ಮಂಗಳವಾರ, ನವೆಂಬರ್ 12, 2019
19 °C

ಶ್ರೀರಂಗನಾಥನ ಕೃಪೆ ಯಾರಿಗೆ?

Published:
Updated:

ಮಂಡ್ಯ: ಜಿಲ್ಲೆಗೆ ಮೊದಲ ಶಾಸಕಿ ನೀಡಿದ ಶ್ರೇಯ, ಮಹಿಳಾ ಜನಪ್ರತಿನಿಧಿಗಳು ಸತತವಾಗಿ 21 ವರ್ಷ ಅಧಿಕಾರ ನಡೆಸಿದ ಹಾಗೂ 45ಕ್ಕೂ ಹೆಚ್ಚು ವರ್ಷ ಒಂದೇ ಗ್ರಾಮದವರು ಅಧಿಪತ್ಯ ಸ್ಥಾಪಿಸಿದ ಕ್ಷೇತ್ರ ಶ್ರೀರಂಗಪಟ್ಟಣ.1972ರಲ್ಲೇ ಗೆದ್ದು ವಿಧಾನಸಭೆ ಪ್ರವೇಶಿಸಿದ ದಮಯಂತಿ ಬೋರೇಗೌಡರು ಜಿಲ್ಲೆಯ ಮೊದಲ ಶಾಸಕಿ ಎನ್ನುವ ಶ್ರೇಯಕ್ಕೆ ಭಾಜನರಾದರೇ, 1986- 2008ರ ವರೆಗೆ ಸತತ ಮಹಿಳಾ ಜನಪ್ರತಿನಿಧಿಗಳ ಅಧಿಕಾರ ಕಂಡಿತು.1952ರಿಂದ 2008ರವರೆಗೆ ಒಂದು ಉಪ ಚುನಾವಣೆ ಸೇರಿದಂತೆ ಒಟ್ಟು 14 ಚುನಾವಣೆಗಳು ನಡೆದಿದ್ದು, 7  ಬಾರಿ ಜನತಾ ಪರಿವಾರ, 5 ಬಾರಿ ಕಾಂಗ್ರೆಸ್, 2 ಬಾರಿ ಪಕ್ಷೇತರರಿಗೆ ಮತದಾರರು ಆಶೀರ್ವಾದ ಮಾಡಿದ್ದಾರೆ.ಎ.ಎಸ್.ಬಂಡಿಸಿದ್ದೇಗೌಡ ಕುಟುಂಬ 6 ಬಾರಿ (ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ 3ಬಾರಿ, ಎ.ಬಿ.ರಮೇಶ್ ಬಾಬು ಒಂದು ಬಾರಿ), ಎ.ಜಿ.ಚುಂಚೇ ಗೌಡ ಕುಟುಂಬ 2 ಬಾರಿ (ಪಾರ್ವತಮ್ಮ ಶ್ರೀಕಂಠಯ್ಯ ಒಮ್ಮೆ); ದಮಯಂತಿ ಬೋರೇಗೌಡ 2 ಬಾರಿ, ಕೆ.ಪುಟ್ಟಸ್ವಾಮಿ, ಎ.ಜಿ.ಬಂದೀಗೌಡ, ದೊಡ್ಡ ಬೋರೇ ಗೌಡ ಹಾಗೂ ಎಂ.ಶ್ರೀನಿವಾಸ್ ತಲಾ ಒಂದು ಬಾರಿ ಗೆಲುವು ಕಂಡಿದ್ದಾರೆ.ಅರಕೆರೆ, ಕಸಬಾ, ಕುರುಬರ ಶೆಟ್ಟಹಳ್ಳಿ, ಬೆಳಗೊಳ ಹೋಬಳಿಗಳನ್ನು ಒಳಗೊಂಡಿದ್ದು, ಕ್ಷೇತ್ರ ಪುನರ್ ವಿಂಗಡಣೆ ತರುವಾಯ ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಹೋಬಳಿಯೂ ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ.1952ರಲ್ಲಿ ಕಾಂಗ್ರೆಸ್‌ನ ಕೆ.ಪುಟ್ಟಸ್ವಾಮಿ, 1957ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಎ.ಜಿ.ಚುಂಚೇಗೌಡರು ಜಯಗಳಿಸಿದರು.1962ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಯುವ ಎ.ಜಿ.ಬಂದೀಗೌಡರು ತಮ್ಮ ಪ್ರತಿಸ್ಪರ್ಧಿ ಎ.ಜಿ.ಚುಂಚೇಗೌಡರ ಎದುರು ಚುನಾಯಿತರಾದರು. ಮೊದಲ ಮೂರು ಚುನಾವಣೆಗಳಲ್ಲಿ ಅರಕೆರೆ ಗ್ರಾಮದವರನ್ನೇ ಗೆಲ್ಲಿಸಿದ್ದ ಮತದಾರರು 1967ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಯತ್ತಗದಹಳ್ಳಿ ಗ್ರಾಮದ ಬಿ.ದೊಡ್ಡ ಬೋರೇಗೌಡರಿಗೆ ಒಲವು ತೋರಿದರು.1972ರಲ್ಲಿ ಕಾಂಗ್ರೆಸ್(ಆರ್)ನಿಂದ ಅಖಾಡಕ್ಕಿಳಿಯುವ ದಮಯಂತಿ ಬೋರೇಗೌಡರು ಚಲಾವಣೆಯಾಗುವ ಮತಗಳಲ್ಲಿ ಶೇ 46.71ರಷ್ಟು ಮತಗಳನ್ನು ಪಡೆದು ಗೆಲುವಿನ ನಗೆ ಚೆಲ್ಲಿದರು. ಪುರುಷ ಅಭ್ಯರ್ಥಿಗಳ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದರು.1978ರಲ್ಲಿ ಜನತಾ ಪಕ್ಷದ ಎಂ.ಶ್ರೀನಿವಾಸ್, 1983 ಮತ್ತು 85ರಲ್ಲಿ ಎ.ಎಸ್.ಬಂಡಿಸಿದ್ದೇಗೌಡರಿಗೆ ಆಶೀರ್ವಾದ ಮಾಡಿದರು.1985ರಲ್ಲಿ ಗೆದ್ದಿದ್ದ ಬಂಡಿಸಿದ್ದೇಗೌಡರು ನಂತರ ನಿಧನರಾದರು. 1986ರಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಬಂಡಿಸಿದ್ದೇಗೌಡರ ಪತ್ನಿ ವಿಜಯಲಕ್ಷ್ಮಿ ಅನುಕಂಪದ ಅಲೆಯಲ್ಲಿ ಭರ್ಜರಿ ಗೆಲುವು ಪಡೆಯುತ್ತಾರೆ. ಆ ನಂತರ ಕ್ಷೇತ್ರದಲ್ಲಿ ಮಹಿಳಾ ಶಕೆ ಪ್ರಾರಂಭವಾಗುತ್ತದೆ. 2004ರವರೆಗೆ ನಡೆಯುವ ಎಲ್ಲ ಚುನಾವಣೆಗಳಲ್ಲೂ `ಮಹಿಳಾ ಮಣಿ'ಗಳೇ ಅಧಿಪತ್ಯ ಸ್ಥಾಪಿಸಿದ್ದಾರೆ.1989ರಲ್ಲಿ ಕಾಂಗ್ರೆಸ್ ದಮಯಂತಿ ಬೋರೇಗೌಡ ಗೆದ್ದರೆ, 1994ರಲ್ಲಿ ಜನತಾ ದಳದ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡರಿಗೆ ಜಯ ಒಲಿಯುತ್ತದೆ. 1999ರಲ್ಲಿ ಪಾರ್ವತಮ್ಮ ಶ್ರೀಕಂಠಯ್ಯ ಅವರ `ಕೈ' ಪಕ್ಷವನ್ನು ಹಿಡಿಯುವ ಮತದಾರರು, 2004ರ ಚುನಾವಣೆಯಲ್ಲಿ ಮತ್ತೊಮ್ಮೆ ಜೆಡಿಎಸ್ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರಿಗೆ ನಿಷ್ಠೆ ತೋರುತ್ತಾರೆ. 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರೆಬೆಲ್ ಸ್ಟಾರ್ ಅಂಬರೀಷ್ ಅವರ ಎದುರು ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರ ಪುತ್ರ ಎ.ಬಿ.ರಮೇಶ್‌ಬಾಬು ಭರ್ಜರಿ ಗೆಲುವು ಪಡೆದರು.1989ರಲ್ಲಿ ಚುನಾವಣೆ ಅಖಾಡಕ್ಕೆ ಧುಮುಕುವ ರೈತ ನಾಯಕ ಕೆ.ಎಸ್.ನಂಜುಂಡೇಗೌಡ ನಂತರ ನಡೆಯುವ ಎಲ್ಲ ಚುನಾವಣೆಗಳಲ್ಲೂ ಸೋಲನ್ನಪ್ಪುತ್ತಾರೆ. ಆದರೆ ಅವರು, ಗಳಿಸುವ ಮತಗಳ ಸಂಖ್ಯೆ ಮಾತ್ರ ಪ್ರತಿ ಬಾರಿಯೂ ಏರಿಕೆಯಾಗುತ್ತಲೇ ಹೋಗುವುದು ಗಮನಾರ್ಹ.`ಮೈಸೂರು ಹುಲಿ' ಟಿಪ್ಪು ಸುಲ್ತಾನ್ ನಾಡಿನಲ್ಲಿ ಮತದಾರರ ಒಲವು ಯಾರಿಗಿದೆ ಎನ್ನುವುದೀಗ ಕೂತುಹಲ ಮೂಡಿಸಿದೆ.

 

ಪ್ರತಿಕ್ರಿಯಿಸಿ (+)