ಶನಿವಾರ, ಮೇ 8, 2021
20 °C
ಪ್ರಧಾನಿ, ಸೋನಿಯಾ ಭೇಟಿಗೆ ಮುನ್ನಾದಿನ ದುಷ್ಕೃತ್ಯ

ಶ್ರೀನಗರ: ಉಗ್ರರ ದಾಳಿಗೆ 8 ಸೈನಿಕರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ (ಪಿಟಿಐ): ಇಲ್ಲಿಯ ಹೊರವಲಯದ ಹೈದರ್‌ಪುರ ಪ್ರದೇಶದಲ್ಲಿ ಸೋಮವಾರ ಸೇನಾ ಬೆಂಗಾವಲು ಪಡೆಯ ವಾಹನದ ಮೇಲೆ ಶಂಕಿತ ಹಿಜಬುಲ್ ಮುಜಾಹಿದ್ದೀನ್‌ಗೆ ಸೇರಿದ ಉಗ್ರರು ದಾಳಿ ನಡೆಸಿದ ಪರಿಣಾಮ 8 ಯೋಧರು ಮೃತಪಟ್ಟು 19 ಜನ ಗಾಯಗೊಂಡರು.ಪ್ರಧಾನಿ ಡಾ. ಮನಮೋಹನ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕಾಶ್ಮೀರ ಭೇಟಿಯ ಮುನ್ನಾದಿನವೇ ಈ ಘಟನೆ ನಡೆದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದ್ದು ಭದ್ರತೆ ಬಲಪಡಿಸಲಾಗಿದೆ.ಮೂರು ದಿನಗಳ ಅವಧಿಯಲ್ಲಿ ನಡೆದ ಉಗ್ರರ ಎರಡನೇ ದಾಳಿ ಇದಾಗಿದೆ. ಶ್ರೀನಗರ ಹೃದಯಭಾಗದಲ್ಲೇ ಉಗ್ರರು ಇಬ್ಬರು ಪೊಲೀಸರನ್ನು ಹತ್ಯೆ ಮಾಡಿದ ಎರಡೇ ದಿನದಲ್ಲಿ ಮತ್ತೆ ಇಂತಹ ಘಟನೆ ನಡೆದಿದೆ. ಪಾಕ್ ಬೆಂಬಲಿತ ಹಿಜಬುಲ್ ಮುಜಾಹಿದ್ದೀನ್ ದಾಳಿಯ ಹೊಣೆ ಹೊತ್ತಿಕೊಂಡಿದ್ದರೂ ರಕ್ಷಣಾ ಸಿಬ್ಬಂದಿಯ ಪ್ರಕಾರ ನಿಷೇಧಿತ ಲಷ್ಕರ್-ಎ-ತೈಯಬಾದ ಕೈವಾಡ ಇದರಲ್ಲಿದೆ ಎನ್ನಲಾಗಿದೆ.`ಪ್ರಧಾನಿ ಭೇಟಿ ಕಾಲಕ್ಕೆ ಉಗ್ರರು ಮತ್ತೆ ಇಂತಹ ದಾಳಿ ನಡೆಸುವ ಸಾಧ್ಯತೆ ಇದೆ' ಎಂಬ ಗುಪ್ತಚರ ಸಂಸ್ಥೆ ವರದಿಗಳ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಭದ್ರತಾ ಕಾರ್ಯವನ್ನು ಬಲಪಡಿಸಲಾಗಿದ್ದು ಮಾನವರಹಿತ ವೈಮಾನಿಕ ವಾಹನಗಳನ್ನು ಕಣಿವೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ.ರಾಷ್ಟ್ರೀಯ ರೈಫಲ್ಸ್‌ನ 35 ಬೆಂಗಾವಲು ದಳದ ಸಿಬ್ಬಂದಿ ತಮ್ಮ ಮೂಲ ಶಿಬಿರ ಇರುವ ಬಡಗಾಮ್ ಎಂಬಲ್ಲಿಗೆ ತೆರಳುತ್ತಿದ್ದಾಗ ಸಂಜೆ 4.35ರ ಸುಮಾರಿಗೆ ಪಂಥಾ ಚೌಕ್‌ನ ಕ್ಲಾಸಿಕ್ ಆಸ್ಪತ್ರೆ ಬಳಿ ಈ ದಾಳಿ ನಡೆದಿದೆ.ಎಕೆ 47 ರೈಫಲ್ಸ್‌ಗಳಿಂದ ಮುಂದೆ ಹಾಗೂ ಹಿಂದಿನಿಂದ ಸುತ್ತುವರಿದ ಮೂವರು ಉಗ್ರರು ಮನಬಂದಂತೆ ಗುಂಡುಹಾರಿಸಿ ಸ್ಯಾಂಟ್ರೊ ಕಾರಿನಲ್ಲಿ ಪರಾರಿಯಾದರು ಎಂದು ಪ್ರತ್ಯಕ್ಷ್ಯದರ್ಶಿಗಳು ತಿಳಿಸಿದರು. ತೀವ್ರವಾಗಿ ಗಾಯಗೊಂಡ ಮೂವರು ಸೈನಿಕರ ಸ್ಥಿತಿ ಗಂಭೀರವಾಗಿದೆ ಎಂದು ಸೇನೆ ತಿಳಿಸಿದೆ.ಇಂತಹ ದಾಳಿಗಳಿಂದ ಸೇನಾ ಸಿಬ್ಬಂದಿಯ ಮಾನಸಿಕ ಸ್ಥೈರ್ಯವನ್ನು ಕುಂದಿಸಲು ಆಗದು, ಈ ಹಿಂದಿನ ಹಲವು ಘಟನೆಗಳಲ್ಲಿ ಸೇನೆಯೇ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದರು.ನಿಗದಿಯಂತೆ ಪ್ರಧಾನಿ ಭೇಟಿ

ನವದೆಹಲಿ:
ಶ್ರೀನಗರದಲ್ಲಿ ಭಯೋತ್ಪಾದಕರು ಸೋಮವಾರ ದಾಳಿ ನಡೆಸಿರುವ ಮಧ್ಯೆಯೂ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ನಿರ್ಧಾರಿತ ಪ್ರವಾಸ ರದ್ದು ಪಡಿಸದೆ ಮಂಗಳವಾರ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

`ಪ್ರಧಾನಿಯವರ ಪ್ರವಾಸದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ' ಎಂದು ಪ್ರಧಾನ ಮಂತ್ರಿಗಳ ಸಚಿವಾಲಯದ ಮೂಲಗಳ ತಿಳಿಸಿವೆ.ಮನಮೋಹನ್‌ಸಿಂಗ್‌ರವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಮಂಗಳವಾರದಿಂದ ಎರಡು ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.ಈ ಉದ್ದೇಶಿತ ಪ್ರವಾಸದಲ್ಲಿ ಪ್ರಧಾನಿ ಅವರು ರಾಜ್ಯದ ಗಡಿ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ನಿರೀಕ್ಷೆ ಇದೆ.  ಇದೇ ವೇಳೆ ಕಾಶ್ಮೀರದ ಖಾಜಿಗುಂಡ್‌ನಿಂದ ಜಮ್ಮುವಿನ ಬನಿಹಾಲ್‌ವರೆಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗವನ್ನು ಪ್ರಧಾನಿ ಮತ್ತು ಸೋನಿಯಾ ಅವರು ಉದ್ಘಾಟಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.