ಸೋಮವಾರ, ಮೇ 10, 2021
25 °C

ಶ್ರೀನಿವಾಸನ್ ಕಾರ್ಖಾನೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಸಿಸಿಐನ ಅಧ್ಯಕ್ಷ (ಅಧಿಕಾರರಹಿತ) ಶ್ರೀನಿವಾಸನ್ ಅವರ ಮಾಲೀಕತ್ವದ ಐಸಿಎಲ್ ಸಂಸ್ಥೆಯು ಕೆ.ಆರ್.ಪೇಟೆಯಲ್ಲಿ ಪ್ರಾರಂಭಿಸಲು ಮುಂದಾಗಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಉಪ ಘಟಕ ಹಾಗೂ ಡಿಸ್ಟಿಲರಿ ಕಾರ್ಖಾನೆಗೆ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಜನಶಕ್ತಿ ಹಾಗೂ ಹೇಮಾವತಿ ನದಿ ಉಳಿಸಿ ಆಂದೋಲನ ತೀವ್ರ ವಿರೋಧ ವ್ಯಕ್ತಪಡಿಸಿವೆ.ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಹಿರಿಯ ಕಾರ್ಯಕರ್ತ ಎಂ.ವಿ.ರಾಜೇಗೌಡ, ಸಂಸ್ಥೆಯು ವಿದ್ಯುತ್ ಉತ್ಪಾದನೆಗಾಗಿ ಘಟಕದಲ್ಲಿ ಕಲ್ಲಿದ್ದಲನ್ನು ಬಳಸಲು ಪ್ರಾರಂಭಿಸಿದರೆ, ಅದರಿಂದ ಹೊರಬರುವ ಗಂಧಕ, ಇಂಗಾಲದ ಡೈ ಆಕ್ಸೈಡ್ ಹಾಗೂ ಇತರೆ ವಿಷಾನಿಲಗಳಿಂದ ಕೆ.ಆರ್ ಪೇಟೆಯ ಸುತ್ತಮುತ್ತಲ ಪ್ರದೇಶದ ಪರಿಸರಕ್ಕೆ ಅಪಾರ ಹಾನಿಯಾಗುತ್ತದೆ. ಅಲ್ಲದೆ ಕೃಷಿ ಮಾಡಲು ತೊಂದರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಈಗಾಗಲೇ ಕಲ್ಲಿದ್ದಲು ಬಳಕೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದ್ದು, ಘಟಕ ಪ್ರಾರಂಭವಾಗುವ ಹಂತದಲ್ಲಿದೆ. ಈ ಸಂಬಂಧ ರಾಷ್ಟ್ರೀಯ ಹಸಿರು ಪೀಠದಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದ್ದರೂ ಸಂಸ್ಥೆ ಘಟಕದ ಕಾಮಗಾರಿಯನ್ನು ಮುಂದುವರೆಸಿದೆ ಎಂದು ಆರೋಪಿಸಿದರು.ಸಂಸ್ಥೆ ಕಲ್ಲಿದ್ದಲಿನ ಬದಲು ನೈಸರ್ಗಿಕವಾಗಿ ದೊರೆಯುವ ಕಬ್ಬಿನ ಸಿಪ್ಪೆ ಹಾಗೂ ತೆಂಗಿನ ಚಿಪ್ಪನ್ನು ಬಳಸಿ ಪರಿಸರ ಸ್ನೇಹಿ ವಿದ್ಯುತ್ ಘಟಕವನ್ನು ಪ್ರಾರಂಭಿಸುವಂತೆ ರಾಜ್ಯ ಸರ್ಕಾರ ಆದೇಶಿಸಬೇಕು. ಜೊತೆಗೆ ಕಲ್ಲಿದ್ದಲು ಬಳಕೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.ಐಸಿಎಲ್ ಸಂಸ್ಥೆ ಡಿಸ್ಟಿಲರಿ ಕಾರ್ಖಾನೆ ಸ್ಥಾಪಿಸಲು ಈಗಾಗಲೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಾಪೇಕ್ಷಣಾ ಪತ್ರವನ್ನು ಪಡೆದುಕೊಂಡಿದೆ. ಡಿಸ್ಟಿಲರಿಯಿಂದ ಕೇವಲ ಹೇಮಾವತಿ ನದಿಯ ನೀರು ಮಾತ್ರವಲ್ಲದೆ ಅಂತರ್ಜಲ ಸಹ ಕಲುಷಿತವಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಡಿಸ್ಟಿಲರಿ ಪ್ರಾರಂಭಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು ಎಂದರು.ಈ ಸಂಬಂಧ ಈಗಾಗಲೇ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಬಿ. ರಮಾನಾಥ ರೈ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಮನವಿ ಪತ್ರ ನೀಡಲಾಗಿದೆ. ಒಂದುವೇಳೆ ರಾಜ್ಯ ಸರ್ಕಾರ ಇತ್ತ ಗಮನ ಹರಿಸದಿದ್ದರೆ, ಸ್ಥಳೀಯರೆ ಕಾರ್ಖಾನೆ ಮುಚ್ಚಿಸಲು ಮುಂದಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಸದಸ್ಯರಾದ ತಮ್ಮೇಗೌಡ, ಯೋಗೇಶ್ ಹಾಗೂ ಕರ್ನಾಟಕ ಜನಶಕ್ತಿಯ ಕಾರ್ಯಕಾರಿ ಸಮಿತಿಯ ಸದಸ್ಯೆ ಮಲ್ಲಿಗೆ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.