ಶ್ರಮವೇ ಯಶಸ್ಸಿನ ಅಳತೆಗೋಲು: ಕಾಗೇರಿ

7

ಶ್ರಮವೇ ಯಶಸ್ಸಿನ ಅಳತೆಗೋಲು: ಕಾಗೇರಿ

Published:
Updated:

ದಾಂಡೇಲಿ: ವಿದ್ಯಾರ್ಥಿಗಳ ಪರಿಶ್ರಮವೇ ಮುಂದಿನ ಬದುಕಿನಲ್ಲಿ ಅವರು ಹೊಂದುವ ಯಶಸ್ಸಿನ ಅಳತೆಗೋಲಾಗಿರುತ್ತದೆ. ಶಿಕ್ಷಣದಲ್ಲಿ ಕಠಿಣತೆ ಇದ್ದಾಗ ಮಾತ್ರ ಜೀವನದ ಸಾಮರ್ಥ್ಯ ಹೆಚ್ಚುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಅವರು ಇಲ್ಲಿಯ ಜನತಾ ವಿದ್ಯಾಲಯ ಸಂಯುಕ್ತ ಪ.ಪೂ.ಕಾಲೇಜು ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳ ಸುವರ್ಣ ಮಹೋತ್ಸವದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.ರಾಜ್ಯದಲ್ಲಿ ಶಿಕ್ಷಣದ ಪ್ರಸಾರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಜವಾಬ್ದಾರಿಯನ್ನು ಹಗುರಗೊಳಿಸಿವೆ. ದೇಶದಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ತನ್ನನ್ನು ಗುರುತಿಸಿಕೊಂಡಿರುವುದರ ಹಿಂದೆ ಆದರ್ಶಪ್ರಾಯವಾದ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಹೆಚ್ಚಿನದಾಗಿದೆ ಎಂದರು. ದಿನಕರ ದೇಸಾಯಿಯವರು ಅಂದು ತಮ್ಮ ಹೆಗಲ ಮೇಲೆ ಹೊತ್ತ ಶಿಕ್ಷಣ ಪ್ರಸಾರದ ಜವಾಬ್ದಾರಿ ಸಮಾಜಕ್ಕೆ ಆದರ್ಶಪ್ರಾಯವಾಗಿದೆ ಎಂದರು.ಸ್ಥಳೀಯ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎಲ್.ಚಂಡಕ  ಮಾತನಾಡಿ, ಅನೇಕ ಪ್ರತಿಭಾವಂತರನ್ನು ದಾಂಡೇಲಿಯ ಶಿಕ್ಷಣ ಕ್ಷೇತ್ರ ರೂಪಿಸಿಕೊಟ್ಟಿದೆ. ಶಿಕ್ಷಣದ ಧ್ಯೇಯ ಮತ್ತು ಉದ್ದೇಶಗಳ ಸಾಧನೆಗೆ ಕಾಗದ ಕಾರ್ಖಾನೆ ಸದಾಕಾಲ ಸಹಕರಿಸುತ್ತದೆ ಎಂದು ಭರವಸೆ ನೀಡಿದರು.ಕೆನರಾ ವೆಲ್‌ಫೇರ್ ಟ್ರಸ್ಟಿನ ಹಿರಿಯ ಟ್ರಸ್ಟಿ ಜಿ.ವಿ.ಭಟ್ ಅಧ್ಯಕ್ಷ ವಹಿಸಿ ಮಾತನಾಡಿದರು. ಟ್ರಸ್ಟಿನ ಆಡಳಿತಾಧಿಕಾರಿ ಕೆ.ವಿ.ಶೆಟ್ಟಿ , ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯನಿ ಎ.ಸಿ.ರೇವಣಕರ ಉಪಸ್ಥಿತರಿದ್ದರು.  ಶಿಕ್ಷಕಿ ನಂದಿನಿ ಪ್ರಾರ್ಥಿಸಿದರು. ಆಂಗ್ಲ ಮಾಧ್ಯಮ ಮಕ್ಕಳು ಸ್ವಾಗತ ಗೀತೆ ಹಾಡಿದರು. ಪ್ರಾಚಾರ್ಯ ಎಂ.ಎಸ್. ಲಮಾಣಿ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಲಿಲ್ಲಿ ಡಿಸೋಜಾ ವಂದಿಸಿದರು. ಸಹಶಿಕ್ಷಕ ವಿ.ಕೆ.ಭಾಸ್ಕರನ್ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry