ಶ್ರೀನಿವಾಸನ್ ಸ್ಥಾನಕ್ಕೆ ಗಾವಸ್ಕರ್: ಸುಪ್ರೀಂ ಸಲಹೆ

ನವದೆಹಲಿ (ಪಿಟಿಐ): ಐಪಿಎಲ್ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳು ಮುಗಿಯುವ ತನಕ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಶ್ರೀನಿವಾಸನ್ ಅವರ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಅವರನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಪ್ರಸ್ತಾಪಿಸಿದೆ.
ಜೊತೆಗೆ ಪ್ರಕರಣಗಳು ಅಂತ್ಯಗೊಳ್ಳುವ ತನಕ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಹಾಗೂ ರಾಜಸ್ತಾನ್ ರಾಯಲ್ಸ್ (ಆರ್ಆರ್) ತಂಡಗಳನ್ನು ಐಪಿಎಲ್ನ ಏಳನೇ ಆವೃತ್ತಿಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸಲು ಚಿಂತನೆ ನಡೆಸಿದ್ದು, ಇದರಿಂದ ಬಿಸಿಸಿಐಯ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರಿಗೆ ಮತ್ತಷ್ಟು ಹಿನ್ನಡೆಯಾಗಿದೆ.
ಇಂಡಿಯಾ ಸಿಮೆಂಟ್ ಒಡೆತನದ, ಶ್ರೀನಿವಾಸನ್ ಅವರ ಪ್ರಯೋಜಕತ್ವದ ಸಿಎಸ್ಕೆ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳನ್ನು ಏಪ್ರಿಲ್ 16ರಿಂದ ಆರಂಭಗೊಳ್ಳಲಿರುವ ಐಪಿಎಲ್ ಏಳನೇ ಆವೃತ್ತಿಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸುವ ಉದ್ದೇಶವಿದೆ ಎಂದು ನ್ಯಾಯಮೂರ್ತಿ ಎ.ಕೆ.ಪಟ್ನಾಯಿಕ್ ನೇತೃತ್ವದ ಪೀಠ ಹೇಳಿತು.
ಪ್ರಕರಣಗಳು ಅಂತ್ಯಗೊಳ್ಳುವ ತನಕ ಮಂಡಳಿಯನ್ನು ಮುನ್ನಡೆಸಲು ಹಿರಿಯ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಕಾರ ಗಾವಸ್ಕರ್ ಹೆಸರನ್ನು ಪ್ರಸ್ತಾಪಿಸಿದ ಪೀಠ, ತಮ್ಮ ಪ್ರಸ್ತಾವಣೆಗಳ ಬಗ್ಗೆ ಶುಕ್ರವಾರ ಪ್ರತಿಕ್ರಿಯೆ ದಾಖಲಿಸುವಂತೆ ಮಂಡಳಿಗೆ ಸೂಚಿಸಿತು. ಬಿಸಿಸಿಐ ನೀಡುವ ಪ್ರತಿಕ್ರಿಯೆ ನಂತರ ನ್ಯಾಯಾಲಯ ಮಧ್ಯಂತರ ಆದೇಶ ಪ್ರಕಟಿಸಲಿದೆ.
ಇದೇ ವೇಳೆ, ಇಂಡಿಯಾ ಸಿಮೆಂಟ್ನ ಅಧಿಕಾರಿಗಳನ್ನು ಬಿಸಿಸಿಐ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ತಡೆಯಲು ಆದೇಶ ಪ್ರಕಟಿಸಲು ಕೂಡ ನ್ಯಾಯಾಲಯ ಉದ್ದೇಶಿಸಿತು.
ಇಂಡಿಯಾ ಸಿಮೆಂಟ್ನ ಹಲವು ಅಧಿಕಾರಿಗಳು ಬಿಸಿಸಿಐ ತಂಡದ ಸಕ್ರೀಯ ಭಾಗವಾಗಿರುವ ವಿಷಯವನ್ನು ಬಿಹಾರ್ ಕ್ರಿಕೆಟ್ ಸಂಸ್ಥೆಯ ಪರ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಗಮನಕ್ಕೆ ತಂದಾಗ ನ್ಯಾಯಾಲಯ ಹೀಗೆ ಅಭಿಪ್ರಾಯ ಪಟ್ಟಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.