ಬುಧವಾರ, ಜನವರಿ 29, 2020
28 °C

ಶ್ರೀಧರ ವಿಲಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಬತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಮತ್ತು ಹದಿನೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ತೆರೆಮರೆಯಲ್ಲಿಯೇ ಉಳಿದಿರುವ ಕಲಾವಿದ ಶ್ರೀಧರ್ ದೇವ. ಅವರನ್ನು ಗೆಳೆಯರು ಕಾವೇರಿ ಶ್ರೀಧರ್ ಎಂದು ಕರೆಯುವುದು ಇದೆ. ಕಾರಣ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಇರುವ ಕಾವೇರಿ ಎಂಪೋರಿಯಂನಲ್ಲಿ ಅವರು ಸಹಾಯಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.    ಸರ್ಕಾರಿ ಉದ್ಯೋಗದಲ್ಲಿ ಇದ್ದುಕೊಂಡು ನಟನೆಯ ಗೀಳನ್ನು ಅಂಟಿಸಿಕೊಂಡವರು ಶ್ರೀಧರ್. ಬೆಂಗಳೂರಿನವರಾದ ಶ್ರೀಧರ ದೇವ ಬಿಕಾಂ ಮುಗಿಸಿ ಕಾಲೇಜು ದಿನಗಳಿಂದಲೇ ನಾಟಕಗಳಲ್ಲಿ ನಟಿಸುವುದನ್ನು ಹವ್ಯಾಸ ಮಾಡಿಕೊಂಡಿದ್ದರು. ಅವರಿಗೆ ಸರ್ಕಾರಿ ಉದ್ಯೋಗ ದೊರಕಿ ಮಂಡ್ಯದ ನಾಗಮಂಗಲಕ್ಕೆ ವರ್ಗಾವಣೆಯಾದಾಗ ಅಲ್ಲಿ ರಂಗಭೂಮಿಯ ನಂಟನ್ನು ಹಿಗ್ಗಿಸಿಕೊಂಡರು.

 

ಸಿಜಿಕೆ, ಆರ್.ನಾಗೇಶ್ ಅವರ ತಂಡಗಳಲ್ಲಿ ನಟಿಸಿರುವ ಅವರು, `ಅಂಬೇಡ್ಕರ್~, `ದಂಡೆ~, `ಪಂಚಮ~, `ಡೆಲ್ಲಿ ಚಲೋ~, `ಶೋಕಚಕ್ರ~, `ಚಿಕ್ಕದೇವ ಭೂಪ~, `ಭಾಸ್ಕರ ಭಾಮಿನಿ~, `ಗೌಡ್ರಗದ್ಲ~ ಮುಂತಾದ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರು. ಸಿನಿಮಾಗಳಲ್ಲಿ ಪೋಷಕ ಮತ್ತು ಖಳನಾಯಕನ ಪಾತ್ರಧಾರಿಯಾಗಿ ನೆಲೆ ನಿಲ್ಲಬೇಕು ಎಂದು ಕನಸು ಕಾಣುತ್ತಿದ್ದಾರೆ. ಶಿವರುದ್ರಯ್ಯ ಅವರ `ದಾಟು~ ನಾಟಕದ ಗೌಡನ ಪಾತ್ರ ಅವರಿಗೆ ಬ್ರೇಕ್ ನೀಡಿತು. ನಂತರ ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆದುಕೊಂಡ ಅವರಿಗೆ ವಿನು ಬಳಂಜ ಅವರ `ಗೆಜ್ಜೆಪೂಜೆ~ ಧಾರಾವಾಹಿಯಲ್ಲಿ ನಟಿಸುವ ಅವಕಾಶವೂ ದೊರಕಿತು. ಉದ್ಯೋಗಕ್ಕೆ ತೊಂದರೆಯಾಗದಂತೆ ರಜಾ ದಿನಗಳಲ್ಲಿ ತಮ್ಮ ನಟನೆಯ ಹವ್ಯಾಸಕ್ಕೆ ನೀರು ಹಾಕಿ ಪೋಷಿಸಿಕೊಂಡು ಬಂದಿರುವ ಶ್ರೀಧರ ದೇವ ಅವರು ಎಂಥ ಪಾತ್ರ ಕೊಟ್ಟರೂ ಮಾಡಲು ಸಿದ್ಧ ಎನ್ನುತ್ತಾರೆ.`ಸಿಡುಕಬೇಡ ಸಿಂಗಾರಿ~, `ಆಹಾ ಬ್ರಹ್ಮಚಾರಿ~, `ಮೃತ್ಯುಬಂಧನ~ ಮುಂತಾದ ಸಿನಿಮಾಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿಯೂ ಕೆಲಸ ಮಾಡಿರುವ ಶ್ರೀಧರ ದೇವ ಸಣ್ಣಪುಟ್ಟ ಪಾತ್ರಗಳಲ್ಲಿಯೂ ನಟಿಸಿದ್ದಾರೆ. ಸಾಕಷ್ಟು ಸಾಕ್ಷ್ಯಚಿತ್ರಗಳಿಗೂ ಕೆಲಸ ಮಾಡಿರುವ ಅವರಿಗೆ ಒಳ್ಳೆ ನಟ ಎನಿಸಿಕೊಳ್ಳುವಾಸೆ.

ಪ್ರತಿಕ್ರಿಯಿಸಿ (+)