ಶ್ರೀಗಳ ಸ್ಮರಣೋತ್ಸವಕ್ಕೆ ಬೆಳ್ಳಿರಥ ನಿರ್ಮಾಣ ಸಂಕಲ್ಪ

7

ಶ್ರೀಗಳ ಸ್ಮರಣೋತ್ಸವಕ್ಕೆ ಬೆಳ್ಳಿರಥ ನಿರ್ಮಾಣ ಸಂಕಲ್ಪ

Published:
Updated:

ಸಿರಿಗೆರೆ: ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಮುಂದಿನ ಸ್ಮರಣೋತ್ಸವದ ವೇಳೆಗೆ ` 3 ರಿಂದ 4 ಕೋಟಿ ವೆಚ್ಚದಲ್ಲಿ ಬೆಳ್ಳಿರಥ ನಿರ್ಮಿಸಬೇಕೆಂಬ ಸಂಕಲ್ಪವನ್ನು ಭಕ್ತರ ಮುಂದಿಟ್ಟ ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಅದರ ಪೂರ್ಣ ಜವಾಬ್ದಾರಿಯನ್ನು ಸಮಾಜದ ಮುಖಂಡರಾದ ಸಚಿವ ಶಾಮನೂರು ಶಿವಶಂಕರಪ್ಪ ಹಾಗೂ ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರ ಹೆಗಲಿಗೆ ಹೇರಿದರು.ಇಲ್ಲಿನ ಬಿ.ಲಿಂಗಯ್ಯ ವಸತಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 21ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.ಬೆಳ್ಳಿರಥ ನಿರ್ಮಾಣಕ್ಕೆ ಭಕ್ತರು ಉದಾರ ದೇಣಿಗೆ ನೀಡಬೇಕು. ಅದಕ್ಕೆ ಬೃಹನ್ಮಠದಿಂದ ಬಿಡಿಗಾಸನ್ನೂ ನೀಡುವುದಿಲ್ಲ. ಎಲ್ಲವೂ ಭಕ್ತರ ಜವಾಬ್ದಾರಿ ಎಂದು ಹೇಳುತ್ತಿದ್ದಂತೆ; ಶಾಮನೂರು ಶಿವಶಂಕರಪ್ಪ ಅವರು ರಥದ ನಿರ್ಮಾಣಕ್ಕೆ ಬೇಕಾಗುವ ಒಟ್ಟು ಬೆಳ್ಳಿಯ ಅರ್ಧ ತೂಕವನ್ನು ನೀಡುವುದಾಗಿಯೂ ಹಾಗೂ ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರು, ಶಿವಶಂಕರಪ್ಪ ಅವರು ಕೊಡುವ ತೂಕದ ಅರ್ಧಭಾಗವನ್ನು ಕೊಡುವುದಾಗಿ ವಾಗ್ದಾನ ಮಾಡಿದರು.ಈಗಾಗಲೇ ರಥಕ್ಕೆಂದೇ ಭಕ್ತರು ಮಠಕ್ಕೆ ನೀಡಿರುವ ಬೆಳ್ಳಿಯನ್ನೂ ಸಹ ನೀಡಲಾಗುವುದು. ಉಳಿದ ವೆಚ್ಚವನ್ನು ಭಕ್ತರು ವಹಿಸಿಕೊಳ್ಳಬೇಕು. ಈ ವಿಚಾರವನ್ನು ವ್ಯಾವಹಾರಿಕವಾಗಿ ಯೋಚಿಸಬೇಡಿ. ಮುಂದಿನ ಸ್ಮರಣೆಯಲ್ಲಿ ರಥವನ್ನು ಎಳೆಯುವ ಮೂಲಕ ಭಕ್ತರು ಮನೋಲ್ಲಾಸವನ್ನು ಪಡೆಯಬೇಕು ಎಂಬುದು ನಮ್ಮ ಇಚ್ಚೆಯಾಗಿದೆ ಎಂದರು.ಶಿವಶಂಕರಪ್ಪ ಅವರ ‘ನನಗೆ ಕೆಲಸಕ್ಕೆ ಬಾರದ ಖಾತೆ ನೀಡಿದ್ದಾರೆ’ ಎಂಬ ಮಾತುಗಳಿಗೆ ಪ್ರತಿಕ್ರಿಯಿಸಿದ ಶಿವಮೂರ್ತಿ ಶ್ರೀಗಳು, ನೀವು ಯಾವತ್ತೂ ನಿಮಗೆ ನೀಡಿರುವ ಖಾತೆಯನ್ನು ಕೆಲಸಕ್ಕೆ ಬಾರದ ಖಾತೆ ಎಂದು ತಿಳಿಯಬಾರದು.ನಿಮಗೆ ಹಣ ಮಾಡುವ ಯಾವುದೇ ಉದ್ದೇಶವಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು

ನಿಮ್ಮ ಆರೋಗ್ಯ ವೃದ್ಧಿಸುವ ದೃಷ್ಟಿ, ರಾಜ್ಯದ ಪ್ರತಿಯೊಬ್ಬ ರೈತನಿಗೂ ಆ ಇಲಾಖೆಯ ಸವಲತ್ತುಗಳು ಸಿಗುವಂತಾಗಲಿ ಎಂಬ ಉದ್ದೇಶದಿಂದ ನೀಡಿದ್ದಾರೆ ಎಂದರು.ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲೂ ಶ್ರೀಮಠವನ್ನು ಬಹು ಎತ್ತರಕ್ಕೆ ಒಯ್ದಿರುವ ಎಲ್ಲಾ ಪೂಜ್ಯರನ್ನು ಸ್ಮರಿಸಿ ಗೌರವಿಸುವ ಗುಣ ನಮ್ಮದಾಗಬೇಕು ಎಂದರು.ಶುದ್ಧ ನೀರನ್ನು ಪ್ರತಿ ಗ್ರಾಮೀಣ ಪ್ರದೇಶ ಜನ ಸಾಮಾನ್ಯರೂ ಕುಡಿಯುವಂತಾಗಬೇಕು ಎಂಬ ಚಿಂತನೆಗೆ ಶ್ರೀಗಳು ಮಾರ್ಗದರ್ಶನ ನೀಡಿ ಕೆಲವು ಭಾಗದಲ್ಲಿ ಸಾಕಾರಗೊಳ್ಳುವಂತೆ ಮಾಡಿದ್ದಾರೆ ಎಂದರು.ಸಚಿವ ಎಚ್.ಆಂಜನೇಯ ಮಾತನಾಡಿ, ಹಿಂದುಳಿದ ನಮ್ಮ ಸಮಾಜವನ್ನು ಪಶುಗಳಂತೆ ಕಾಣುತ್ತಿದ್ದ ಸ್ವಾತಂತ್ರ್ಯ ಪೂರ್ವ ಸಂದರ್ಭದಲ್ಲಿಯೇ ಅಸ್ಪೃಶ್ಯ ಸಮಾಜಕ್ಕೆ ಮೀಸಲಾತಿಯನ್ನು ಕೊಟ್ಟ ದಿವ್ಯಚೇತನ ಲಿಂಗೈಕ್ಯ ಶ್ರೀಗಳು ಎಂದು ಶ್ಲಾಘಿಸಿದರು.ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಜೀವಿತಾವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಾಡುನುಡಿಗೆ ಶ್ರಮಿಸಿ, ಕಾಲಗರ್ಭ ಸೇರುವ ಮುನ್ನ ಜವಾಬ್ದಾರಿ ಅರಿತು ಕಾಯಕದಲ್ಲಿ ನಿರತರಾದವರು. ಅಂತಹವರು ಜನಮಾನಸದಲ್ಲಿ ಎಂದೂ ಅಚ್ಚಳಿಯದೆ ಉಳಿಯುತ್ತಾರೆ. ನಮ್ಮಲ್ಲಿನ ಎಲ್ಲಾ ವ್ಯವಸ್ಥೆಯನ್ನು ಸಮತೋಲನದಲ್ಲಿ ತರಬೇಕಾದರೆ ಶಿವಮೂರ್ತಿ ಶ್ರೀಗಳಂಥವರು ಅವಶ್ಯ ಎಂದು ನುಡಿದರು.ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಚಿಕ್ಕಮಗಳೂರಿನ ಜಯಬಸವಾನಂದ ಸ್ವಾಮೀಜಿ,  ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಶಾಸಕರಾದ ಯು.ಬಿ. ಬಣಕಾರ್, ಡಿ.ಜಿ.ಶಾಂತನಗೌಡ, ಚಿತ್ರದುರ್ಗ ಎಸ್‌ಪಿ ಡಾ.ವೈ.ಎಸ್.ರವಿಕುಮಾರ್, ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಪ್ರಧಾನ ಕಾಯದರ್ಶಿ ಡಾ.ಎಸ್.ಸಿದ್ದಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಕೆಂಚಪ್ಪ, ಆಡಳಿತಾಧಿಕಾರಿ ಪ್ರೊ.ಎಸ್.ಬಿ.ರಂಗನಾಥ್, ಕೆ.ಜಿ. ಶಿವಮೂರ್ತಿ, ಸಾಣೇಹಳ್ಳಿ ಶಿವಕುಮಾರ ಕಲಾಸಂಘದ ಉಪಾಧ್ಯಕ್ಷ ಎಸ್.ಜಿ. ಪ್ರಭು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry