ಶ್ರಮದ ದುಡಿಮೆಗೆ ಸಂದ ಮನ್ನಣೆ

7

ಶ್ರಮದ ದುಡಿಮೆಗೆ ಸಂದ ಮನ್ನಣೆ

Published:
Updated:
ಶ್ರಮದ ದುಡಿಮೆಗೆ ಸಂದ ಮನ್ನಣೆ

ಕಳೆದ ವಾರ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಕೃಷಿ ಮೇಳದಲ್ಲಿ  2011ನೇ ಸಾಲಿನ `ಡಾ.ಎಂ.ಎಚ್.ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ~ಗೆ ಭಾಜನರಾದ ರೈತ ಚಂದ್ರಶೇಖರ ಬಸನಗೌಡ ಪಾಟೀಲರು ಏಲಕ್ಕಿ ಬಾಳೆ ಬೇಸಾಯದಲ್ಲಿ ಪರಿಣತರು.

 

ಕಲಘಟಗಿ ತಾಲೂಕಿನ ತಬಕದ ಹೊನ್ನಹಳ್ಳಿಯ ಪಾಟೀಲರು ಜವಳು ಭೂಮಿಯನ್ನು ಬೇಸಾಯಕ್ಕೆ ಪಳಗಿಸಿ ಅಲ್ಲಿ ಗುಣಮಟ್ಟದ ಏಲಕ್ಕಿ ಬಾಳೆ ಬೆಳೆದು ಯಶಸ್ವಿಯಾಗಿದ್ದಾರೆ. ಅವರ ಪರಿಶ್ರಮದ ದುಡಿಮೆಗೆ ಮನ್ನಣೆ ಸಿಕ್ಕಿದೆ.

ಪಾಟೀಲರು ಬಿ.ಕಾಂ ಪದವೀಧರರು. ಓದು ಮುಗಿಯುತ್ತಿದ್ದಂತೆ (2002ರಲ್ಲಿ) ತಮ್ಮ 7ಎಕರೆ ಜಮೀನಿನಲ್ಲಿ ಪೂರ್ಣ ಪ್ರಮಾಣದ ಬೇಸಾಯದಲ್ಲಿ ತೊಡಗಿಕೊಂಡರು. ಆರಂಭದ ವರ್ಷ ಹಳೇ ಪದ್ಧತಿಯಲ್ಲಿ ಬೇಸಾಯ ಮಾಡಿ ಕೈ ಸುಟ್ಟುಕೊಂಡರು.ಮುಂಡಗೋಡದಲ್ಲಿರುವ ಅವರ ಮಾವ ಎಸ್.ಆರ್. ಹೀರೆಮಠ ಅವರು ಬಾಳೆ, ಅಡಿಕೆ ಜತೆಗೆ ಹಣ್ಣಿನ ಮರಗಳನ್ನು ಬೆಳೆಸುವಂತೆ ಸಲಹೆ ನೀಡಿ ಹಣದ ಸಹಾಯ ನೀಡಿದರು. ಕಷ್ಟಪಟ್ಟು ದುಡಿದು ಜವುಳು ಭೂಮಿಯನ್ನು ಉತ್ಕೃಷ್ಟ ಭೂಮಿಯನ್ನಾಗಿ ಪರಿವರ್ತಿಸಿ ಗುಣಮಟ್ಟದ ಏಲಕ್ಕಿ ಬಾಳೆ ಬೆಳೆದು ರಾಜ್ಯದ ರೈತರ ಗಮನ ಸೆಳೆದಿದ್ದಾರೆ ಪಾಟೀಲರು.ತಮ್ಮ ಜಮೀನಿನಲ್ಲಿದ್ದ ಜವುಳು ನಿಯಂತ್ರಿಸಲು ಪಕ್ಕದ ಹಳ್ಳದಿಂದ 2006 ರಲ್ಲಿ 1000 ಟ್ರ್ಯಾಕ್ಟರ್‌ಗಳಷ್ಟು ಹಳ್ಳದ ಹೂಳು ಮಣ್ಣನ್ನು ತಂದು ಹಾಕಿದರು. ಪರಿಣಾಮ ಕಪ್ಪು ಮಸಾರಿ ಭೂಮಿ, ಮಟ್ಟೆ ಮಣ್ಣಿನ ಮಿಶ್ರಣದಿಂದ ಫಲವತ್ತಾಯಿತಲ್ಲದೆ ಜವುಳಿನಿಂದ ಮುಕ್ತವಾಯಿತು.2008ರಲ್ಲಿ  ಏಳು ಎಕರೆ ಜಮೀನಿನಲ್ಲಿ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಂಡರು. 3.20 ಎಕರೆಯಲ್ಲಿ 1400 ಅಡಿಕೆ ಗಿಡಗಳು ಮತ್ತು 3600 ಬಾಳೆ ಗಿಡಗಳನ್ನು ನಾಟಿ ಮಾಡಿದರು.

 

ಉಳಿದ ಜಮೀನಿನಲ್ಲಿ ಚಿಕ್ಕು, ಮಾವು, ತೆಂಗಿನ ಗಿಡಗಳನ್ನು ನಾಟಿ ಮಾಡಿದರು. ಭತ್ತ, ಸೊಯಾಬಿನ್, ಗೋವಿನ ಜೋಳ, ಅವರೆ, ತೊಗರಿ, ಹೆಸರು ಸಹ ಬೆಳೆಯುತ್ತಾರೆ. ಜಮೀನಿನ ಸುತ್ತಲೂ ತೇಗ, ಹುಲಗಲ, ಮತ್ತಿ, ಬಿದಿರು, ಬೆಟ್ಟದನೆಲ್ಲಿ ಮರಗಳನ್ನು ಬೆಳೆಸಿದ್ದಾರೆ.  ಅವರ ಜಮೀನಿನಲ್ಲಿರುವ ಕೊಳವೆ ಬಾವಿಯಿಂದ ನೀರು ಪಡೆದು ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ನೀರಿನ ಕೊರತೆಗೆ ಪರಿಹಾರ ಕಂಡುಕೊಳ್ಳಲು ಜಲ ಸಂವರ್ಧನೆ ಪದ್ಧತಿಯನ್ನು ಕೈಗೆತ್ತಿಕೊಂಡ ಪಾಟೀಲರು ಕೃಷಿ ಹೊಂಡ ನಿರ್ಮಿಸಿ ಅದರಲ್ಲಿ ಹಳ್ಳದ ನೀರು ಸಂಗ್ರಹಿಸಿ ಭೂಮಿಗೆ ಹಾಯಿಸಿದರು. ಮಳೆ ಹೆಚ್ಚಾಗಿ ಭೂಮಿ ಜವುಳಾಗುವುದನ್ನು ತಪ್ಪಿಸಲು ತೋಟದಲ್ಲಿ ಬಸಿಗಾಲುವೆ ನಿರ್ಮಿಸಿಕೊಂಡರು. ಇದರಿಂದ ಕೊಳವೆ ಬಾವಿಯಲ್ಲಿ ನೀರು ಹೆಚ್ಚಾಗಿದೆ.ಸಂಪೂರ್ಣ ಸಾವಯವ ಪದ್ಧತಿ ಅಳವಡಿಸಿಕೊಂಡು ಮೊದಲ ವರ್ಷ 51 ಟನ್, 2ನೇ ವರ್ಷ 45 ಟನ್ ಬಾಳೆ ಬೆಳೆದಿದ್ದಾರೆ. ಈಗ ಅವರು ಮೂರನೇ ವರ್ಷದ ಫಸಲಿನ ನಿರೀಕ್ಷೆಯಲ್ಲಿದ್ದಾರೆ.ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಗೆ ಕ್ವಿಂಟಲ್‌ಗೆ 1000-1500 ರೂಪಾಯಿ ಬೆಲೆ ಇದ್ದಾಗ ಪಾಟೀಲರ ತೋಟದ ಬಾಳೆಗೆ 2000 ರೂ ವರೆಗೂ ಬೆಲೆ ಸಿಕ್ಕಿದೆ. ಮೊದಲ ವರ್ಷ ಗೋವಾದ ವ್ಯಾಪಾರಿಗಳು ಜಮೀನಿಗೆ ಬಂದು ಬಾಳೆ ಖರೀದಿಸಿದ್ದರು. ಈಗ ಧಾರವಾಡದ ವ್ಯಾಪಾರಿಗಳು ಬರುತ್ತಿದ್ದಾರೆ. ಅವರಿಗೆ ಮದ್ಯವರ್ತಿಗಳ ಕಿರಿಕಿರಿ ಮತ್ತು  ಸಾಗಣೆ ರಗಳೆ ಇಲ್ಲ.ಬಾಳೆಯಿಂದ ಮೊದಲ ವರ್ಷ5 ಲಕ್ಷ ರೂ ನಿವ್ವಳ ಲಾಭ ಸಿಕ್ಕಿತ್ತು. ಎರಡನೇಯ ಫಸಲಿನಲ್ಲಿ 4 ಲಕ್ಷ ರೂ, ಇತರ ಬೆಳೆಗಳಿಂದ ವರ್ಷಕ್ಕೆ 2 ಲಕ್ಷ ರೂ ಆದಾಯ ಪಡೆದಿದ್ದಾರೆ.ತೋಟಗಾರಿಕೆಯ ತಂತ್ರಜ್ಞಾನವನ್ನು ಅರಿತುಕೊಳ್ಳಲು ಪಾಟೀಲರು ಪುಣೆಯ ಮಹಾತ್ಮಾ ಪುಲೆ ಕೃಷಿ ವಿ ವಿ ಮತ್ತು  ರಾಹುರಿ ಕೃಷಿ ವಿ ವಿಗೆ ಭೇಟಿ ನೀಡಿದ್ದಾರೆ. ಧಾರವಾಡ ಹಾಗೂ ಬೆಂಗಳೂರು ಕೃಷಿ ವಿ ವಿಗಳ ತಜ್ಞರು ಮತ್ತು  ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಸ್ಥೆಯ ವಿಜ್ಞಾನಿಗಳ ಜತೆ ಸಂಪರ್ಕ ಹೊಂದಿದ್ದಾರೆ.ಬೇಸಾಯದ ಸಾಧನೆಗಾಗಿ ಪಾಟೀಲರಿಗೆ 2010 ಹಾಗೂ 11ನೇ ವರ್ಷ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಪ್ರಥಮ ಪ್ರಶಸ್ತಿ, ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ  `ರಾಷ್ಟ್ರೀಯ ಆವಿಷ್ಕಾರಿಕಾ ತೋಟಗಾರಿಕೆ ಸಮ್ಮೇಳನ~ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿವೆ.ಪಾಟೀಲರು ಮುಂಬರುವ ದಿನಗಳಲ್ಲಿ  ಜಿ-9 ಬಾಳೆ, ಕಾಳು ಮೆಣಸು, ಪಪ್ಪಾಯಿ, ಏಲಕ್ಕಿ ಹಾಗೂ ಕೋಕೊ ಬೆಳೆಯುವ ಉದ್ದೇಶ ಇಟ್ಟುಕೊಂಡಿದ್ದಾರೆ.ಪಾಟೀಲರ ಬಾಳೆ ಬೇಸಾಯ ನೋಡಲು ಕೃಷಿ, ತೋಟಗಾರಿಕೆ ವಿಜ್ಞಾನಿಗಳು, ಸ್ಥಳೀಯ ರೈತರಲ್ಲದೇ ವಿವಿಧ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದ ರೈತರು ಬರುತ್ತಾರೆ. ಪಾಟೀಲರ ಮೊಬೈಲ್ ನಂಬರ್: 94807 49779.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry