ಶ್ರೀರಂಗಪಟ್ಟಣ: ನದಿಗಿಳಿದು ಪ್ರತಿಭಟಿಸಿದ ರೈತರು

7

ಶ್ರೀರಂಗಪಟ್ಟಣ: ನದಿಗಿಳಿದು ಪ್ರತಿಭಟಿಸಿದ ರೈತರು

Published:
Updated:
ಶ್ರೀರಂಗಪಟ್ಟಣ: ನದಿಗಿಳಿದು ಪ್ರತಿಭಟಿಸಿದ ರೈತರು

ಶ್ರೀರಂಗಪಟ್ಟಣ: ತಾಲ್ಲೂಕಿನ ಕೃಷ್ಣರಾಜ ಸಾಗರ ಜಲಾಶಯದಿಂದ ಶುಕ್ರವಾರ ತಡರಾತ್ರಿಯಿಂದ ಶನಿವಾರ ಮುಂಜಾನೆ ವರೆಗೆ 23 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಇದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ಶನಿವಾರ ಮುಂಜಾನೆ ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದರು.ಕೆಆರ್‌ಎಸ್ ಜಲಾಶಯದ ಹೊರಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿರುವ ಸುದ್ದಿ ತಿಳಿದು ಆಗಮಿಸಿದ ರೈತರು ಉತ್ತರ ಕಾವೇರಿ ಸೇತುವೆ ಬಳಿ ನದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.`ಕಾವೇರಿ ನದಿ ಪ್ರಾಧಿಕಾರದ ಸೂಚನೆಯಂತೆ 9 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿತ್ತು. ಆದರೆ ಶುಕ್ರವಾರ ರಾತ್ರಿ 10 ಗಂಟೆಯಿಂದ ಶನಿವಾರ ಮುಂಜಾನೆ 6 ಗಂಟೆವರೆಗೆ 23 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಿದೆ. ರೈತರ ಪರವಾಗಿದ್ದೇನೆ ಎಂದು ಹೇಳುವ ಮುಖ್ಯಮಂತ್ರಿಯವರ ಬಣ್ಣ ಬಯಲಾಗಿದೆ. ಮಾತಿಗೆ ತಪ್ಪಿರುವ ಮುಖ್ಯಮಂತ್ರಿಯವರು ತಕ್ಷಣ ರಾಜೀನಾಮೆ ನೀಡಬೇಕು~ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಆಗ್ರಹಿಸಿದರು.ರೈಲು ತಡೆ: ನದಿಯಿಂದ ಹೊರಬಂದ ರೈತರು ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದರಲ್ಲದೆ, ರೈಲು ನಿಲ್ದಾಣಕ್ಕೂ ಮುತ್ತಿಗೆ ಹಾಕಿದರು. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕಾವೇರಿ ಎಕ್ಸ್‌ಪ್ರೆಸ್ ರೈಲನ್ನು 10 ನಿಮಿಷಗಳ ಕಾಲ ತಡೆದು ಪ್ರತಿಭಟನೆ ನಡೆಸಿದರು.ಬಂಧನ: ರೈಲು ತಡೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಇವರಲ್ಲಿ ಕೆ.ಎಸ್.ನಂಜುಂಡಗೌಡ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಕೆಂಪೇಗೌಡ, ನಾಗೇಂದ್ರಸ್ವಾಮಿ, ಪಾಂಡು, ಬಿ.ಎಸ್.ರಮೇಶ್, ಕಡತನಾಳು ಬಾಬು, ಬಿ.ಸಿ.ಕೃಷ್ಣೇಗೌಡ, ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಕಿರಂಗೂರು ಕುಮಾರಸ್ವಾಮಿ, ಕರವೇ ತಾಲ್ಲೂಕು ಅಧ್ಯಕ್ಷ ಕೆ.ಬಿ.ಬಸವರಾಜು, ಅಶೋಕ್, ಶ್ರೀನಿವಾಸ್ ಮತ್ತಿತರರು ಸೇರಿದ್ದರು. ಇವರನ್ನು ಟಿಎಪಿಸಿಎಂಎಸ್ ಭವನದಲ್ಲಿ ಕೂಡಿ ಹಾಕಿ ಒಂದೂವರೆ ತಾಸಿನ ನಂತರ ಬಿಡುಗಡೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry