ಭಾನುವಾರ, ಡಿಸೆಂಬರ್ 8, 2019
25 °C
ದಸರಾ ಕ್ರೀಡೆ ನಡೆದು ಬಂದ ಹಾದಿ... ಭಾಗ–2

ಶ್ರೀರಂಗಪಟ್ಟಣದಿಂದ ಮೈಸೂರಿಗೆ...

Published:
Updated:
ಶ್ರೀರಂಗಪಟ್ಟಣದಿಂದ ಮೈಸೂರಿಗೆ...

ವಿಜಯನಗರ ಸಾಮ್ರಾಜ್ಯದ ಕೊನೆಯ   ದಿನಗಳಲ್ಲಿ ಮೈಸೂರಿಗೆ ಸಮೀಪದ  ಶ್ರೀರಂಗಪಟ್ಟಣದಲ್ಲಿ ಇದ್ದ ಅರಸರು ಪ್ರವರ್ಧಮಾನಕ್ಕೆ ಬಂದರು. ಈ ಅರಸರು   ಕ್ರೀಡೆಗಳಿಗೆ ಉತ್ತೇಜನ ಕೊಡಲು ಆರಂಭಿಸಿದರು.  ಶ್ರೀರಂಗಪಟ್ಟಣದಲ್ಲಿ ಕುಸ್ತಿ, ಜಟ್ಟಿ ಕಾಳಗ, ಕತ್ತಿ ವರಸೆ, ವಿವಿಧ ಬಗೆಯ ಕಸರತ್ತುಗಳಿಗೆ ಪ್ರೋತ್ಸಾಹ ಮುಂದುವರೆಯಿತು.

  ಈ ಸಂಸ್ಥಾನದ ಆಡಳಿತ ಕೇಂದ್ರ ಚಾಮುಂಡಿ ಬೆಟ್ಟದ ತಪ್ಪಲಿನ ‘ಮಹಿಷೂರು’ಗೆ ಸ್ಥಳಾಂತರಗೊಂಡಿತು. ಅಲ್ಲಿಯೂ ಕ್ರೀಡಾ ಚಟುವಟಿಕೆಗಳು ಹೊಸ ಆಯಾಮ ಕಂಡುಕೊಂಡವು.  ಯದು ವಂಶದ ದೊರೆಗಳು ಆಟೋಟಗಳಿಗೆ ಉತ್ತೇಜನ ನೀಡುವುದರ ಜೊತೆಗೆ ತಾವೇ ಕುಸ್ತಿ, ಕತ್ತಿವರಸೆ, ಕುದುರೆ ಸವಾರಿ ಮೊದಲಾದ  ಕ್ರೀಡೆಗಳಲ್ಲಿ ಸ್ವತಃ ಪರಿಶ್ರಮ ಹೊಂದಿದ್ದು ಇದಕ್ಕೆ ಕಾರಣವಾಗಿತ್ತು. ವಿಜಯನಗರದ ಸಾಮ್ರಾಜ್ಯದಲ್ಲಿ ನವರಾತ್ರಿ ಸಂದರ್ಭಕ್ಕೆ ನಡೆಯುತ್ತಿದ್ದ  ಕ್ರೀಡಾ ಚಟುವಟಿಕೆಗಳು ಮೈಸೂರು ಅರಸರ  ಕಾಲದಲ್ಲಿ ಮತ್ತಷ್ಟು ವೈಭವದಿಂದ ಗರಿಕೆದರಿದವು.  ಮೈಸೂರಿನಲ್ಲಿ ಕುಸ್ತಿಗೆ ಹಾಗೂ ಜಟ್ಟಿ ಕಾಳಗಕ್ಕೆ ಹೆಚ್ಚಿನ ಬೆಂಬಲ ಸಿಕ್ಕಿದ್ದರ ಪರಿಣಾಮವಾಗಿ ಹಲವಾರು ಅಖಾಡಗಳು ನಗರದ ವಿವಿಧ ಭಾಗಗಳಲ್ಲಿ ಸ್ಥಾಪನೆಗೊಂಡವು.  ಯುವ ಸಮೂಹವು ದೇಹ ದಾಢ್ರ್ಯ ಉತ್ತಮ ಪಡಿಸಿಕೊಳ್ಳುವುದರ ಜೊತೆಗೆ ಅರಸರ ಪ್ರೋತ್ಸಾಹದಿಂದ ಜರುಗುತ್ತಿದ್ದ ಕುಸ್ತಿ ಸ್ಪರ್ಧೆಗಳಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸಲು ಆಸಕ್ತಿ ತೋರಿತು.ದೇಶದ ಪ್ರಖ್ಯಾತ  ಪೈಲ್ವಾನರು ಮೈಸೂರಿನಲ್ಲಿ ನಡೆಯುತ್ತಿದ್ದ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಬರುತ್ತಿದ್ದರು.  ದಸರಾ ಸಂದರ್ಭದಲ್ಲಂತೂ ಕುಸ್ತಿ ಪ್ರೇಮಿಗಳಿಗೆ ಹಬ್ಬವೋ ಹಬ್ಬ.   ಬ್ರಿಟಿಷರ ಕಾಲದಲ್ಲಿ ಹಾಕಿ, ಫುಟ್‌ಬಾಲ್‌, ಕ್ರಿಕೆಟ್ ಮೊದಲಾದ ಕ್ರೀಡೆಗಳು ಮೈಸೂರಿನಲ್ಲಿ ಆರಂಭಗೊಂಡವು. ಸ್ವಾತಂತ್ರ್ಯಾ ನಂತರ ಮೈಸೂರು ಅರಸರು ದಸರಾ ಕ್ರೀಡೆಗಳನ್ನು ಮುನ್ನಡೆಸಿದರೂ ಅದಕ್ಕೊಂದು ಸ್ಪಷ್ಟ ಪರಿಕಲ್ಪನೆ ಸಿಕ್ಕಿದ್ದು ಕನ್ನಡ ನಾಡಿನ ಏಕೀಕರಣದ ನಂತರದ ವರ್ಷಗಳಲ್ಲಿ.  ಅದಕ್ಕೆ ಮೊದಲು ಮೈಸೂರು ಅರಮನೆ ಆವರಣದಲ್ಲಿ ದಸರಾ ಸಂದರ್ಭಕ್ಕೆ ಜರುಗುತ್ತಿದ್ದ ಜಟ್ಟಿ ಕಾಳಗ, ಕುಸ್ತಿ ಪಂದ್ಯಾವಳಿಗಳೇ ಪ್ರಮುಖ ಕ್ರೀಡಾ ಸ್ಪರ್ಧೆಗಳಾಗಿದ್ದವು. ಏಕೀಕರಣದ ನಂತರ ಸ್ವತಃ ಕ್ರೀಡಾಪಟುವೂ ಆಗಿದ್ದ ಜನ ನೇತಾರ ಸಾಹುಕಾರ್ ಚನ್ನಯ್ಯನವರು ಕುಸ್ತಿ ಹಾಗೂ ಇನ್ನಿತರ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ ನವರಾತ್ರಿಗಳಲ್ಲಿ ಕ್ರೀಡಾ ಸ್ಪರ್ಧೆಗಳನ್ನು ವ್ಯವಸ್ಥೆ ಮಾಡಲು ಕಾರಣರಾದರು.  ಏಕೀಕರಣದ ನಂತರ ರಾಜ್ಯದಲ್ಲಿ ಅಸ್ಥಿತ್ವದಲ್ಲಿದ್ದ ವಿವಿಧ ಕ್ರೀಡಾ ಸಂಘಗಳು ದಸರಾ ಸಂದರ್ಭದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲು ಪ್ರಾರಂಭಿಸಿದವು.  ಪ್ರಾಚೀನ ಕ್ರೀಡೆಗಳ ಜೊತೆಗೆ ಆಧುನಿಕ ಆಟೋಟ ಸ್ಪಧರ್ೆಗಳು ದಸರಾ ಸಂದರ್ಭದಲ್ಲಿ ಅನಾವರಣಗೊಳ್ಳುವುದರ ಜೊತೆಗೆ ತಾಲ್ಲೂಕು, ಜಿಲ್ಲೆ, ವಿಭಾಗಮಟ್ಟಗಳಲ್ಲಿಯೂ ದಸರಾ ಕ್ರೀಡಾ ಸ್ಪರ್ಧೆಗಳು ಶುರುವಾದವು.  ಆವರೆಗೂ ಈ ಕ್ರೀಡೆಗಳಿಗೆ ಸಂಘಟಿತ ರೂಪವಿಲ್ಲದಿದ್ದರೂ ದಸರಾ ಸಂದರ್ಭದಲ್ಲಿ ಜರುಗುತ್ತಿದ್ದ ಕ್ರೀಡೆಗಳು ಜನಪ್ರಿಯವಾಗಿದ್ದವು. 

-ಜೆ.ಪಿ.

ಪ್ರತಿಕ್ರಿಯಿಸಿ (+)