೊಡುಕೊಳುವ ಸಂಬಂಧವಿತ್ತು. ಬೀಜರಹಿತ ಟೊಮೆಟೊ, ದ್ರಾಕ್ಷಿಗಳನ್ನು ಬಯಸುತ್ತಿರುವ ನಾವು ನಮ್ಮ ಮಟ್ಟಿಗೂ ಅದೇ ರೀತಿ ಯೋಚಿಸಿದರೆ ಆಶ್ಚರ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.ರೈತ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ನಗರದವರು ಸ್ಪಂದಿಸಬೇಕು. ಏಕೆಂದರೆ ನಾವೆಲ್ಲ ಹಳ್ಳಿಗರ ಋಣದಲ್ಲಿದ್ದೇವೆ ಎಂದು ‘ಆಧುನಿಕತೆಯ ಅವಾಂತರದಲ್ಲಿ ಜಾನಪದ ಜಗತ್ತು’ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದ ಹಂಪಿ ವಿ.ವಿ ಅಧ್ಯಾಪಕರಾದ ಹಿ.ಚಿ.ಬೋರಲಿಂಗಯ್ಯ ಒತ್ತಾಯಿಸಿದರು.ಅನುಭವದ ಜ್ಞಾನವನ್ನು ಅಕ್ಷರದ ಅಹಂಕಾರ ಅಪಮಾನಿಸುತ್ತಿದೆ. ಸೃಷ್ಟಿಸುವ ಮತ್ತು ಭೋಗಿಸುವ ಸಂಸ್ಕೃತಿಯ ನಡುವಣ ಅಂತರ ಹೆಚ್ಚುತ್ತಲೇ ಇದೆ. ಸಂಪತ್ತಿನ ಒಮ್ಮುಖ ಪ್ರವಾಹದ ಸಂದರ್ಭದಲ್ಲಿ ಸೃಷ್ಟಿಶೀಲ ಹಳ್ಳಿಗಳನ್ನು ನಾಶಮಾಡಿ ಏಕಮುಖಿ ಸಂಸ್ಕೃತಿಯ ನಗರಗಳನ್ನು ರೂಪಿಸುತ್ತಿದ್ದೇವೆ. ಅಯೋಧ್ಯೆಯ ರಾಮನನ್ನು ರಕ್ಷಿಸುವ ಹೆಸರಿನಲ್ಲಿ ಸ್ಥಳೀಯ ದೈವಗಳನ್ನು ನಿರ್ಲಕ್ಷಿಸುತ್ತಿದ್ದೇವೆ. ಇಷ್ಟಕ್ಕೂ ನಮ್ಮ ಪರಿಕಲ್ಪನೆಯ ಸಂಸ್ಕೃತಿಯಾದರೂ ಎಂತಹದು ಎಂದವರು ಪ್ರಶ್ನಿಸಿದರು.‘ನಗರದತ್ತ ಗ್ರಾಮೀಣ ಚಿತ್ತ’ ವಿಷಯದ ಕುರಿತು ಪ್ರಬಂಧ ಮಂಡಿಸಿದ ‘ಪ್ರಜಾವಾಣಿ’ ಉಪಸಂಪಾದಕ ಗಾಣಧಾಳು ಶ್ರೀಕಂಠ, ವಲಸೆಯ ಮುಂದುವರೆದ ರೂಪವಾಗಿ ಹಳ್ಳಿಗಳೇ ಮಾರಾಟವಾಗುತ್ತಿರುವ ಸಂದರ್ಭದಲ್ಲಿ ನಾವಿದ್ದೇವೆ ಎಂದು ವಿಷಾದಿಸಿದರು. ಭೂಸ್ವಾಧೀನ, ಮೌಲ್ಯಗಳನ್ನು ಕಟ್ಟಿಕೊಡದ ಶಿಕ್ಷಣ ವ್ಯವಸ್ಥೆ, ಮೂಲಭೂತ ಸೌಕರ್ಯಗಳು ಮತ್ತು ಆತ್ಮಗೌರವದ ಕೊರತೆ ಹಳ್ಳಿಗರು ನಗರಕ್ಕೆ ಗುಳೆ ಹೊರಡಲು ಕಾರಣವಾಗಿವೆ ಎಂದವರು ಅಭಿಪ್ರಾಯಪಟ್ಟರು.ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರುಕಟ್ಟೆ ಸೃಷ್ಟಿಸುವ ಸಲುವಾಗಿ ಸ್ಥಳೀಯ ಮಾರುಕಟ್ಟೆಗಳನ್ನು ದುರ್ಬಲಗೊಳಿಸುತ್ತಿದ್ದೇವೆ. ಆಮಿಷಗಳ ಮೂಲಕ ರೈತರನ್ನು ಹಾಳು ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಬಹುತ್ವದ ನೆಲೆಯೊಳಗೆ ಅರಳಿರುವ ದೇಸಿಯನ್ನು ಉಳಿಸಿಕೊಳ್ಳುವುದು ಸದ್ಯದ ಅಗತ್ಯವಾಗಿದೆ. ಸಾಂಸ್ಕೃತಿಕ ವಿಶ್ಲೇಷಣೆ ಹೆಸರಿನಲ್ಲಿ ವೈಚಾರಿಕ ಕುತರ್ಕಗಳನ್ನು ಮಂಡಿಸುತ್ತಿರುವ ಮನಸ್ಸುಗಳ ಬಗ್ಗೆಯೂ ‘ದೇಸಿ’ ಎಚ್ಚರದಿಂದ ಇರಬೇಕಾಗಿದೆ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿ ಎಸ್.ಜಿ.ಸಿದ್ಧರಾಮಯ್ಯ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry