ಭಾನುವಾರ, ನವೆಂಬರ್ 17, 2019
28 °C

ಶ್ರೀನಿವಾಸ್‌ಗಿಂತ ಭಾರತಿ ಆಸ್ತಿವಂತೆ

Published:
Updated:

ತುಮಕೂರು: ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಎರಡು ಸಲ ಶಾಸಕರಾಗಿ, ಮತ್ತೆ ಅದೃಷ್ಟ ಪರೀಕ್ಷೆಗಿಳಿದಿರುವ ಜೆಡಿಎಸ್ ಅಭ್ಯರ್ಥಿ ಎಸ್.ಆರ್.ಶ್ರೀನಿವಾಸ್ (ವಾಸು) ಅವರಿಗಿಂತ ಪತ್ನಿ ಭಾರತಿ ಸಿರಿವಂತಿಕೆಯಲ್ಲಿ ಮೇಲುಗೈ ಪಡೆದಿದ್ದಾರೆ.ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯಂತೆ ವಾಸು ಕೂಡ ಕೋಟಿ ವೀರರ ಸಾಲಿನಲ್ಲೇ ಬರುತ್ತಾರೆ. ಪತಿಗಿಂತ ಪತ್ನಿಯೇ ಸಿರಿವಂತೆ. ಸಾಲದಲ್ಲೂ ಭಾರತಿಯೇ ಮುಂದು.ಆದಾಯ ತೆರಿಗೆ ಪಾವತಿ ವೇಳೆ ನೀಡಿರುವಂತೆ ಕಳೆದ ವರ್ಷ ಶ್ರೀನಿವಾಸ್ ಆದಾಯ 12.98 ಲಕ್ಷ, ಪತ್ನಿಯದು 6.20 ಲಕ್ಷ.

ಶ್ರೀನಿವಾಸ್ ಬಳಿ 3.18 ಲಕ್ಷ ನಗದು ಇದ್ದರೆ, ಪತ್ನಿ ಬಳಿ ಕೇವಲ 25 ಸಾವಿರವಿದೆ. ವಿವಿಧ ಬ್ಯಾಂಕ್‌ಗಳಲ್ಲಿ ಶ್ರೀನಿವಾಸ್ 37 ಸಾವಿರ ಠೇವಣಿ ಹೊಂದಿದ್ದರೆ, ಪತ್ನಿ 4.94 ಲಕ್ಷ ಠೇವಣಿ ಇಟ್ಟಿದ್ದಾರೆ.ಬೈರವೇಶ್ವರ ಬ್ಯಾಂಕ್‌ನಲ್ಲಿ ಶ್ರೀನಿವಾಸ್ 44 ಸಾವಿರ ಹೂಡಿಕೆ ಮಾಡಿದ್ದರೆ, ಪತ್ನಿ ಸೌತ್ ಇಂಡಿಯನ್ ಬ್ಯಾಂಕ್, ಸಜಲನ್ ಎನರ್ಜಿ, ಟಿಜಿಎಂಸಿ, ಕೆಐಡಿಬಿ ಯಲ್ಲಿ ಒಟ್ಟು 18.52 ಲಕ್ಷ ಹೂಡಿದ್ದಾರೆ.ವಾಸು ಎಲ್‌ಐಸಿಯಲ್ಲಿ 17.80 ಲಕ್ಷ ಹೂಡಿದ್ದರೆ, ಭಾರತಿ 4.55 ಲಕ್ಷ ಹೂಡಿಕೆ ಮಾಡಿದ್ದಾರೆ. ವಾಸು ಬಳಿ ಮಹೀಂದ್ರಾ, ಹೊಂಡಾಯ್, ಹೊಂಡಾ ಡಿಯೋ ಇದ್ದರೆ, ಪತ್ನಿ ಟಯೋಟಾ ಇನ್ನೋವಾ ಮಾಲಕಿ.ವಾಸು ಬಳಿ ಗುಲಗಂಜಿ ಗಾತ್ರದ ಚಿನ್ನ ಇಲ್ಲ, ಆದರೆ ಮಂಜುಶ್ರೀ ಬಾರ್ ಅಂಡ್ ರೆಸ್ಟೋರೆಂಟ್, ಮಂಜುಶ್ರೀ, ಗುರುರಾಜ ವೈನ್ಸ್ ಹೊಂದಿದ್ದಾರೆ. ಪತ್ನಿ 400 ಚಿನ್ನಾಭರಣ, 3 ಕೆ.ಜಿ ಬೆಳ್ಳಿಯ ಒಡತಿ.ಎಂ.ಎಂ ಕಾವಲ್, ಎಂ.ಎಚ್.ಪಟ್ಟಣ, ಕಲ್ಲಿಪಾಳ್ಯ, ದೊಡ್ಡನಾರವಂಗಲದಲ್ಲಿ ವಾಸು ಹೊಂದಿರುವ 35 ಎಕರೆ ಕೃಷಿ ಭೂಮಿಯ ಮೌಲ್ಯ 40 ಲಕ್ಷ ಎಂದು ಘೋಷಿಸಿದ್ದಾರೆ. ಪತ್ನಿಗೆ ಹೆರೂರು ಬಳಿ 2 ಲಕ್ಷ ಮೌಲ್ಯದ 37 ಗುಂಟೆ ಭೂಮಿ ಇದೆ.ಗುಬ್ಬಿ ಪಟ್ಟಣ, ಬೆಂಗಳೂರು ಸರ್ಜಾಪುರ, ತುಮಕೂರು ಮಂಡಿಪೇಟೆಯಲ್ಲಿ ಶ್ರೀನಿವಾಸ್ ರೂ. 41.35 ಲಕ್ಷದ ಸ್ವತ್ತು ಹೊಂದಿದ್ದರೆ, ಪತ್ನಿ ತುಮಕೂರು ಬಟವಾಡಿ, ಮರಳೂರಿನಲ್ಲಿ ನಿವೇಶನ, ವಿದ್ಯಾನಗರದಲ್ಲಿ ಮನೆ, ಬೆಂಗಳೂರು ಸನ್ ಸಿಟಿಯ ಅಪಾರ್ಟ್‌ಮೆಂಟ್ ಸೇರಿದಂತೆ ರೂ. 56.24 ಲಕ್ಷ ಮೌಲ್ಯದ ಸ್ವತ್ತು ಹೊಂದಿದ್ದಾರೆ.ವಾಸು ಕೇವಲ ರೂ. 7.63 ಲಕ್ಷ ಸಾಲ ಹೊಂದಿದ್ದರೆ, ಪತ್ನಿ 62 ಲಕ್ಷ ಸಾಲ ಮಾಡುವ ಮೂಲಕ ಗಂಡನಿಗಿಂತ ಮುಂದಿದ್ದಾರೆ.

ಪ್ರತಿಕ್ರಿಯಿಸಿ (+)