ಶುಕ್ರವಾರ, ನವೆಂಬರ್ 22, 2019
20 °C

`ಶ್ರೀರಂಗಪಟ್ಟಣದಲ್ಲಿ ನಿಜವಾದ ಅಭ್ಯರ್ಥಿ ಅಂಬರೀಷ್'

Published:
Updated:

ಶ್ರೀರಂಗಪಟ್ಟಣ: ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನಾನು ಸ್ಪರ್ಧೆ ನಡೆಸಿದ್ದರೂ ಕೆಪಿಸಿಸಿ ಉಪಾಧ್ಯಕ್ಷ ಅಂಬರೀಷ್ ಅವರೇ ಇಲ್ಲಿ ನಿಜವಾದ ಅಭ್ಯರ್ಥಿ ಎಂದು ಕಾಂಗ್ರೆಸ್ ಅಭ್ಯರ್ಥಿ ಎಸ್.ಎಲ್.ಲಿಂಗರಾಜು ಹೇಳಿದರು.ತಾಲ್ಲೂಕಿನ ಟಿ.ಎಂ.ಹೊಸೂರು, ಅಲ್ಲಾಪಟ್ಟಣ ಇತರೆಡೆ ಮಂಗಳವಾರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು. ಅಂಬರೀಷ್ ಅವರ ವರ್ಚಸ್ಸು ಹಾಗೂ ಕಾಂಗ್ರೆಸ್ ಪಕ್ಷದ ಜನಪ್ರಿಯತೆ ನನಗೆ ಅನುಕೂಲ ಆಗಲಿದೆ. ಕಳೆದ 25 ವರ್ಷಗಳಿಂದ ವಿವಿಧ ಸಂಘ, ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವುದು ಖಚಿತವಾಗಿದ್ದು, ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಚ್.ಬಿ.ಮಹೇಶ್, ಕಾರ್ಮಿಕ ಘಟಕದ ಅಧ್ಯಕ್ಷ ದೇವರಾಜು, ಲಾರಿ ಸ್ವಾಮಿಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಿಪ್ರಸನ್ನ, ಭೈರೇಗೌಡ ಇತರರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಎಸ್.ಎಚ್.ಸಾಯಿಕುಮಾರ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಎಸ್.ರಘು ಇತರರು ಸೋಮವಾರ ಕಾಂಗ್ರೆಸ್ ಪರ ಮತ ಯಾಚಿಸಿದರು.  ರವೀಂದ್ರ ಶ್ರೀಕಂಠಯ್ಯ ಪ್ರಚಾರ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಮಂಗಳವಾರ ಅರಕೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ನೇರಲಕೆರೆ, ಬಳ್ಳೇಕೆರೆ, ಗಾಮನಹಳ್ಳಿ, ಮಾರಸಿಂಗನಹಳ್ಳಿ, ಕೊಡಿಯಾ ಇತರ ಗ್ರಾಮಗಳಲ್ಲಿ ಪ್ರಚಾರ ನಡೆಯಿತು. ರವೀಂದ್ರ ಬೆಂಬಲಿಗರು ಬೈಕ್ ರ‌್ಯಾಲಿ ನಡೆಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಎ.ಆರ್.ಮರೀಗೌಡ, ತಾ.ಪಂ. ಸದಸ್ಯ ಸನಿತಾ ದಿವಾಕರ್ ಜತೆಗಿದ್ದರು.ಕಾಂಗ್ರೆಸ್ ಕಾರ್ಯಾಧ್ಯಕ್ಷ ಜೆಡಿಎಸ್ ತೆಕ್ಕೆಗೆ

ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಪೈ.ಮುಕುಂದ ತಮ್ಮ ಬೆಂಬಲಿಗರ ಜತೆ ಸೋಮವಾರ ಜೆಡಿಎಸ್‌ಗೆ ಸೇರ್ಪಡೆಯಾದರು.

ತಾಲ್ಲೂಕಿನ ಪಾಲಹಳ್ಳಿಯ ತಮ್ಮ ಸ್ವಗೃಹದಲ್ಲಿ, ಸಂಸದ ಎನ್.ಚೆಲುವರಾಯಸ್ವಾಮಿ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರಿದರು. ಅಗ್ರಹಾರ ಚಂದ್ರಶೇಖರ್, ಹೊಸೂರು ರೇವಣ್ಣ, ಹೆಬ್ಬಾಡಿಹುಂಡಿ ರಾಮೇಗೌಡ, ಇತರರು ಕೂಡ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು.ಸಂಸದ ಎನ್.ಚೆಲುವರಾಯಸ್ವಾಮಿ ಮಾತನಾಡಿ, ಬೆಂಗಳೂರು ಸೇರಿದಂತೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಕನಿಷ್ಠ 70 ಸ್ಥಾನಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಹೈದ್ರಾಬಾದ್ ಕರ್ನಾಟಕದಲ್ಲಿ 40 ಹಾಗೂ ಮುಂಬೈ ಕರ್ನಾಟಕದಲ್ಲಿ 10ಕ್ಕೂ ಹೆಚ್ಚು ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಹಾಗಾಗಿ ನಮ್ಮ ಪಕ್ಷ ಸ್ವತಂತ್ರವಾಗಿ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದರು. ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಎಸ್.ಚಂದ್ರಶೇಖರ್, ಮನ್‌ಮುಲ್ ನಿರ್ದೇಶಕ ಬಿ.ಬೋರೇಗೌಡ ಇತರರು ಇದ್ದರು.ರಮೇಶ ಬಂಡಿಸಿದ್ದೇಗೌಡ ಪ್ರಚಾರ

ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಮೇಶ ಬಂಡಿಸಿದ್ದೇಗೌಡ ಬುಧವಾರ ಕ್ಷೇತ್ರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.

  ಪಟ್ಟಣದ ರಂಗನಾಥನಗರ, ಬೂದಿಗುಂಡಿ, ಜೈನ ಬಸದಿ ಬಡಾವಣೆಗಳಲ್ಲಿ ಅವರು ತಮ್ಮ ಬೆಂಬಲಿಗರ ಜತೆಗೂಡಿ ಮತ ಯಾಚಿಸಿದರು. ಪುರಸಭೆ ಸದಸ್ಯರು, ಮಾಜಿ ಸದಸ್ಯರು ಶಾಸಕರ ಜತೆಗಿದ್ದರು. ಇಲ್ಲಿಗೆ ಸಮೀಪದ ತೂಬಿನಕೆರೆ, ಉರಮಾರಕಸಲಗೆರೆ, ಎಲೆಚಾಕನಹಳ್ಳಿ, ರಾಗಿಮುದ್ದನಹಳ್ಳಿ ಇತರೆಡೆ ಅವರು ಪ್ರಚಾರ ಕೈಗೊಂಡರು.ನನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನನ್ನ ತಾಯಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಕ್ಷೇತ್ರದಲ್ಲಿ ಹತ್ತಾರು ಸರ್ಕಾರಿ ಶಾಲೆ, ಕಾಲೇಜುಗಳನ್ನು ತಂದಿದ್ದಾರೆ. ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ. ರಸ್ತೆಗಳು ಅಭಿವೃದ್ಧಿಯಾಗಿವೆ ಎಂದರು.ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾದರೆ ಕ್ಷೇತ್ರ ಮತ್ತಷ್ಟು ಪ್ರಗತಿಯಾಗಲಿದೆ. ಹಾಗಾಗಿ ಜೆಡಿಎಸ್‌ಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)