ಶ್ರೀರಂಗಪಟ್ಟಣ- ಕೆಆರ್‌ಎಸ್ ರಸ್ತೆ ಅಭಿವೃದ್ಧಿಗೆ ಆಗ್ರಹ

7

ಶ್ರೀರಂಗಪಟ್ಟಣ- ಕೆಆರ್‌ಎಸ್ ರಸ್ತೆ ಅಭಿವೃದ್ಧಿಗೆ ಆಗ್ರಹ

Published:
Updated:

ಶ್ರೀರಂಗಪಟ್ಟಣ: ತಾಲ್ಲೂಕಿನ ಪಶ್ಚಿಮ ವಾಹಿನಿಯಿಂದ ಕೆಆರ್‌ಎಸ್‌ವರೆಗಿನ ರಸ್ತೆ ತೀರ ಹದಗೆಟ್ಟಿದ್ದು ಪ್ರವಾಸಿಗರು ಹಾಗೂ ಸ್ಥಳೀಯ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ವಾಹನ ದಟ್ಟಣೆ ಇರುವ ಈ ರಸ್ತೆಯನ್ನು ಶೀಘ್ರ ಅಭಿವೃದ್ಧಿ ಮಾಡಬೇಕು ಎಂದು ವಿವಿಧ ಗ್ರಾಮಗಳ ಜನ ಆಗ್ರಹಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿಗೆ ಸೋಮವಾರ ಕಾಂಗ್ರೆಸ್ ಮುಖಂಡರ ಜತೆ ತೆರಳಿ ಸಹಾಯಕ ಎಂಜಿನಿಯರ್ ಸುನಿಲ್ ಅವರಿಗೆ ಮನವಿ ಸಲ್ಲಿಸಿದರು.ಶ್ರೀರಂಗಪಟ್ಟಣ- ಕೆಆರ್‌ಎಸ್ ರಸ್ತೆ ಪಾಲಹಳ್ಳಿ, ಪಿ.ಹೊಸಹಳ್ಳಿ, ಬೆಳಗೊಳ, ಹುಲಿಕೆರೆ ಬಳಿ ತೀರ ಹಾಳಾಗಿದೆ. ಬೆಳಗೊಳ ಪೇಪರ್‌ಮಿಲ್ ಬಳಿ, ವರುಣಾ ನಾಲೆ ಸಮೀಪ ಇನ್ನಿಲ್ಲದಂತೆ ಕೆಟ್ಟಿದೆ. ಈ ಸಂಬಂಧ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ರಸ್ತೆಗೆ ಮಣ್ಣು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಬೆಳಗೊಳದ ವಿಷಕಂಠೇಗೌಡ ಇತರರು ದೂರಿದರು. ರಸ್ತೆ ಹದಗೆಟ್ಟಿರುವುದರಿಂದ ಕೆಆರ್‌ಎಸ್‌ಗೆ ಭೇಟಿ ನೀಡುವ ಪ್ರವಾಸಿಗರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಸಂಜೆ ವೇಳೆ ಬೈಕ್ ಹಾಗೂ ಸೈಕಲ್‌ಗಳಲ್ಲಿ ಸಂಚರಿಸುವವರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಜಮೀನುಗಳಿಗೆ ಹೋಗುವ ರೈತರಿಗೂ ತೊಂದರೆಯಾಗಿದೆ. ಹಾಗಾಗಿ ಈ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು. ತಡ ಮಾಡಿದರೆ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಪುಟ್ಟೇಗೌಡ, ಪ್ರಧಾನ ಕಾರ್ಯದರ್ಶಿ ಟಿ.ಎಂ. ಹೊಸೂರು ಮಹೇಶ್ ಇತರರು ಎಚ್ಚರಿಸಿದರು. ಎನ್.ಗಂಗಾಧರ್, ಶೀಲಾ ನಂಜುಂಡಯ್ಯ, ಮಹದೇವಪುರ ವಿನಯಕುಮಾರ್, ಮಹದೇವಸ್ವಾಮಿ, ಪೈ.ಹನುಮಂತು, ನಾಗರಾಜು, ಶಿವಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry