ಶನಿವಾರ, ಏಪ್ರಿಲ್ 10, 2021
33 °C

ಶ್ರೀಕೃಷ್ಣ ತತ್ವದ ಸ್ಮರಣೆಯ ದಿನ: ಎಲ್ಲೆಡೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಕೃಷ್ಣ ತತ್ತ್ವವು ನಿರ್ಗುಣ, ನಿರಾಕಾರವಾಗಿರುವ ಭಕ್ತಿ ಭಾವಕ್ಕೆ ಸಂಬಂಧಿಸಿದ್ದಾಗಿದ್ದು, ಕೃಷ್ಣ ಜನ್ಮಾಷ್ಟಮಿಯು ಧಾರ್ಮಿಕ ಮಹತ್ವದ ಉತ್ಸವವಾಗಿದೆ ಎಂದು ಪಟ್ಟಣದ ರೋಟರಿ ಸಂಘದ ಸಂಸ್ಥಾಪಕ ಅಧ್ಯಕ್ಷ ರಾಮಬಸಪ್ಪ ತಿಳಿಸಿದರು.ಪಟ್ಟಣದ ಶ್ರಿಕೃಷ್ಣ ಸತ್ಸಂಗದ ಕಾರ್ಯಾಲಯದಲ್ಲಿ ಗುರುವಾರ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಹಮ್ಮಿಕೊಂಡಿದ್ದ ಭಗವದ್ಗೀತಾ ಪಾರಾಯಣ ಹಾಗೂ ಕನಕ ಪುರಂದರ ಗೀತ ತತ್ತ್ವಾಮೃತ ರಸಧಾರೆಯ 85ನೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಒತ್ತಡದ ಜೀವನ ಹಾಗೂ ಮಾಧ್ಯಮಗಳ ಹಾವಳಿಯಿಂದ ಒಂದು ಕಡೆ ಭಗವಂತನ ಚಿಂತನೆಗಳು ಕಡಿಮೆಯಾಗುತ್ತಿವೆ. ಸಾಂಪ್ರದಾಯಿಕ ಆಚರಣೆಗಳು ಮತ್ತು ಮನೆಯಲ್ಲಿ ಭಗವದ್ಗೀತಾ ಪಾರಾಯಣ, ಸತ್ಸಂಗಗಳು ಸಂಸ್ಕೃತಿಯನ್ನು, ನಮ್ಮ ತನವನ್ನು ಉಳಿಸಿಕೊಡುವಲ್ಲಿ ಚೈತನ್ಯ ಲಹರಿಯಂತೆ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.ಶ್ರಿಕೃಷ್ಣ ಸತ್ಸಂಗ ಸೇವಾ ಸಮಿತಿ ಅಧ್ಯಕ್ಷ ಜೆ.ಎಸ್. ರಾಮಚಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರಿಕೃಷ್ಣ ವಿಚಾರ ಧಾರೆಯ ಬಗ್ಗೆ ಉಪನ್ಯಾಸ ನೀಡಿದರು. ಕಾರಗೃಹದಲ್ಲಿ ಹುಟ್ಟಿದರೂ ಮರುಕ್ಷಣದಲ್ಲಿ ಅಲ್ಲಿಂದ ಹೊರಬರುವ ಕೃಷ್ಣನ ಜನನವೇ ಸ್ವತಂತ್ರವನ್ನು ಪ್ರತಿನಿಧಿಸುವುದು. ಬಾಲ್ಯದಲ್ಲಿಯೇ ತನ್ನ ಅಸಾಧಾರಣ ಶಕ್ತಿಯನ್ನು ಜಗತ್ತಿಗೆ ತೋರಿಸಿದ  ಅಪ್ರತಿಮ ಸ್ವಾಭಿಮಾನಿ. ರಾಜಕೀಯ ತಂತ್ರಗಾರ, ಗೋಪಾಲನಾಗಿ ಗೋಸಂಸ್ಕೃತಿ, ಕೃಷಿ ಸಂಸ್ಕೃತಿಯನ್ನು ಹುಟ್ಟು ಹಾಕಿದವನು. ಸ್ನೇಹ, ಪ್ರೀತಿ ಮತ್ತು ದುಷ್ಟ ಸಂಹಾರದ ದ್ಯೋತ ಕತೆಯನ್ನು ಪ್ರಪಂಚಕ್ಕೇ ತೋರಿದವನು ಎಂದು ತಿಳಿಸಿದರು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಭಗವದ್ಗೀತಾ ಪ್ರವಚಕರಾದ ಕೇಶವಭಟ್ಟಾಚಾರ್ಯ ಮಾತನಾಡಿ, ಧರ್ಮದ ರಕ್ಷಣೆಗಾಗಿಯೇ ಹುಟ್ಟಿ ಬಂದವನು ಕೃಷ್ಣ. ಅಧರ್ಮವು ತಾಂಡವವಾಡಿದಾಗ ಮತ್ತೊಮ್ಮೆ ಹುಟ್ಟಿ ಬರುವನೆಂದು ತಾನೇ ಹೇಳಿದ್ದಾನೆ. ಇಂದಿಗೂ ಆತನ ಸ್ಮರಣೆ ನಮ್ಮೆಲ್ಲರನ್ನು ಕಾಯುತ್ತಿದೆ. ಕಲಿಯುಗದಲ್ಲಿ ಮತ್ತೆ ಯುಗಪುರುಷನ ಹುಟ್ಟು ಯುಗಧರ್ಮವನ್ನು ಕಾಪಾಡುವ ಸಲುವಾಗಿ ಆಗಲೆಂದು ಆಶಿಸಿದರು.ಕಾರ್ಯಕ್ರಮದಲ್ಲಿ ಪಟ್ಟಣದ ಜೂನಿಯರ್ ಘಂಟಸಾಲ ಖ್ಯಾತಿಯ ಡಿ.ಎನ್.ಲಕ್ಷ್ಮೀಪತಿ ಮತ್ತು ತಂಡದ ಮಹಾತ್ಮಾಂಜನೇಯ, ನರಸಿಂಹಪ್ಪ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿದರು.ಶ್ರಿಕೃಷ್ಣ ಸತ್ಸಂಗ ಸಮಿತಿ ಉಪಾಧ್ಯಕ್ಷ  ಪಿ.ನಾರಾಯಣಪ್ಪ, ಕಾರ್ಯದರ್ಶಿ ವಿ.ಕೃಷ್ಣಪ್ಪ, ಖಜಾಂಚಿ ರಾಜಶೇಖರ್, ನಿರ್ದೇಶಕರುಗಳಾದ ಕೆಂಪೇಗೌಡ, ಆರ್. ಮುನಿಯಪ್ಪ, ಎಂ.ನಾರಾಯಣಸ್ವಾಮಿ, ಎಂ. ಮುನಿಯಪ್ಪ, ಎಸ್.ಆರ್. ಲಕ್ಷ್ಮೀನಾರಾಯಣಪ್ಪ, ಬಲಿಜ ಸಂಘದ ಅಧ್ಯಕ್ಷ ವೇಣುಗೋಪಾಲ್, ಧರ್ಮರಾಯ ದೇವಾಲಯದ ಅಧ್ಯಕ್ಷ ಆರ್.ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಗಂಗಾ ಮತಸ್ಥ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ, ಶಂತಾಶ್ರಮದ ಅಧ್ಯಕ್ಷ  ಸುಬ್ರಮಣ್ಯಸ್ವಾಮಿ, ಶ್ರಿರಂಗ ಮಠದ ಕಾರ್ಯದರ್ಶಿ ಗೋಪಾಲಕೃಷ್ಣಪ್ಪ, ಮುಖಂಡರಾದ ರಂಗಪ್ಪ, ವೆಂಕಟೇಶಪ್ಪ, ವೆಂಕಟರಮಣಸ್ವಾಮಿ, ಸದಾಶಿವಣ್ಣ, ರಘು, ನಾಗಣ್ಣ ಹಾಗೂ ಮತ್ತಿರರರು ಉಪಸ್ಥಿತರಿದ್ದರು.ಸಂಘದ ಸಂಚಾಲಕರಾದ ವಿ.ಎನ್. ವೆಂಕಟೇಶ್ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ ವಂದಿಸಿದರು.

 

`ಪುರಾಣ ನಾಯಕರ ಜೀವನ ಚರಿತ್ರೆ ಅಗತ್ಯ~

ದೇವನಹಳ್ಳಿ : ದೇಶದ ಜಾತ್ಯತೀತ ವ್ಯವಸ್ಥೆಯಲ್ಲಿ  ಪ್ರತಿಯೊಂದು ಧರ್ಮದಲ್ಲಿನ ಪುರಾಣ ಸೇರಿದ  ಚರಿತ್ರಾರ್ಹ ನಾಯಕರ ಜೀವನ ಚರಿತ್ರೆ ವಿದ್ಯಾರ್ಥಿಗಳ ಕಲಿಕೆಯಲ್ಲಿ ವಿವರಣಾತ್ಮಕವಾಗಿ ತಿಳಿ ಹೇಳುವುದು ಅಗತ್ಯ ಎಂದು ಮುಖ್ಯ ಶಿಕ್ಷಕಿ ಪುಷ್ಪಾಂಜಲಿ ತಿಳಿಸಿದರು.ದೇವನಹಳ್ಳಿ ನ್ಯೂ ಶಾರದಾ ಪಬ್ಲಿಕ್ ಶಾಲಾ ಆವರಣದಲ್ಲಿ ಶ್ರಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಶ್ರಿ ಕೃಷ್ಣ ಹಾಗೂ ರಾಧೆ ವೇಷಭೂಷಣ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.ಪ್ರಾಥಮಿಕ ಹಂತದಿಂದಲೇ ಮಕ್ಕಳನ್ನು ಮನೋರಂಜನಾತ್ಮಕವಾಗಿ ಶಿಕ್ಷಣದಲ್ಲಿ ಆಸಕ್ತಿ ಮೂಡಿಸುವಂತೆ ಕಲಿಕೆಗೆ ಪ್ರೇರಣೆ ನೀಡುತ್ತಾ ತೊಡಗಿಸಿಕೊಳ್ಳಬೇಕು. `ಜೀಜಾಬಾಯಿ ಶಿವಾಜಿಗೆ ಹೇಳಿದ ರಾಮಾಯಣ, ಮಹಾಭಾರತ~ದಂತಹ ಕತೆಗಳಿಂದ ಪ್ರಭಾವಿತನಾಗಿ ಅಖಂಡ ಭಾರತವನ್ನು ಆಳಿದ ಶಿವಾಜಿಯ ಜೀವನ ಶೈಲಿಯನ್ನು ಇತಿಹಾಸದ ಪುಟದಲ್ಲಿ ಕಾಣುತ್ತಿದ್ದೇವೆ. ಮಕ್ಕಳಿಗೆ ಸೃಜನಾತ್ಮಕ ಕಲೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸುವಂತೆ ಗಮನಹರಿಸಬೇಕು. ಪುರಾಣ ಪುರುಷರ ಪ್ರತಿರೂಪ ಮಕ್ಕಳಲ್ಲಿ ಕಂಡಾಗ ಸಂತಸದ ಜೊತೆಗೆ ಮಕ್ಕಳಲ್ಲಿ ಸಾಮರಸ್ಯ ಹಾಗೂ ಸಮಾನತೆ ಮೂಡಲು ಸಾಧ್ಯ ಎಂದರು.ಶಿಕ್ಷಕ ಗುರುರಾಜ್ ಮಾತನಾಡಿ, ಶ್ರಿ ಕೃಷ್ಣನು ಅಸಾಮಾನ್ಯ ಪುರುಷ, ಅವನ ಬಾಲ್ಯದ ಲೀಲೆಗಳು ಅದ್ಭುತವಾಗಿದ್ದವು. ಬಾಲ್ಯದಲ್ಲಿ ಅನೇಕ ಬಲಿಷ್ಟ ರಾಕ್ಷಸರನ್ನು  ಕೊಂದ ಅಸಾದಾರಣ ಬಾಲಕನಾಗಿದ್ದ. ಕಾಳಿಂಗ ವರ್ಧನ, ಗೋವರ್ಧನಗಿರಿ ಕಿರುಬೆರಳಿನಲ್ಲಿ ಏತ್ತಿದ್ದ. ಪೂತನಿ ರಾಕ್ಷಸಿಯ ಅಟ್ಟಹಾಸ ಅಡಗಿಸಿದ್ದು ಸೇರಿ, ದುಷ್ಟರನ್ನು ಶಿಕ್ಷಿಸಿ ತಾಯಿ ಯಶೋಧೆಗೆ ಅಚ್ಚುಮೆಚ್ಚಿನ ಮಗನಾಗಿದ್ದ. ಪ್ರತಿಯೊಂದು ಮಗುವಿಗೆ ತಾಯಿ ಗುರುವಾಗಿ ಬೌದ್ಧಿಕ ಮಟ್ಟ ಸುಧಾರಣೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.ಶಿಕ್ಷಕ ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಪರ್ಧೆಯಲ್ಲಿ 60 ವಿದ್ಯಾರ್ಥಿಗಳು ಶ್ರಿಕೃಷ್ಣ ಹಾಗೂ ರಾಧೆ ವೇಷಗಳಲ್ಲಿ ಸ್ಪರ್ಧಿಸಿದ್ದರು. ಅದರಲ್ಲಿ 6 ವಿಜೇತ ವಿದ್ಯಾರ್ಥಿಗಳಿಗೆ ಎರಡು ವರ್ಗದಲ್ಲಿ ಬಹುಮಾನ ನೀಡಲಾಯಿತು. ದೈಹಿಕ ಶಿಕ್ಷಕ ರಾಮಕೃಷ್ಣಪ್ಪ ಹಾಗೂ ಶಿಕ್ಷಕ ವೃಂದ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.