ಶ್ರೀನಿವಾಸಪುರ: ಉತ್ತಮ ಹುಣಸೆ ಫಸಲು

7

ಶ್ರೀನಿವಾಸಪುರ: ಉತ್ತಮ ಹುಣಸೆ ಫಸಲು

Published:
Updated:

ಶ್ರೀನಿವಾಸಪುರ: ಕೆಲ ದಿನಗಳ ಹಿಂದೆ ಹುಣಸೆಹಣ್ಣು ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರ ಮುಖದಲ್ಲಿ ಮತ್ತೆ ಸಂತಸ ಮೂಡಿದೆ.ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಹುಣಸೆ ಫಸಲು ಬಂದಿದೆ. ಮರಗಳಲ್ಲಿ ಕಾಯಿ ತೂಗುತ್ತಿದೆ. ಇದರಿಂದ ಹುಣಸೆ ಬೆಳೆಗಾರರಿಗೆ ಸಂತೋಷವಾಗಿದೆ. ಸುಗ್ಗಿ ಕಾಲದಲ್ಲಿ ನಾಲ್ಕು ಕಾಸು ಸಿಗಬಹುದು ಎಂಬ ಭರವಸೆಯೊಂದಿಗೆ ರೈತರು ತೋಟಗಳನ್ನು ಕಾಯುತ್ತಿದ್ದಾರೆ.ತಾಲ್ಲೂಕಿನಲ್ಲಿ ಸಾಕಷ್ಟು ಸಂಖ್ಯೆಯ ಹುಣಸೆ ತೋಟಗಳಿವೆ. ಜೊತೆಗೆ ಪ್ರತ್ಯೇಕವಾಗಿಯೂ ಬಿಡಿ ಬಿಡಿಯಾಗಿ ಮರಗಳನ್ನು ಬೆಳೆಯಲಾಗಿದೆ. ಈಗ ಹುಣಸೆ ಹಣ್ಣಿಗೆ ಒಳ್ಳೆ ಬೆಲೆಯೂ ಇದೆ. ಆದ್ದರಿಂದ ಹುಣಸೆ ಮರಗಳನ್ನು ಅತ್ಯಂತ ಜೋಪಾನವಾಗಿ ನೋಡಿಕೊಳ್ಳಲಾಗುತ್ತಿದೆ. ತೋಟಗಳಿಗೆ ಕೋತಿ ಕಾಟ ಹೆಚ್ಚಾಗಿರುವುದರಿಂದ ಕಾವಲು ಹಾಕಲಾಗಿದೆ. ಒಂಟಿ ಮರಗಳ ಬುಡದ ಸುತ್ತ ಮುಳ್ಳಿನ ಕಂಪೆಗಳನ್ನು ಕಟ್ಟಿ ಕೋತಿ ಹತ್ತದಂತೆ ನೋಡಿಕೊಳ್ಳಲಾಗುತ್ತಿದೆ.ಕೆಲವು ವರ್ಷಗಳ ಹಿಂದೆ ಹುಣಸೆ ಹಣ್ಣಿಗೆ ಸತತವಾಗಿ ಬೆಲೆ ಕುಸಿತ ಉಂಟಾದಾಗ ಹೆಚ್ಚಿನ ಸಂಖ್ಯೆಯ ರೈತರು ಮರಗಳನ್ನು ಕೊಯ್ದು ಇಟ್ಟಿಗೆ ಸುಟ್ಟರು. ಆದರೆ ಇತ್ತೀಚಿನ ವರ್ಷಗಳಲ್ಲಿ ಹುಣಸೆ ಹಣ್ಣಿಗೆ ಹಿಂದಿನ ವೈಭವ ಬಂದಿದೆ. ಕಪ್ಪು ಬಂಗಾರ ಎಂದು ಕರೆಯಲ್ಪಡುವ ಹುಣಸೆ ಹಣ್ಣು ಒಳ್ಳೆ ಬೆಲೆಗೆ ಮಾರಾಟವಾಗುತ್ತಿದೆ. ಬೆಲೆ ಕಡಿಮೆ ಇರುವ ಸಂದರ್ಭದಲ್ಲಿ ಹಣ್ಣನ್ನು ಕಾಯ್ದಿರಿಸಿ ಮಾರುವ ಸೌಲಭ್ಯ ಇರುವುದರಿಂದ ಬೆಳೆಗಾರರಿಗೆ ಹೆಚ್ಚು ಅನುಕೂಲವಾಗಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಮರಗಳಲ್ಲಿ ಹುಣಸೆ ಕಾಯಿಯ ಫಸಲಿನ ಪ್ರಮಾಣ ದ್ವಿಗುಣವಾಗಿದೆ. ಸಾಮಾನ್ಯವಾಗಿ ಎಲ್ಲ ಮರಗಳಲ್ಲೂ ಉತ್ತಮ ಫಸಲಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry