ಶ್ರೀರಂಗಪಟ್ಟಣ: ಹಸೆಮಣೆ ಏರಿದ ರಷ್ಯಾ ಜೋಡಿ

7

ಶ್ರೀರಂಗಪಟ್ಟಣ: ಹಸೆಮಣೆ ಏರಿದ ರಷ್ಯಾ ಜೋಡಿ

Published:
Updated:

ಶ್ರೀರಂಗಪಟ್ಟಣ: ವೈದಿಕ ಜೀವನ ಪದ್ಧತಿಗೆ ಮಾರು ಹೋಗಿರುವ ರಷ್ಯಾ ದೇಶದ ಅಲೆಗ್ಸಾಂಡರ್ ಹಾಗೂ ಅವರ ಗೆಳತಿ ಮರಿಯಾ ಭಾನುವಾರ ಹಿಂದೂ ವಿವಾಹ ಪದ್ಧತಿಯಂತೆ ಹೊಸ ಜೀವನಕ್ಕೆ ಕಾಲಿರಿಸಿದರು.ಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೆಳಿಗ್ಗೆ 10.30ರ ಧನುರ್ ಲಗ್ನದಲ್ಲಿ ಅಲೆಗ್ಸಾಂಡರ್ (ವೆಂಕಟೇಶ ಶರ್ಮಾ) ನೀಲಿ ಕಂಗಳ ಚೆಲುವೆ ಮರಿಯಾ (ಯೋಗೇಶ್ವರಿ) ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದರು. 41 ವರ್ಷದ ಅಲೆಗ್ಸಾಂಡರ್ 28 ವರ್ಷದ ಮರಿಯಾ ಅವರನ್ನು ವರಿಸಿದರು.ತಾಳಿ ಕಟ್ಟುವ ವೇಳೆ ಮಂತ್ರಘೋಷ, ಮಂಗಳವಾದ್ಯ ಮೊಳಗಿದವು. ಪರಸ್ಪರ ಮಾಲೆ ಬದಲಾಯಿಸಿಕೊಂಡ ಈ ಜೋಡಿ ಕೈ ಕೈ ಹಿಡಿದು ಸಪ್ತಪದಿ ತುಳಿಯಿತು. ವೃಷಭ ರಾಶಿಯ ರೋಹಿಣಿ ನಕ್ಷತ್ರಕ್ಕೆ ಸಲ್ಲುವ ವಿಧಿಯಂತೆ ಅಗ್ನಿಸಾಕ್ಷಿಯಾಗಿ ಪಾಣಿಗ್ರಹಣ ನಡೆಯಿತು. ಮರಿಯಾ ಪರವಾಗಿ ಸ್ಥಳೀಯರು ಕನ್ಯಾದಾನ ನೆರವೇರಿಸಿದರು. ಮೈಸೂರು ಪೇಟ, ಬಾಸಿಂಗ, ಕೆಂಪು ಅಂಚಿನ ಹಳದಿ ಪಂಚೆ, ಯಜ್ಞೋಪವೀತ ಧರಿಸಿದ್ದ ಅಲೆಗ್ಸಾಂಡರ್ ಅಪ್ಪಟ ಭಾರತೀಯನಂತೆ ಕಂಡುಬಂದರು. `ದೇವೇಂದ್ರ ನಭಸ್ತುಭ್ಯಂ, ದೇವೇಂದ್ರ ಪ್ರಿಯ ಭಾಮಿನಿ ವಿವಾಹಂ'... ಎಂಬ ಸಂಸ್ಕೃತ ಶ್ಲೋಕ ಹೇಳಿ ಅಚ್ಚರಿ ಮೂಡಿಸಿದರು.ಮಧುವಣಗಿತ್ತಿ ಮರಿಯಾ ಕೆಂಪು ಝರಿ ಸೀರೆ, ಅದೇ ಬಣ್ಣದ ಕುಪ್ಪುಸ ತೊಟ್ಟು ಕಂಗೊಳಿಸಿದರು. ಬಳೆ, ಓಲೆ, ಸೊಂಟದ ಡಾಬುಗಳು ಶ್ವೇತಸುಂದರಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದವು. ಮರಿಯಾ ತಮ್ಮ ಕರಗಳಿಗೆ ಹಚ್ಚಿದ್ದ ಮೆಹಂದಿ ಮೆರಗು ನೀಡಿತ್ತು. ಸಪ್ತಪದಿಯ ನಂತರ ವಧು ಮರಿಯಾ ವರನ ತೊಡೆಯೇರಿ ಕುಳಿತರು.

ಅಲೆಗ್ಸಾಂಡರ್ ಮರಿಯಾಗೆ ಕಾಲುಂಗುರ ತೊಡಿಸಿ, ತಿಲಕವಿಟ್ಟು ಸಹಧರ್ಮಿಣಿಯಾಗಿ ಸ್ವೀಕರಿಸಿದರು. ನವ ದಂಪತಿಗೆ ಪಟ್ಟಣದ ಮಹಿಳೆಯರು, ಪುರೋಹಿತರು ಅಕ್ಷತೆ ಹಾಕಿ ಆಶೀರ್ವದಿಸಿದರು. ಮರಿಯಾ ಸಂಬಂಧಿಕರಾದ ರಷ್ಯಾದ ಲೀನಾ ಮತ್ತು ಮರೀನಾ ವಿವಾಹಕ್ಕೆ ಸಾಕ್ಷಿಯಾದರು.ಡಾ.ಭಾನುಪ್ರಕಾಶ್ ನೇತೃತ್ವದ ವೈದಿಕರ ತಂಡ ಪಂಚಗವ್ಯ, ಗಣಪತಿ ಹೋಮ, ಪುಣ್ಯಾಹ, ಕಾಶಿಯಾತ್ರೆ, ರಕ್ಷಾ ಬಂಧನ, ಪ್ರವರ ಪಾರಾಯಣ, ವಾಕ್ ನಿಶ್ಚಯ, ಗೌರಿ ಪೂಜೆ, ಲಾಜಾ ಹೋಮ ಇತರ ವೈವಾಹಿಕ ವಿಧಿಗಳನ್ನು ನೆರವೇರಿಸಿತು. ಮಹಿಳೆಯರು ಮರಿಯಾ ಮಡಿಲಿಗೆ ಸೋಗಲಕ್ಕಿ ಹಾಕುವ ಶಾಸ್ತ್ರ ಪೂರೈಸಿದರು. ಸ್ಥಳೀಯರು ಸಂಪ್ರದಾಯದಂತೆ ನವ ದಂಪತಿಗೆ `ಮುಯ್ಯಿ' ಕೊಟ್ಟರು.`ನನಗೆ ವೇದಗಳ ಬಗ್ಗೆ ಆಸಕ್ತಿ ಇದೆ. ಯಜುರ್ವೇದ ಅಧ್ಯಯನ ಮಾಡುತ್ತಿದ್ದೇನೆ. ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದು ಸಂತಸ ತಂದಿದೆ. ವೇದಗಳ ತಾಯ್ನಾಡು ಭಾರತದಲ್ಲಿ ಪತ್ನಿಯ ಜತೆ ಕಾಯಂ ಆಗಿ ನೆಲೆಸುವ ಆಸೆ ನನ್ನದು' ಎಂದು ಅಲೆಗ್ಸಾಂಡರ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry